ಭಾರತದಲ್ಲಿ ಇಲ್ಲಿಯವರೆಗೂ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಮಹಾಭಿಯೋಗದ ಮೂಲಕ ತೆಗೆದು ಹಾಕಲಾಗಿಲ್ಲ. ಆದರೆ ಕೆಲವರ ವಿರುದ್ಧ ಈ ಪ್ರಕ್ರಿಯೆ ನಡೆಸಲಾಗಿದೆ. ಮೊದಲ ಬಾರಿಗೆ ಈ ಪ್ರಕ್ರಿಯೆಗೆ ಗುರಿಯಾದ ನ್ಯಾಯಮೂರ್ತಿಗಳೆಂದರೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿ ರಾಮಸ್ವಾಮಿ
ಅಧಿಕೃತ ನಿವಾಸದಲ್ಲಿ ಅಕ್ರಮ ಹಣದ ರಾಶಿಯ ಆಪಾದನೆಗಳು ಸತ್ಯವೆಂದು ಸುಪ್ರೀಂ ಕೋರ್ಟ್ ನೇಮಿಸಿದ್ದ ಆಂತರಿಕ ನ್ಯಾಯಾಂಗ ಸಮಿತಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಯಶವಂತ ವರ್ಮ ಕುರಿತು ವರದಿ ನೀಡಿರುವ ಹಿನ್ನೆಲೆಯಲ್ಲಿ ವರ್ಮ ಅವರ ಮುಂದಿನ ನಡೆ ಕುತೂಹಲ ಕೆರಳಿಸಿದೆ.
ಆಂತರಿಕ ನ್ಯಾಯಾಂಗ ಸಮಿತಿ ಸಲ್ಲಿಸಿರುವ ವರದಿಯ ಅಂಶಗಳನ್ನು ಉಲ್ಲೇಖಿಸಿ, ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಅವರು ನ್ಯಾ.ವರ್ಮ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಅವರು ರಾಜೀನಾಮೆ ನೀಡಲು ಒಪ್ಪದೆ ಹೋದರೆ ಸಂಸತ್ತಿನಿಂದ ಪದಚ್ಯುತಿ ಪ್ರಕ್ರಿಯೆಯನ್ನು (ಮಹಾಭಿಯೋಗ) ಎದುರಿಸಬೇಕಾಗುತ್ತದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಿ.ಎಸ್. ಸಂಧಾವಾಲಿಯಾ, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಅವರನ್ನು ಒಳಗೊಂಡಿದ್ದ ಸಮಿತಿ ಪ್ರಕರಣದ ಸಾಕ್ಷ್ಯ ಪರಿಶೀಲಿಸಿ, ಮೇ 4ರಂದು ತನಿಖಾ ವರದಿ ಸಲ್ಲಿಸಿತ್ತು. 50ಕ್ಕೂ ಅಧಿಕ ಮಂದಿಯ ಹೇಳಿಕೆ ಇದರಲ್ಲಿವೆ.
ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮಹಾಭಿಯೋಗ(Impeachment) ಪ್ರಕ್ರಿಯೆ ಸಂವಿಧಾನದ 124(4) ಮತ್ತು 218ನೇ ವಿಧಿಗಳ ಅಡಿಯಲ್ಲಿ ನಡೆಯುತ್ತದೆ. ಈ ಪ್ರಕ್ರಿಯೆಯನ್ನು ನ್ಯಾಯಾಧೀಶರ (ತನಿಖೆ) ಕಾಯ್ದೆ, 1968ರ ಕಾನೂನಡಿ ನಡೆಸಲಾಗುತ್ತದೆ. ಈ ಕಾನೂನಿನ ಮೂಲಕ ನ್ಯಾಯಮೂರ್ತಿಗಳನ್ನು “ದುರ್ನಡತೆ” ಅಥವಾ “ಅಸಮರ್ಥತೆ” ಆರೋಪದ ಮೇಲೆ ಹುದ್ದೆಯಿಂದ ವಜಾಗೊಳಿಸಲಾಗುತ್ತದೆ.
