ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಎ.ಎಂ ಖಾನ್ವಿಲ್ಕರ್‌ರನ್ನು ಭಾರತದ ನೂತನ ಲೋಕಪಾಲರಾಗಿ ನೇಮಿಸಲಾಗಿದೆ. ಆದರೆ, ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ, ಬಿಜೆಪಿ ಪರವಾಗಿ ತೀರ್ಪುಗಳನ್ನು ನೀಡಿದವರೇ ಸರ್ಕಾರಿ ಪದವಿಯನ್ನು ಪಡೆಯುತ್ತಿರುವುದು ಈ ಚರ್ಚೆಗಳಿಗೆ ಪ್ರಮುಖ ಕಾರಣ. ಮೋದಿ ಸರ್ಕಾರವು ತಮ್ಮ ನೆಚ್ಚಿನ ನ್ಯಾಯಾಧೀಶರಿಗೆ ಈ ಹುದ್ದೆಗಳನ್ನು ಗಿಫ್ಟ್ ಆಗಿ ನೀಡುತ್ತಿದೆಯೇ? ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ಒಬ್ಬ ನ್ಯಾಯಾಧೀಶ ನಿವೃತ್ತಿ ಹೊಂದಿದ ಬಳಿಕ ಅವರು ಯಾವುದೇ ಸರ್ಕಾರಿ ಹುದ್ದೆಯನ್ನು ಅಲಂಕರಿಸಿದರೆ, ಅದನ್ನು ಸಂದೇಹದಿಂದಲೇ ನೋಡಲಾಗುತ್ತದೆ. ಈಗ ಬಿಜೆಪಿ ಸರ್ಕಾರದ ನಡೆಯನ್ನು ವಿಪಕ್ಷಗಳಾದ ಕಾಂಗ್ರೆಸ್, ಎಡಪಕ್ಷಗಳು ಅನುಮಾನಿಸುತ್ತಿವೆ. ಆದರೆ, ಈ ಅನುಮಾನ ಕೇವಲ ಈ ಪಕ್ಷಗಳಿಗೆ ಸೀಮಿತವಾಗಿಲ್ಲ. ಈ ಹಿಂದೆ, ಬಿಜೆಪಿ ಮಾಡಿದ್ದು ಕೂಡ ಇದನ್ನೇ.

ಗಡ್ಕರಿ ಈ ಹಿಂದೆ ನೀಡಿದ ಹೇಳಿಕೆ ಸಮರ್ಥಿಸ್ತಾರಾ?
ನ್ಯಾಯಾಧೀಶರು ನಿವೃತ್ತಿಯಾದ ಎರಡು ವರ್ಷಗಳ ನಂತರವೇ ಯಾವುದೇ ಹುದ್ದೆಯನ್ನು ನೀಡಬೇಕು. ಇಲ್ಲವಾದರೆ ಸರ್ಕಾರ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾನೂನಿನ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು 2012ರಲ್ಲಿ ಬಿಜೆಪಿ ನಾಯಕ ನಿತಿನ್ ಗಡ್ಕರಿ ಹೇಳಿದ್ದರು.
ಹಾಗೆಯೇ ಇದೇ ನಿತಿನ್ ಗಡ್ಕರಿ, “ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಾಧೀಶರಲ್ಲಿ ಯಾರನ್ನು ಯಾವ ಆಯೋಗದ ಅಧ್ಯಕ್ಷ ಮಾಡಲಾಗುತ್ತದೆ ಎಂದು ಮೊದಲೇ ನಿರ್ಧಾರ ಮಾಡಲಾಗುತ್ತದೆ,” ಎಂದು ಹೇಳಿಕೊಂಡಿದ್ದರು.
ವಿಪಕ್ಷದಲ್ಲಿದ್ದಾಗ ಬಿಜೆಪಿಯ ಅರುಣ್ ಜೇಟ್ಲಿ, “ನಿವೃತ್ತಿ ಬಳಿಕ ಯಾವುದೇ ನ್ಯಾಯಾಧೀಶರು ಸರ್ಕಾರಿ ಹುದ್ದೆ ಸ್ವೀಕಾರ ಮಾಡಿದರೆ ಸಾಮಾನ್ಯವಾಗಿಯೇ ಅವರು ಈ ಹಿಂದೆ ನೀಡಿದ್ದ ಆದೇಶಗಳ ಮೇಲೆ ಸಂದೇಹ ಬರುತ್ತದೆ,” ಎಂದು ಹೇಳಿದ್ದರು. ಪಿಯೂಷ್ ಗೋಯಲ್ 2013ರಲ್ಲಿ ಇದೇ ಅರ್ಥವನ್ನು ನೀಡುವ ಟ್ವೀಟ್ ಮಾಡಿದ್ದರು.
