ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇಂದು(ಫೆ.05) ರಾಜೀನಾಮೆ ನೀಡುವ ಪ್ರಯುಕ್ತ ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಸೋಮವಾರವೇ ನ್ಯಾಯಮೂರ್ತಿಯ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿದ್ದರು. ಕೆಲವು ವಕೀಲರು ಹಾಗೂ ಕಕ್ಷೀದಾರರು ತಮ್ಮ ನಿರ್ಧಾರವನ್ನು ಬದಲಿಸುವಂತೆ ಮನವಿ ಮಾಡಿದರು.
ನಿರ್ಧಾರ ಬದಲಿಸಲು ಮನವಿ ಮಾಡಿದ ವಕೀಲರು ಹಾಗೂ ಕಕ್ಷೀದಾರರ ಹೊರತಾಗಿಯೂ ತಮಗೆ ಅನ್ಯ ಕೆಲಸವಿರುವ ಕಾರಣ ರಾಜೀನಾಮೆ ನೀಡಿರುವುದಾಗಿ ಅಭಿಜಿತ್ ಗಂಗೋಪಾಧ್ಯಾಯ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಳ್ಳು ಸೃಷ್ಟಿಸಿ, ಬೆಂಕಿ ಹಚ್ಚಿ, ಭಯ ಬಿತ್ತುವವರು ಯಾರು?
ನ್ಯಾಯಮೂರ್ತಿ ಗಂಗೋಪಾದ್ಯಾಯ ಅವರು ಶಿಕ್ಷಣಕ್ಕೆ ಸಂಬಂಧಿಸಿದಂತೆ ನೀಡಿರುವ ಹಲವು ತೀರ್ಪುಗಳು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಎಬ್ಬಿಸಿವೆ. ಫೆ.3 ರಂದು ತಮ್ಮ ಹುದ್ದೆಗೆ ರಾಷ್ಟ್ರಪತಿಯವರಿಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು.
ರಾಜೀನಾಮೆ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗಂಗೋಪಾದ್ಯಾಯ ಅವರು ತಾವು ರಾಜಕೀಯ ಸೇರ್ಪಡೆಯಾಗುವ ಉದ್ದೇಶದ ಬಗ್ಗೆ ನಿರಾಕರಿಸಿದರು.
ಗಂಗೋಪಾದ್ಯಾಯ ಅವರು 24 ವರ್ಷಗಳ ವಕೀಲ ವೃತ್ತಿಯನ್ನು ಮಾಡಿದ ನಂತರ 2018 ಮೇ.02 ರಂದು ಕಲ್ಕತ್ತಾ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಸೇರ್ಪಡೆಯಾದರು. 2020, ಜುಲೈ 30 ರಂದು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲಾಯಿತು.