ಮಹಾಭಿಯೋಗ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಮಹಾಭಿಯೋಗ ಪ್ರಕ್ರಿಯೆ ಆರಂಭಿಸಲು ಸಂಸತ್ ಸದಸ್ಯರು ಆರೋಪ ಪತ್ರಕ್ಕೆ ಸಹಿ ಮಾಡಬೇಕು. ಲೋಕಸಭೆಯಲ್ಲಿ ಕನಿಷ್ಠ 100 ಸದಸ್ಯರು ಅಥವಾ ರಾಜ್ಯಸಭೆಯಲ್ಲಿ ಕನಿಷ್ಠ 50 ಸದಸ್ಯರು ಸಹಿ ಮಾಡಿ ಲೋಕಸಭೆಯ ಸ್ಪೀಕರ್ ಅಥವಾ ರಾಜ್ಯಸಭೆಯ ಅಧ್ಯಕ್ಷರಿಗೆ ಸಲ್ಲಿಸಬೇಕು. ಆರೋಪ ಪತ್ರದಲ್ಲಿ ದುರ್ನಡತೆ ಅಥವಾ ಅಸಮರ್ಥತೆಗೆ ಸಂಬಂಧಿಸಿದ ಸ್ಪಷ್ಟ ಆರೋಪಗಳು ಮತ್ತು ಪುರಾವೆಗಳನ್ನು ಒಳಗೊಂಡಿರಬೇಕು. ಆನಂತರ ಸ್ಪೀಕರ್/ಅಧ್ಯಕ್ಷರು ಆರೋಪ ಪತ್ರವನ್ನು ಪರಿಶೀಲಿಸಿ, ಅದರಲ್ಲಿ ಮೇಲ್ನೋಟಕ್ಕೆ ಯಾವುದೇ ಆಧಾರವಿದೆಯೇ ಎಂದು ಪರೀಕ್ಷಿಸುತ್ತಾರೆ. ಆರೋಪ ಗಂಭೀರವಾಗಿದ್ದರೆ, ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗುತ್ತದೆ. ಈ ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ನ ಒಬ್ಬರು ನ್ಯಾಯಮೂರ್ತಿ, ಒಬ್ಬರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಒಬ್ಬ ಪ್ರತಿಷ್ಠಿತ ಕಾನೂನು ತಜ್ಞರೊಬ್ಬರು ಇರುತ್ತಾರೆ. ಸಮಿತಿಯು ಆರೋಪಗಳ ಬಗ್ಗೆ ತನಿಖೆ ನಡೆಸುತ್ತದೆ ಮತ್ತು ನ್ಯಾಯಮೂರ್ತಿಗೆ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಅವಕಾಶ ಕೂಡ ನೀಡುತ್ತದೆ. ನಂತರದಲ್ಲಿ ಸಮಿತಿಯು ಸಾಕ್ಷ್ಯಗಳನ್ನು ಸಂಗ್ರಹಿಸಿ, ಸಾಕ್ಷಿಗಳನ್ನು ವಿಚಾರಿಸಿ ವರದಿ ಸಿದ್ಧಪಡಿಸುತ್ತದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜನಾರ್ದನ ರೆಡ್ಡಿಗೆ ಜೈಲು: ಇದು ಜನಸಾಮಾನ್ಯರ ಜಯ
ಆರೋಪಗಳು ಸಾಬೀತಾದರೆ, ಸಮಿತಿಯು ನ್ಯಾಯಮೂರ್ತಿಯನ್ನು ದೋಷಿಯೆಂದು ಘೋಷಿಸುತ್ತದೆ, ಇಲ್ಲದಿದ್ದರೆ ಪ್ರಕರಣವನ್ನು ರದ್ದುಗೊಳಿಸಲಾಗುತ್ತದೆ. ನ್ಯಾಯಮೂರ್ತಿಯನ್ನು ಸಮಿತಿಯು ದೋಷಿಯೆಂದು ವರದಿ ಸಲ್ಲಿಸಿದರೆ, ಆರೋಪ ಪತ್ರವನ್ನು ಸಂಸತ್ತಿನ ಉಭಯ ಸದನಗಳಲ್ಲಿ (ಲೋಕಸಭೆ ಮತ್ತು ರಾಜ್ಯಸಭೆ) ಮಂಡಿಸಲಾಗುತ್ತದೆ. ಪ್ರತಿ ಸದನದಲ್ಲಿ ಮೂರನೇ ಎರಡರಷ್ಟು ಬಹುಮತದಿಂದ ಪ್ರಸ್ತಾವ ಅಂಗೀಕಾರವಾಗಬೇಕು. ಉಭಯ ಸದನಗಳಲ್ಲಿ ಪ್ರಸ್ತಾವ ಅಂಗೀಕಾರವಾದರೆ ಅದನ್ನು ರಾಷ್ಟ್ರಪತಿಯವರಿಗೆ ಕಳುಹಿಸಲಾಗುತ್ತದೆ. ನಂತರ ರಾಷ್ಟ್ರಪತಿಯವರು ನ್ಯಾಯಮೂರ್ತಿಯನ್ನು ವಜಾಗೊಳಿಸುವ ಆದೇಶವನ್ನು ಹೊರಡಿಸುತ್ತಾರೆ.