ಈ ಸಂದರ್ಭದಲ್ಲಿ ಅರುಣ್ ಜೇಟ್ಲಿ ಇದ್ದಿದ್ದರೆ, ನಿತಿನ್ ಗಡ್ಕರಿ, ಪಿಯೂಷ್ ಗೋಯಲ್ ವಿರೋಧ ಪಕ್ಷಗಳಲ್ಲಿ ಇದ್ದಿದ್ದರೆ ಜಸ್ಟೀಸ್ ಖಾನ್ವಿಲ್ಕರ್‌ರನ್ನು ಲೋಕಪಾಲರಾಗಿ ನೇಮಿಸುವುದಕ್ಕೆ ಏನು ಹೇಳುತ್ತಿದ್ದರು? ನ್ಯಾಯಾಧೀಶರು ನಿವೃತ್ತವಾದ ಕೂಡಲೇ ಹುದ್ದೆಗೆ ನೇಮಿಸುವುದು ತಪ್ಪು ಎನ್ನುತ್ತಾರಾ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಬಾರ್ ಅಂಡ್ ಬೇಂಚ್ ಸಮೀಕ್ಷೆ ನೋಡಿದ್ರೆ ಬೆರಗಾಗ್ತೀರಿ!
ಬಾರ್ ಅಂಡ್ ಬೇಂಚ್‌ನ 2023ರ ಸಮೀಕ್ಷೆಯೊಂದರಲ್ಲಿ 2013ರಿಂದ 2023ರವರೆಗೆ ಸುಪ್ರೀಂ ಕೋರ್ಟ್‌ನಲ್ಲಿ ನಿವೃತ್ತಿಯಾದ 21 ನ್ಯಾಯಾಧೀಶರಿಗೆ ಯಾವುದಾದರೂ ಒಂದು ಹುದ್ದೆ ಲಭ್ಯವಾಗಿದೆ ಎಂದು ಹೇಳುತ್ತದೆ. ಅಷ್ಟಕ್ಕೂ ಇದು ಬರೀ ಸುಪ್ರೀಂ ಕೋರ್ಟ್‌ಗೆ ಸೀಮಿತವಾಗಿಲ್ಲ.
ಇತ್ತೀಚೆಗೆ ಜಸ್ಟೀಸ್ ಎ.ಕೆ ವಿಶ್ವೇಸ್ ತಾನು ನಿವೃತ್ತಿಯಾಗುವುದಕ್ಕೂ ಒಂದು ದಿನ ಮುನ್ನ ಜ್ಞಾನವ್ಯಾಪಿ ಪ್ರಕರಣದಲ್ಲಿ ತೀರ್ಪು ನೀಡಿದ್ದರು. ಮಸೀದಿಯೊಳಗೆ ಹಿಂದೂಗಳ ಪೂಜೆಗೆ ಅವಕಾಶ ನೀಡಿ ಆದೇಶವನ್ನು ಹೊರಡಿಸಿದ್ದರು. ಅವರನ್ನೀಗ ಲಕ್ನೋದ ಡಾ. ಶಕುಂತಲಾ ಮಿಶ್ರಾ ರಾಷ್ಟ್ರೀಯ ಪುನರ್ವಸತಿ ವಿಶ್ವವಿದ್ಯಾಲಯ ಲೋಕಪಾಲರಾಗಿ ನಿಯುಕ್ತಿ ಮಾಡಲಾಗಿದೆ.
2021ರಲ್ಲಿ ಜಸ್ಟೀಸ್ ಸುರೇಂದ್ರ ಕುಮಾರ್ ಯಾದವ್‌ರನ್ನು ಉಪ ಲೋಕಾಯುಕ್ತರಾಗಿ ನೇಮಿಸಲಾಗಿದೆ. ಇದಕ್ಕೂ ಒಂದು ವರ್ಷಕ್ಕೂ ಮುನ್ನ ಸುರೇಂದ್ರ ಕುಮಾರ್ ಅವರು ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ 32 ಮಂದಿ ಆರೋಪಿಗಳನ್ನು ನಿರ್ದೋಷಿಗಳೆಂದು ಘೋಷಿಸಿದ್ದರು. ಹೀಗಿರುವಾಗ ಈ ನಿಯುಕ್ತಿಯ ಮೇಲೆ ನಿತಿನ್ ಗಡ್ಕರಿ, ಗೋಯಲ್ ಅಥವಾ ಬಿಜೆಪಿಗೆ ಯಾವುದೇ ಸಂದೇಹ ಹುಟ್ಟಿಲ್ಲವೇ? ಈ ಹಿಂದೆ ಅವರು ನೀಡಿದ್ದ ಹೇಳಿಕೆ ನೆನಪಿಗೆ ಬರುತ್ತಿಲ್ಲವೇ?
