ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಇಂದು (ಮೇ 14) ದೇಶದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೇ 13ರಂದು ಸಂಜೀವ್ ಖನ್ನಾ ಅವರು ನಿವೃತ್ತಿ ಹೊಂದಿದ್ದು ಇಂದಿನಿಂದ ಗವಾಯಿ ಸಿಜೆಐ ಆಗಲಿದ್ದಾರೆ.
ಅವರ ನೇಮಕಾತಿಯನ್ನು ಸುಪ್ರೀಂ ಕೋರ್ಟ್ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಎಂದೇ ಪರಿಗಣಿಸಬಹುದು. ನಿವೃತ್ತ ಸಿಜೆಐ ಕೆ ಜಿ ಬಾಲಕೃಷ್ಣನ್ ನಂತರ ಸುಪ್ರೀಂ ಕೋರ್ಟ್‌ನ ಉನ್ನತ ಸ್ಥಾನವನ್ನು ತಲುಪಿದ ಪರಿಶಿಷ್ಟ ಜಾತಿ ಸಮುದಾಯದ ಎರಡನೇ ವ್ಯಕ್ತಿ ನ್ಯಾಯಮೂರ್ತಿ ಗವಾಯಿ.
ಇದನ್ನು ಓದಿದ್ದೀರಾ? ಸಂವಿಧಾನ ‘ಭೀಮಸ್ಮೃತಿ’ ಎನ್ನುವ ಸಿಜೆಐ- ತಳಸ್ತರದ ಅಸಹಾಯಕರ ನ್ಯಾಯ ಪ್ರತಿಪಾದಕ
ನ್ಯಾಯಮೂರ್ತಿ ಗವಾಯಿ ಅವರು ಹಲವು ರಾಜ್ಯಗಳ ರಾಜ್ಯಪಾಲರಾಗಿದ್ದ ಪ್ರಸಿದ್ಧ ರಾಜಕಾರಣಿ ಆರ್ ಎಸ್ ಗವಾಯಿ ಅವರ ಪುತ್ರ. 1960ರ ನವೆಂಬರ್ 24ರಂದು ಅಮರಾವತಿಯಲ್ಲಿ ಜನಿಸಿದ ನ್ಯಾಯಮೂರ್ತಿ ಗವಾಯಿ ಅವರ ಬಾಲ್ಯದ ಬಹುಪಾಲು ಅಮರಾವತಿಯ ಫ್ರೆಝರ್‌ಪುರದ ಸ್ಲಮ್‌ನಲ್ಲಿ ಕಳೆಯಿತು.
ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಬಿಎ ಎಲ್‌ಎಲ್‌ಬಿ ಪದವಿಯನ್ನು ಪೂರ್ಣಗೊಳಿಸಿದರು. ಅದಾದ ನಂತರ 1985ರ ಮಾರ್ಚ್ 16ರಂದು ವೃತ್ತಿ ಜೀವನ ಆರಂಭಿಸಿದರು. ಮಹಾರಾಷ್ಟ್ರದ ಮಾಜಿ ಅಡ್ವೊಕೇಟ್ ಜನರಲ್ ಮತ್ತು ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ ದಿವಂಗತ ರಾಜಾ ಎಸ್ ಭೋಂಸ್ಲೆ ಅವರೊಂದಿಗೆ 1987ರವರೆಗೆ ಕಾರ್ಯನಿರ್ವಹಿಸಿ ತಮ್ಮ ಕಾನೂನು ವೃತ್ತಿಜೀವನಕ್ಕೆ ಅಡಿಪಾಯ ಹಾಕಿಕೊಂಡರು.
“Shri Justice Bhushan Ramkrishna Gavai sworn in as the Chief Justice of the Supreme Court of India at Rashtrapati Bhavan,” posts President of India (@rashtrapatibhvn) pic.twitter.com/zJjD8bxHzJ
— Press Trust of India (@PTI_News) May 14, 2025
ಅದಾದ ಬಳಿಕ 1987ರಿಂದ 1990ರವರೆಗೆ ಬಾಂಬೆ ಹೈಕೋರ್ಟ್‌ನಲ್ಲಿ ಸ್ವತಂತ್ರ ವಕೀಲಿ ವೃತ್ತಿ ನಡೆಸಿದರು. 1990ರ ನಂತರ ಅವರು ಮುಖ್ಯವಾಗಿ ಬಾಂಬೆ ಹೈಕೋರ್ಟ್‌ನ ನಾಗ್ಪುರ ನ್ಯಾಯಪೀಠದಲ್ಲಿ ಅಭ್ಯಾಸ ಮಾಡಿದರು. 2023ರ ನವೆಂಬರ್ 14ರಂದು ನ್ಯಾಯಮೂರ್ತಿ ಗವಾಯಿ ಅವರನ್ನು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿ ನೇಮಿಸಲಾಯಿತು. 2005ರ ನವೆಂಬರ್ 12ರಂದು ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾದರು.
ಹೈಕೋರ್ಟ್ ನ್ಯಾಯಮೂರ್ತಿಯಾಗಿ ಗವಾಯಿ ಅವರು ನಾಗ್ಪುರ, ಔರಂಗಾಬಾದ್ ಮತ್ತು ಪಣಜಿಯ ನ್ಯಾಯಪೀಠಗಳ ನೇತೃತ್ವ ವಹಿಸಿದ್ದರು. 2019ರ ಮೇ 24ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು. 2025ರ ನವೆಂಬರ್ 23ರಂದು ನಿವೃತ್ತರಾಗಲಿದ್ದಾರೆ. ಅವರ ಅಧಿಕಾರಾವಧಿ ಕೇವಲ ಆರು ತಿಂಗಳು.