ಮಹಾಭಿಯೋಗ ಇಲ್ಲಿಯವರೆಗೆ ಆಗಿಲ್ಲ
ಭಾರತದಲ್ಲಿ ಇಲ್ಲಿಯವರೆಗೂ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಮಹಾಭಿಯೋಗದ ಮೂಲಕ ತೆಗೆದು ಹಾಕಲಾಗಿಲ್ಲ. ಆದರೆ ಕೆಲವರ ವಿರುದ್ಧ ಈ ಪ್ರಕ್ರಿಯೆ ನಡೆಸಲಾಗಿದೆ. ಮೊದಲ ಬಾರಿಗೆ ಈ ಪ್ರಕ್ರಿಯೆಗೆ ಗುರಿಯಾದ ನ್ಯಾಯಮೂರ್ತಿಗಳೆಂದರೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿ ರಾಮಸ್ವಾಮಿ. 1990ರಲ್ಲಿ ವಿ ರಾಮಸ್ವಾಮಿ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದರು. ಆಗ 1987 ರಿಂದ 1989ರವರೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಅವರ ಅಧಿಕೃತ ನಿವಾಸದ ನವೀಕರಣಕ್ಕೆ ಸಂಬಂಧಿಸಿದಂತೆ ಅತಿಯಾದ ವೆಚ್ಚ ಮತ್ತು ಸಾರ್ವಜನಿಕ ಹಣದ ದುರುಪಯೋಗದ ಆರೋಪಗಳು ಕೇಳಿಬಂದವು. ನಂತರ ಈ ಆರೋಪಗಳನ್ನು ತನಿಖೆ ಮಾಡಲು ಅಂದಿನ ಲೋಕಸಭೆಯ ಸ್ಪೀಕರ್ ರಬಿ ರೇ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಪಿ.ಬಿ. ಸಾವಂತ್, ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪಿ ಡಿ ದೇಸಾಯಿ ಮತ್ತು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಓ ಚಿನ್ನಪ್ಪ ರೆಡ್ಡಿ ನೇತೃತ್ವದ ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದರು.
ಸಮಿತಿಯು 14 ಆರೋಪಗಳಲ್ಲಿ 11 ರಾಮಸ್ವಾಮಿ ಅವರನ್ನು ದೋಷಿಯೆಂದು ತಿಳಿಸಿತ್ತು. ಆದರೆ, 1993ರ ಮೇ 11ರಂದು ಲೋಕಸಭೆಯಲ್ಲಿ ವಾಗ್ದಂಡನೆ ಪ್ರಸ್ತಾವವನ್ನು ಮಂಡಿಸಿದಾಗ, ಅಗತ್ಯವಾದ ಮೂರನೇ ಎರಡರಷ್ಟು ಬಹುಮತ ಸಿಗಲಿಲ್ಲ. 196 ಸದಸ್ಯರು ವಾಗ್ದಂಡನೆ ಪರವಾಗಿ ಮತ ಹಾಕಿದರೆ, 205 ಸದಸ್ಯರು ಮತದಾನದಿಂದ ದೂರ ಉಳಿದರು. ಹೀಗಾಗಿ, ರಾಮಸ್ವಾಮಿ ಅವರನ್ನು ವಜಾ ಮಾಡಲು ಸಾಧ್ಯವಾಗಲಿಲ್ಲ. 1994ರಲ್ಲಿ ರಾಮಸ್ವಾಮಿ ಸೇವೆಯಿಂದ ನಿವೃತ್ತರಾದರು.