ಸರ್ಕಾರದ ಓಲೈಕೆ ಮಾಡುತ್ತಾರಾ ನ್ಯಾಯಾಧೀಶರು?
2023ರ ಡಿಸೆಂಬರ್ ಬಳಿಕ ನಿವೃತ್ತಿ ಹೊಂದಿದ ಯಾವುದೇ ನ್ಯಾಯಾಧೀಶರಿಗೆ ಎರಡು ವರ್ಷಗಳ ಕಾಲ ಯಾವುದೇ ಹುದ್ದೆಗೆ ನೇಮಿಸಬಾರದು ಎಂದು ಬಾಂಬೆ ವಕೀಲರ ಸಂಘವು ಮನವಿ ಸಲ್ಲಿಸಿದೆ. ಆದರೆ, ಜಸ್ಟೀಸ್ ಎಸ್.ಕೆ ಕೌಲ್ ಈ ವಿಚಾರದಲ್ಲಿ ಸರ್ಕಾರ ಕಾನೂನು ಮಾಡಲಿ, ನಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಸರ್ಕಾರ ಮತ್ತು ಕೋರ್ಟ್ ನಡುವಿನ ನಂಟಿನ ಬಗ್ಗೆ ಸಂದೇಹವು ನಿರಂತರವಾಗಿ ಮೇಲ್ಗೈ ಸಾಧಿಸುತ್ತಿದೆ. ನ್ಯಾಯಾಧೀಶರು ತಮ್ಮ ನೆಚ್ಚಿನ ಪಕ್ಷ ಅಧಿಕಾರದಲ್ಲಿರುವಾಗ ಅದರ ಓಲೈಕೆ ಮಾಡುತ್ತಾರಾ ಎಂಬ ಪ್ರಶ್ನೆಯೂ ಇದೆ.
ತಾನು ವಿಪಕ್ಷದಲ್ಲಿದ್ದಾಗ ಬಿಜೆಪಿಯು ನಿವೃತ್ತ ನ್ಯಾಯಾಧೀಶರಿಗೆ ಶೀಘ್ರವೇ ಸರ್ಕಾರಿ ಹುದ್ದೆ ನೀಡುವುದನ್ನು ವಿರೋಧಿಸಿದ್ದರೂ, 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮೋದಿ ಸರ್ಕಾರವು ಈ ಪ್ರವೃತ್ತಿಗೆ ಯಾವುದೇ ಲಗಾಮು ಹಾಕಿಲ್ಲ. ಇವೆಲ್ಲವನ್ನು ನೋಡಿದಾಗ ಮೋದಿ ಸರ್ಕಾರ ಈ ನೇಮಕಾತಿ ಪ್ರಕ್ರಿಯೆಯಿಂದಲೇ ದೊಡ್ಡ ಪ್ರಮಾಣದ ಲಾಭ ಪಡೆಯುತ್ತಿದೆಯೇ ಎಂಬ ಪ್ರಶ್ನೆ ಹುಟ್ಟುತ್ತದೆ.
ಇಡಿ ವಿಚಾರದಲ್ಲಿ ಖಾನ್ವಿಲ್ಕರ್ ತೀರ್ಪು
ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಎ.ಎಂ ಖಾನ್ವಿಲ್ಕರ್‌ರನ್ನು ಈಗ ಲೋಕಪಾಲರಾಗಿ ನೇಮಕ ಮಾಡಲಾಗಿದೆ. ಖಾನ್ವಿಲ್ಕರ್ ತಾವು ನಿವೃತ್ತಿ ಹೊಂದುವ ಎರಡು ದಿನಕ್ಕೂ ಮುನ್ನವೇ ಜಾರಿ ನಿರ್ದೇಶನಾಲಯ (ಇಡಿ) ವಿಚಾರದಲ್ಲಿ ಒಂದು ಮಹತ್ತದ ಆದೇಶ ನೀಡಿದ್ದರು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಥವಾ ಪಿಎಂಎಲ್‌ಎ ಸಂಬಂಧಿತ ತೀರ್ಪು ಇದಾಗಿತ್ತು. ಈ ತೀರ್ಪು ನೀಡಿದ ಪೀಠದಲ್ಲಿ ಜಸ್ಟೀಸ್ ಖಾನ್ವಿಲ್ಕರ್ ಮಾತ್ರವಲ್ಲ ಜಸ್ಟೀಸ್ ಮಹೇಶ್ವರಿ, ಜಸ್ಟೀಸ್ ಸಿಟಿ ಕುಮಾರ್ ಕೂಡಾ ಇದ್ದರು.
ಈ ತೀರ್ಪಿನ ಪ್ರಕಾರ, ಯಾವುದೇ ವ್ಯಕ್ತಿಯನ್ನು ಇಡಿ ವಶಕ್ಕೆ ಪಡೆಯುವ ಮುನ್ನ ವ್ಯಕ್ತಿ ಯಾವ ಕಾರಣಕ್ಕೆ ಬಂಧನಕ್ಕೆ ಒಳಗಾಗುತ್ತಿದ್ದಾನೆ ಎಂದು ತಿಳಿಯಲು ಸಾಧ್ಯವಾಗುವ ಇಸಿಐಆರ್ ನೀಡುವ ಅಗತ್ಯವಿಲ್ಲ. ಈ ಕಾನೂನು, ಒಬ್ಬ ವ್ಯಕ್ತಿ ತಾನು ಬಂಧನಕ್ಕೆ ಒಳಗಾಗುವಾಗ ಕಾರಣ ತಿಳಿಯುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ. ಹಾಗೆಯೇ ತಾನು ನಿರಪರಾಧಿ ಎಂದು ಸಾಬೀತುಪಡಿಸುವ ಹೊಣೆಯೂ ಆರೋಪಿಯದ್ದೇ ಆಗಿರುತ್ತದೆ. (ನೀವೇ ಒಮ್ಮೆ ಆಲೋಚಿಸಿ ನೋಡಿ. ನಿಮ್ಮನ್ನು ಬಂಧನ ಮಾಡಲಾಗಿದೆ. ಆದರೆ, ನಿಮಗೆ ಕಾರಣ ತಿಳಿದಿಲ್ಲ! ಹೇಗಿರುತ್ತೆ ನಿಮ್ಮ ಸ್ಥಿತಿ?)
ಈ ತೀರ್ಪು ಪ್ರಕಟವಾದ ಎರಡು ತಿಂಗಳಲ್ಲೇ ತೀರ್ಪಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶ ಎನ್.ವಿ ರಮಣ್, ‘ಈ ಎರಡು ತೀರ್ಪುಗಳ ಬಗ್ಗೆ ಸಮೀಕ್ಷೆ ಮಾಡುವುದು ಅತೀ ಅಗತ್ಯ’ ಎಂದು ಹೇಳಿದ್ದಾರೆ. ಆದರೆ, 18 ತಿಂಗಳುಗಳಾಗಿದೆ ಈ ಆದೇಶವನ್ನು ಮರುಪರಿಶೀಲಿಸುವ ಅರ್ಜಿಯ ವಿಚಾರಣೆಯೇ ನಡೆದಿಲ್ಲ ಎಂದೂ ಪತ್ರಕರ್ತ ಸೌರವ್ ದಾಸ್ ಟ್ವೀಟ್ ಮಾಡಿದ್ದಾರೆ.
ಈ 18 ತಿಂಗಳುಗಳು ತಮಗೆ ಸಿಕ್ಕ ಎಲ್ಲ ಲಾಭವನ್ನು ಬಳಸಿಕೊಂಡಿರುವ ಇಡಿ ವಿಪಕ್ಷಗಳ ಅದೆಷ್ಟೋ ನಾಯಕರ ಮೇಲೆ ದಾಳಿ ನಡೆಸಿದೆ. ಇಡಿ ದಾಳಿಯ ಭಯದಿಂದಾಗಿಯೇ ತಮ್ಮ ಪಕ್ಷವನ್ನು ತೊರೆದು ಬಿಜೆಪಿಗೆ ಹಲವಾರು ನಾಯಕರು ಸೇರಿದ್ದು ಕೂಡಾ ಇದೆ.
ವಿಪಕ್ಷಗಳನ್ನು ಸಂಪೂರ್ಣವಾಗಿ ಬುಡಮೇಲು ಮಾಡುವ ನಿಟ್ಟಿನಲ್ಲಿಯೇ ಬಿಜೆಪಿ ಸರ್ಕಾರವು ಇಡಿ ಬಲೆ ಬೀಸುತ್ತಿದೆ. ಇಂತಹ ಮಹತ್ವಪೂರ್ಣವಾದ ವಿಷಯದ ಬಗ್ಗೆ 18 ತಿಂಗಳು ಕಳೆದರೂ ವಿಚಾರಣೆಯಾಗದಿರುವುದು ಖಂಡಿತವಾಗಿಯೂ ದುರದೃಷ್ಟಕರ ಸಂಗತಿ. ಈ 18 ತಿಂಗಳ ಅವಧಿಯಲ್ಲಿ ಜೈಲು ಪಾಲಾಗಿರುವ ನಾಯಕರು ಯಾರೆಂದು ನಾವು ನೋಡಿದರೆ, ಅವರೆಲ್ಲರೂ ವಿಪಕ್ಷಗಳ ನಾಯಕರೇ ಆಗಿದ್ದಾರೆ.