ಎರಡನೇ ಬಾರಿಗೆ ನ್ಯಾಯಮೂರ್ತಿ ಸೌಮಿತ್ರ ಸೇನ್ ವಿರುದ್ದ 2011ರಲ್ಲಿ ಮಹಾಭಿಯೋಗ ಪ್ರಸ್ತಾಪವಾಗಿತ್ತು. ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಸೌಮಿತ್ರ ಸೇನ್ ವಿರುದ್ಧ 1993ರಲ್ಲಿ ಅವರು ವಕೀಲರಾಗಿದ್ದಾಗ, ಗ್ರಾಹಕರ ಹಣವನ್ನು ದುರುಪಯೋಗ ಮಾಡಿದ ಆರೋಪ ಕೇಳಿಬಂದಿತು. 2007ರಲ್ಲಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ನಂತರ ಸುಪ್ರೀಂ ಕೋರ್ಟ್ ಆಂತರಿಕ ತನಿಖಾ ಸಮಿತಿಯು ಅವರು ದೋಷಿಯೆಂದು ವರದಿ ನೀಡಿತು. 2011ರಲ್ಲಿ ರಾಜ್ಯಸಭೆಯಲ್ಲಿ ಮಹಾಭಿಯೋಗ ಪ್ರಸ್ತಾವ ಮಂಡಿಸಲಾಯಿತು. 189 ಸದಸ್ಯರು ಪರವಾಗಿ ಮತ ಹಾಕಿದರು. ಇವರ ವಿರುದ್ಧ 17 ಮಂದಿ ಮತ ಚಲಾಯಿಸಿದರು. ಆದರೆ ಲೋಕಸಭೆಯಲ್ಲಿ ಮತದಾನ ನಡೆಯುವ ಮೊದಲೇ ಸೌಮಿತ್ರ ಸೇನ್ ರಾಜೀನಾಮೆ ನೀಡಿದರು. ಹೀಗಾಗಿ ಪ್ರಕ್ರಿಯೆ ಮುಗಿಯಲಿಲ್ಲ.
ನ್ಯಾಯಮೂರ್ತಿ ಪಿ.ಡಿ. ದಿನಕರನ್ ಅವರ ವಿರುದ್ಧ 2011ರಲ್ಲಿ ಮಹಾಭಿಯೋಗ ಪ್ರಸ್ತಾಪವಾಗಿತ್ತು. ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ.ಡಿ. ದಿನಕರನ್ ವಿರುದ್ಧ ಭೂಮಿ ಹಗರಣ, ಅಕ್ರಮ ಸಂಪತ್ತು ಸಂಗ್ರಹ ಮತ್ತು ನ್ಯಾಯಿಕ ದುರ್ನಡತೆ ಆರೋಪಗಳು ಕೇಳಿಬಂದವು. 2010ರಲ್ಲಿ ಸಿಕ್ಕಿಂ ಹೈಕೋರ್ಟ್‌ಗೆ ವರ್ಗಾವಣೆಯಾದ ನಂತರ, ರಾಜ್ಯಸಭೆಯಲ್ಲಿ ಮಹಾಭಿಯೋಗ ಪ್ರಕ್ರಿಯೆ ಆರಂಭವಾಯಿತು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆರ್ ವಿ ರವೀಂದ್ರನ್ ನೇತೃತ್ವದ ಸಮಿತಿಯು ತನಿಖೆ ನಡೆಸಿತು. ಆದರೆ ದಿನಕರನ್ ರಾಜೀನಾಮೆ ನೀಡಿದ ಕಾರಣ ಮಹಾಭಿಯೋಗ ಪ್ರಕ್ರಿಯೆ ಪೂರ್ಣಗೊಳ್ಳಲಿಲ್ಲ.
ಇದೀಗ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಇವೆಲ್ಲವೂ ಸತ್ಯ ಎಂದು ತನಿಖಾ ಸಮಿತಿ ವರದಿ ನೀಡಿಲಾಗಿದೆ. ನ್ಯಾ.ವರ್ಮಾ ತಾವಾಗಿಯೇ ರಾಜೀನಾಮೆ ನೀಡದೆ ಹೋದರೆ ಇವರನ್ನು ಮಹಾಭಿಯೋಗಕ್ಕೆ ಗುರಿಪಡಿಸುವ ಸಾಧ್ಯತೆ ಹೆಚ್ಚಾಗಿದೆ. ಹೀಗಾದಲ್ಲಿ ಇತಿಹಾಸದಲ್ಲಿ ಮಹಾಭಿಯೋಗಕ್ಕೆ ಗುರಿಯಾದ ಮೊದಲ ಹೈಕೋರ್ಟ್ ನ್ಯಾಯಮೂರ್ತಿ ಎನಿಸಲಿದ್ದಾರೆ ನ್ಯಾ.ವರ್ಮಾ.