ಜೈಲುಪಾಲಾದ ವಿಪಕ್ಷ ನಾಯಕರುಗಳು
ದೆಹಲಿಯ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಕಳೆದ ಒಂದು ವರ್ಷದಿಂದ ಜೈಲಿನಲ್ಲಿದ್ದಾರೆ. ಸಿಸೋಡಿಯಾಕ್ಕಿಂತ ಮುನ್ನವೇ ಎಎಪಿಯ ಸತ್ಯೇಂದ್ರ ಜೈನ್ ಜೈಲುಪಾಲಾಗಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಜೈಲಿನಲ್ಲಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಇಡಿಯಿಂದ ಒಂದಲ್ಲ ಎರಡಲ್ಲ ಏಳು ಬಾರಿ ಸಮನ್ಸ್ ಬಂದಿದೆ. ಶೀಘ್ರವೇ ಕೇಜ್ರಿವಾಲ್‌ರನ್ನು ಕೂಡಾ ಇಡಿ ಬಂಧಿಸುವ ಸಾಧ್ಯತೆಯಿದೆ.
ನಾವು ಇಡಿಯ ದಾಳಿಗೆ ಒಳಗಾದವರ ಪಟ್ಟಿಯನ್ನು ತೆಗೆದಾಗ ಅಲ್ಲಿ ಬಿಜೆಪಿಯ ನಾಯಕರು, ಬಿಜೆಪಿಗೆ ಪಂಡಿಂಗ್ ಮಾಡುವವರ ಹೆಸರು ಮಾತ್ರ ಕಾಣೋದೇ ಇಲ್ಲ. ಇಡಿ ಕಣ್ಣಿಗೆ ಬೀಳುತ್ತಿದ್ದಂತೆ ವಿಪಕ್ಷ ತೊರೆದು ಬಿಜೆಪಿಗೆ ಸೇರಿದ ನಾಯಕರುಗಳ ಹೆಸರು ಮಾತ್ರ ಕಾಣುತ್ತೆ.
ಜಸ್ಟೀಸ್ ಖಾನ್ವಿಲ್ಕರ್‌ರನ್ನು ಒಳಗೊಂಡ ಮೂರು ಜನರ ಈ ಪೀಠದ ತೀರ್ಪು ಭಾರತದ ಆಡಳಿತ ಕ್ರಮವನ್ನೇ ಪ್ರಶ್ನೆ ಮಾಡುವಂತೆ ಮಾಡಿದೆ. ಆಡಳಿತಾರೂಢ ಬಿಜೆಪಿಯು ತನಗೆ ವಿಪಕ್ಷವೇ ಇರದಂತೆ ಮಾಡಲು ಎಲ್ಲ ತಯಾರಿಯನ್ನು ಮಾಡುತ್ತಿದೆ. ಬಿಜೆಪಿಯ ಈ ಇಡಿ ಜಾಲಕ್ಕೆ ಬಲಿಯಾದವರು ತಾವು ಎಷ್ಟೋ ವರ್ಷಗಳಿಂದ ಇದ್ದ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ, ಇದಾದ ಬಳಿಕವೇ ಇಡಿ ದಾಳಿ ನಿಲ್ಲುವುದು! ನಮ್ಮ ದೇಶದಲ್ಲಿ ತನಿಖಾ ತಂಡ ಮತ್ತು ರಾಜಕೀಯ ಪಕ್ಷದ ನಡುವೆ ಎಷ್ಟೊಂದು ನಂಟಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ.
ಈ ಜಸ್ಟೀಸ್ ಖಾನ್ವಿಲ್ಕರ್ ಪೀಠವೇ 2002ರಲ್ಲಿ ಗುಜರಾತಿನ ದಂಗೆ ಪ್ರಕರಣದಲ್ಲಿ ನರೇಂದ್ರ ಮೋದಿಯನ್ನು ನಿರ್ದೋಷಿ ಎಂದು ಘೋಷಿಸಿತ್ತು. ಇತ್ತೀಚೆಗೆ ಚುನಾವಣಾ ಬಾಂಡ್ ಅನ್ನು ಅಸಾಂವಿಧಾನಿಕ ಎಂದು ಘೋಷಿಸಲಾಗಿದೆ. ಇದೇ ರೀತಿ ಸರ್ಕಾರದ ವಿರುದ್ಧವಾಗಿ ತೀರ್ಪು ನೀಡಿದವರು ಯಾರೂ ಕೂಡಾ ಲೋಕಪಾಲ, ಉಪಲೋಕಪಾಲರು ಆಗಿಲ್ಲ. ಬದಲಾಗಿ ಸರ್ಕಾರದ ಪರವಾಗಿ ನಿಂತ ನ್ಯಾಯಾಧೀಶರು ಮಾತ್ರ ಈ ಹುದ್ದೆಗಳನ್ನು ಪಡೆಯುತ್ತಿರುವುದು ನೇರವಾಗಿ ಕಾನೂನಿನಲ್ಲಿ ಬಿಜೆಪಿ ಸರ್ಕಾರದ ಹಸ್ತಕ್ಷೇಪ ಮಾಡುತ್ತಿರುವುದು ಖಚಿತವಾಗಲ್ವೇ?
2018ರಲ್ಲಿ ಜಸ್ಟೀಸ್ ಎಕೆ ಗೋಯಲ್ ಸುಪ್ರೀಂ ಕೋರ್ಟ್‌ನಿಂದ ನಿವೃತ್ತಿ ಪಡೆದಾಗ ಅದೇ ದಿನ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಚೇರ್‌ಮನ್ ಆಗಿ ನೇಮಿಸಲಾಗಿದೆ. ಇದೇ ದಿನ ಗೋಯಲ್‌ರ ಪುತ್ರ ನಿಖಿಲ್ ಗೋಯಲ್‌ರನ್ನು ಎಡಿಡಿಎಲ್ ಎಜಿಯಾಗಿ ನೇಮಿಸಲಾಗಿದೆ. ಈ ಕಾಕತಾಳೀಯವನ್ನು ಹಲವಾರು ಅರ್ಥಗಳನ್ನು ನೀಡುವುದಂತು ಸತ್ಯ.
2019ರಲ್ಲಿ ಎಎಪಿಯ ಸಂಜಯ್ ಸಿಂಗ್ ಪ್ರಧಾನಿ ಮೋದಿಗೆ ಪತ್ರವನ್ನು ಬರೆದಿದ್ದಾರೆ. “ನಿವೃತ್ತಿಯ ಬಳಿಕ ನ್ಯಾಯಾಧೀಶರ ನೇಮಕದ ಮೇಲೆ ತಡೆಯೊಡ್ಡಲೇಬೇಕು. ಇದರಿಂದಾಗಿ ನ್ಯಾಯಪಾಲನೆಯ ಸ್ವಾತಂತ್ರ್ಯದ ವಿಚಾರದಲ್ಲಿ ಜನರಿಗೆ ಸಂದೇಹ ಉಂಟಾಗುತ್ತದೆ,” ಎಂದು ಪತ್ರದಲ್ಲಿ ತಿಳಿಸಿದ್ದರು.
ರಾಮಮಂದಿರ ತೀರ್ಪು ನೀಡಿದವರು ಎಲ್ಲಿದ್ದಾರೆ?
2019ರಲ್ಲಿ ರಾಮಮಂದಿರ ನಿರ್ಮಾಣದ ತೀರ್ಪನ್ನು ನೀಡಿದ ಐದು ಸದಸ್ಯರ ಪೀಠದಲ್ಲಿದ್ದ ಮೂವರಿಗೆ ನಿವೃತ್ತಿ ಬಳಿಕ ಯಾವುದಾದರೂ ಒಂದು ಹುದ್ದೆಯನ್ನು ನೀಡಲಾಗಿದೆ. ಈ ಐವರಲ್ಲಿ ಒಬ್ಬರು ಪ್ರಸ್ತುತ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶ ಡಿವೈ ಚಂದ್ರಚೂಡ್ ಆಗಿದ್ದಾರೆ. ಇದೇ ಪೀಠದ ಸದಸ್ಯರಾದ ಜಸ್ಟೀಸ್ ಅಬ್ದುಲ್ ನಸೀರ್‌ರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ಮಾಡಲಾಗಿದೆ. ಜಸ್ಟೀಸ್ ಅಶೋಕ್ ಭೂಷಣ್‌ರನ್ನು ಎನ್‌ಸಿಟಿಎಲ್‌ನ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅಶೋಕ್ ಭೂಷಣ್ ರಾಮಮಂದಿರ ಉದ್ಘಾಟನೆಯಲ್ಲಿ ಭಾಗಿಯಾಗಿದ್ದರು, ಅವರಿಗೆ ಆಮಂತ್ರಣವನ್ನು ನೀಡಲಾಗಿತ್ತು. ಇನ್ನು ಈ ಪೀಠದ ಮುಖ್ಯರಾದ ಜಸ್ಟೀಸ್ ರಂಜನ್ ಗೊಗೊಯ್ ನಿವೃತ್ತಿರಾದ ನಾಲ್ಕು ತಿಂಗಳ ಒಳಗಾಗಿ ರಾಜ್ಯ ಸಭೆಯ ಸದಸ್ಯರನ್ನಾಗಿಸಲಾಗಿದೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು, ರಾಮಮಂದಿರದ ತೀರ್ಪಿನ ಮೇಲೆ ಸಂದೇಹ ಹುಟ್ಟಿತ್ತು.
ಜಸ್ಟೀಸ್ ಅಬ್ದುಲ್ ನಸೀರ್‌ರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಿದಾಗ ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದು, ಅರುಣ್ ಜೇಟ್ಲಿಯ ಈ ಹಿಂದಿನ ಹೇಳಿಕೆಯನ್ನು ಮೆಲುಕು ಹಾಕಿದ್ದರು. ಇದರ ವೀಡಿಯೋವನ್ನು ಕೂಡಾ ಪತ್ರಿಕಾಗೋಷ್ಠಿಯಲ್ಲಿ ತೋರಿಸಿದ್ದರು.
ರಾಜ್ಯ ಸಭೆ ಸದಸ್ಯರಾಗುವುದು ಎಷ್ಟು ಸರಿ?
ನಿವೃತ್ತಿಯನ್ನು ಪಡೆದ ಬಳಿಕ ನಿಗದಿತ ಹುದ್ದೆಗಳಿಗೆ ನ್ಯಾಯಾಧೀಶರು ನೇಮಕಾತಿ ಹೊಂದುವುದು ಸಾಮಾನ್ಯವಾದರೂ ರಾಜ್ಯಸಭೆ ಸದಸ್ಯರಾಗುವುದು ಎಷ್ಟು ಸರಿ? ನಿವೃತ್ತಿ ಬಳಿಕ ಮುಖ್ಯ ನ್ಯಾಯಾಧೀಶರು ರಾಜ್ಯ ಸಭೆ ಸದಸ್ಯರಾಗುವುದು ಅನೈತಿಕವಾಗುವುದಿಲ್ಲವೇ? ಇದನ್ನು ಅಸಾಂವಿಧಾನಿಕ ಎಂದು ಪರಿಗಣಿಸಬಹುದೇ?
ಜಸ್ಟೀಸ್ ರಂಜನ್ ಗೊಗೊಯ್ ಮಾತ್ರ ತಾನು ರಾಜ್ಯ ಸಭೆ ಸದಸ್ಯರಾಗಿರುವುದನ್ನು ಸಮರ್ಥಿಸಿಕೊಂಡಿದ್ದರು. ನಾನು ನ್ಯಾಯ ಪಾಲನೆ ಪ್ರಶ್ನೆಯನ್ನು ಎತ್ತಲು, ಈಶಾನ್ಯ ರಾಜ್ಯಗಳ ಪರವಾಗಿ ಮಾತಾನಾಡಲು ಬಯಸಿದ್ದೇನೆ ಎಂದು ಹೇಳಿಕೊಂಡರು. ಆದರೆ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ರಂಜನ್ ಗೊಗೊಯ್ ಕೇವಲ ಒಂದು ಬಾರಿ ಮಾತ್ರ ಮಾತನಾಡಿದ್ದಾರೆ. ಒಂದೇ ಒಂದು ಪ್ರಶ್ನೆಯನ್ನು ಕೂಡಾ ಎತ್ತಿಲ್ಲ. ರಾಜ್ಯ ಸಭೆಯ ವೆಬ್‌ಸೈಟ್‌ಗೆ ನಾವು ಹೋಗಿ ನೋಡಿದರೆ ಗೊಗೊಯ್ ಹೆಸರಿನ ಮುಂದೆ ನಾವು ಕಾಣುವುದು ಖಾಲಿ ಜಾಗವಷ್ಟೆ. ನಾನು ಕಾನೂನು ಪಾಲನೆ ಪ್ರಶ್ನೆ ಎತ್ತಲು ರಾಜ್ಯ ಸಭೆ ಸದಸ್ಯನಾದೆ ಎಂದ ಗೊಗೊಯ್ ಒಂದೇ ಒಂದು ಪ್ರಶ್ನೆ ಎತ್ತಿಲ್ಲ ಎಂದಾದರೆ ನಾವು ಈ ನಿವೃತ್ತ ನ್ಯಾಯಾಧೀಶರನ್ನು ಪ್ರಶ್ನಿಸಬಾರದೇ?
ಮಣಿಪುರ ವಿಷಯ ಎತ್ತದ ಗೊಗೊಯ್
ಮಣಿಪುರದ ಸ್ಥಿತಿ ಇನ್ನೂ ಕೂಡಾ ಸುಧಾರಣೆಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಈವರೆಗೂ ಅಲ್ಲಿಗೆ ಭೇಟಿ ನೀಡಿಲ್ಲ. ನ್ಯಾಯದ ಪ್ರಶ್ನೆ ಎತ್ತಲು ರಾಜ್ಯ ಸಭೆ ಸದಸ್ಯನಾದೆ ಎಂದ ಗೊಗೊಯ್ ಮಣಿಪುರ ವಿಚಾರದಲ್ಲಿ ಒಂದೇ ಒಂದು ಹೇಳಿಕೆಯನ್ನೂ ನೀಡಿಲ್ಲ. ರಂಜನ್ ಗೊಗೊಯ್ ಈಗ ಎಲ್ಲಿದ್ದಾರೆ? ಗೊಗೊಯ್‌ಗೆ ಈಶಾನ್ಯ ರಾಜ್ಯದ ಈ ಸಮಸ್ಯೆ ಕಣ್ಣಿಗೆ ಬೀಳುವುದಿಲ್ಲವೇ? ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ನಗ್ನವಾಗಿಸಿ ಮೆರವಣಿಗೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಗೊಗೊಯ್, “ಈ ವಿಚಾರದಲ್ಲಿ ಹೇಳುವುದು ಏನಿಲ್ಲ. ಇದು ದುರ್‌ಭಾಗ್ಯ,” ಎಂದಿದ್ದಾರೆ. ಹಾಗಿರುವಾಗ ಗೊಗೊಯ್ ರಾಜ್ಯ ಸಭೆಯಲ್ಲಿ ಮೌನವಾಗಿರಲು ಹೋಗಿದ್ದಾರಾ ಎಂಬ ಪ್ರಶ್ನೆ ನಾವು ಎತ್ತಲೇ ಬೇಕು.
ಸುಪ್ರೀಂ ಕೋರ್ಟ್‌ನ ಮತ್ತೋರ್ವ ಮುಖ್ಯ ನ್ಯಾಯಾಧೀಶ ಜಸ್ಟೀಸ್ ಸತ್ಯಶಿವಂರನ್ನು ನಿವೃತ್ತಿ ಬಳಿಕ ಕೇರಳದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಅಮಿತ್ ಶಾ ವಿರುದ್ಧದ ಎಫ್‌ಐಆರ್ ಅನ್ನು ಸತ್ಯಶಿವಂ ಇದಕ್ಕೂ ಕೆಲವೇ ತಿಂಗಳುಗಳ ಮುನ್ನ ರದ್ದು ಮಾಡಿದ್ದರು ಎಂಬುವುದನ್ನು ಮರೆಯುವಂತಿಲ್ಲ.
ಕೆಲವು ನಿಯಮಗಳು ಅತ್ಯಗತ್ಯ
ಪ್ರತಿಯೊಂದು ಘಟನೆಗೂ ಈ ಹಿಂದೆಯೂ ನಡೆದಿದೆ ಎಂಬುವುದೊಂದೇ ಉತ್ತರವಾಗುತ್ತಾ? ಈ ಉತ್ತರವನ್ನು ನಾವು ಒಪ್ಪಬಹುದೇ? ಹಾಗಿದ್ದರೆ ಈ ಹಿಂದೆ ಆಗುತ್ತಿದ್ದದ್ದು ಸರಿಯೇ? ಈಗ ನಡೆಯುತ್ತಿರುವುದು ಸರಿಯೇ? ಒಟ್ಟಾರೆಯಾಗಿ ಈ ಪೂರ್ಣ ಪ್ರಕ್ರಿಯೆಯಲ್ಲಿ ಸುಧಾರಣೆ ಮಾಡುವ ಅಗತ್ಯವಿದೆ. ಕೆಲವು ನ್ಯಾಯಾಧೀಶರ ನೇಮಕಾತಿ ಅಗತ್ಯ ಮತ್ತು ಯೋಗ್ಯತೆಯ ಆಧಾರದಲ್ಲಿ ಆಗುತ್ತಿರಬಹುದು, ಅನಿವಾರ್ಯವೂ ಆಗಿರಬಹುದು. ಎಲ್ಲ ನೇಮಕಾತಿಯ ಮೇಲೆ ಈ ರೀತಿ ಸಂಬಂಧ ಸೃಷ್ಟಿಸಿ ಮಾತನಾಡುವುದು ಸರಿಯೂ ಅಲ್ಲ. ಆದರೆ ನ್ಯಾಯೋಚಿತವೇನು? ತನ್ನ ತೀರ್ಪಿನಿಂದ ಸರ್ಕಾರಕ್ಕೆ ಲಾಭವಾಗಿದೆ ಎಂದು ತಿಳಿದಿರುವಾಗಲೂ ನಿವೃತ್ತಿಯಾದ ಕೂಡಲೇ ನ್ಯಾಯಾಧೀಶರು ಸರ್ಕಾರಿ ಹುದ್ದೆಯನ್ನು ಸ್ವೀಕರಿಸಬಹುದೇ? ಇವೆಲ್ಲದ್ದಕ್ಕೆ ಕಡಿವಾಣ ಹಾಕಲು ಪ್ರಸ್ತುತ ಕೆಲವೊಂದು ನಿಯಮಗಳನ್ನು ತರುವುದು ಅಗತ್ಯವಾಗಿದೆ.