ದೆಹಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಘಟಕದ ಚುನಾವಣೆಯಲ್ಲಿ ಎಡ-ವಿದ್ಯಾರ್ಥಿ ಸಂಘಟನೆಗಳು ಭರ್ಜರಿ ಗೆಲುವು ಸಾಧಿಸಿದೆ. ಆದರೆ ಸುವರ್ಣ ನ್ಯೂಸ್ ಮಾತ್ರ ಜೆಎನ್‌ಯುವಿನಲ್ಲಿ ಎಬಿವಿಪಿ ಕ್ಲೀನ್‌ಸ್ವೀಪ್ ಎಂದು ಸುಳ್ಳು ಸುದ್ದಿ ಪ್ರಕಟಿಸಿದೆ. ಇದನ್ನೇ ಹಿಂಬಾಳಿಸಿದ ಕರಾವಳಿಯ ಪತ್ರಿಕೆ ಜಯಕಿರಣ ಕೂಡಾ ಜೆಎನ್‌ಯು ಚುನಾವಣೆಯಲ್ಲಿ ಎಬಿವಿಪಿ ಕ್ಲೀನ್ ಸ್ವೀಪ್ ಎಂದು ಪ್ರಕಟಿಸಿದೆ.
ಮಾರ್ಚ್ 24ರಂದು ಸಂಜೆ 6:54 ಗಂಟೆಗೆ ಸುವರ್ಣ ನ್ಯೂಸ್ “ಜೆಎನ್‌ಯುನಲ್ಲಿ ಚುನಾವಣೆಯಲ್ಲಿ ಎಬಿವಿಪಿ ಕ್ಲೀನ್ ಸ್ವೀಪ್, ಅಧ್ಯಕ್ಷ ಸೇರಿ ನಾಲ್ಕೂ ಸ್ಥಾನದಲ್ಲಿ ಗೆಲುವು!” ಎಂದು ನಕಲಿ ಸುದ್ದಿ ಪ್ರಕಟಿಸಿತ್ತು. ಆದರೆ ಬಳಿಕ ತಡರಾತ್ರಿ 12:48ರ ಸಮಯದಲ್ಲಿ ಈ ಸುದ್ದಿಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದು “ಜೆಎನ್‌ಯುನಲ್ಲಿ ಚುನಾವಣೆಯಲ್ಲಿ ಲೆಫ್ಟ್ ವಿದ್ಯಾರ್ಥಿ ಘಟಕ ಕ್ಲೀನ್ ಸ್ವೀಪ್, ಎಬಿವಿಪಿಗೆ ಹಿನ್ನಡೆ!” ಎಂದು ಶೀರ್ಷಿಕೆ ಬದಲಾಯಿಸಿದೆ.
ಆರಂಭದಲ್ಲಿ ನಕಲಿ ಸುದ್ದಿ ಮಾಡಿದ್ದ ಸುವರ್ಣ ನ್ಯೂಸ್, “ಜೆಎನ್‌ಯು ವಿದ್ಯಾರ್ಥಿ ಘಟಕದ ಫಲಿತಾಂಶ ಹೊರಬಿದ್ದಿದೆ. ಎಡಪಂಥ ವಿಚಾರಧಾರೆಗಳಿಂದಲೇ ಸುದ್ದಿಯಾಗುತ್ತಿದ್ದ ಜವಾಹರ್‌ಲಾಲ್ ನೆಹರೂ ಯೂನಿವರ್ಸಿಟಿಯಲ್ಲಿ ಇದೀಗ ಎಬಿವಿಪಿ ಹೊಸ ಅಧ್ಯಾಯ ಬರೆದಿದೆ. ಜೆಎನ್‌ಯು ವಿದ್ಯಾರ್ಥಿ ಘಟಕದ ಅಧ್ಯಕ್ಷ ಸ್ಥಾನ ಎಬಿವಿಪಿ ಪಾಲಾಗಿದೆ. ಇದರ ಜೊತೆಗೆ ನಾಲ್ಕೂ ಸ್ಥಾನ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಗೆಲುವು ದಾಖಲಿಸಿದೆ” ಎಂದು ಬರೆದುಕೊಂಡಿತ್ತು. ಈ ಸುದ್ದಿಯನ್ನು ಬಿಜೆಪಿ, ಆರ್‌ಎಸ್‌ಎಸ್ ಬೆಂಬಲಿಗರು ಹಂಚಿಕೊಂಡು, ಹರ್ಷ ವ್ಯಕ್ತಪಡಿಸಿದ್ದರು.

ಸುವರ್ಣ ನ್ಯೂಸ್ ಪ್ರಕಟಿಸಿದ್ದ ಸುದ್ದಿಯನ್ನೇ ಅನುಸರಿಸಿದ ಕರಾವಳಿಯ ಸಂಜೆ ದಿನಪತ್ರಿಕೆ ‘ಜಯಕಿರಣ’ ಕೂಡ ಅದನ್ನೇ ಸೋಮವಾರ ಬೆಳಗ್ಗೆ ಮುಖಪುಟದಲ್ಲಿ ಪ್ರಕಟಿಸಿದೆ.

4 ವರ್ಷಗಳ ಬಳಿಕ ಜವಾಹರ್‌ಲಾಲ್ ನೆಹರೂ ವಿದ್ಯಾರ್ಥಿ ಘಟಕ ಚುನಾವಣೆ ನಡೆದಿದ್ದು ಶೇಕಡ 73ರಷ್ಟು ಮತದಾನವಾಗಿದೆ. 12 ವರ್ಷಗಳಲ್ಲೇ ಗರಿಷ್ಠ ಮತದಾನ ದಾಖಲಾಗಿದ್ದು 7,700 ವಿದ್ಯಾರ್ಥಿಗಳು ತಮ್ಮ ಹಕ್ಕು ಚಲಾಯಿಸಿದ್ದರು. ಎಡ-ವಿದ್ಯಾರ್ಥಿ ಸಂಘಟನೆಗಳು ಒಕ್ಕೂಟ (AISA, SFI, DSF ಮತ್ತು AISF) ಮತ್ತು BAPSA ವಿದ್ಯಾರ್ಥಿ ಸಂಘಟನೆ ವಿಜಯಶಾಲಿಯಾಗಿವೆ.
ಇದನ್ನು ಓದಿದ್ದೀರಾ? ಜೆಎನ್‌ಯು| ಮೂರು ದಶಕಗಳ ಬಳಿಕ ದಲಿತ ವಿದ್ಯಾರ್ಥಿಗೆ ಅಧ್ಯಕ್ಷಗಿರಿ
ಸುಮಾರು 30 ವರ್ಷಗಳ ಬಳಿಕ ಜೆಎನ್‌ಯುನಲ್ಲಿ ದಲಿತ ವಿದ್ಯಾರ್ಥಿ ಅಧ್ಯಕ್ಷರಾಗಿದ್ದಾರೆ. 1996-97ರಲ್ಲಿ ದಲಿತ ಮುಖಂಡ ಬಾಟಿ ಲಾಲ್ ಬೈರ್ವಾ ಜೆಎನ್‌ಯುನಲ್ಲಿ ಅಧ್ಯಕ್ಷರಾಗಿದ್ದು, ಅದಾದ ಬಳಿಕ ಈ ವರ್ಷದ (2024) ಚುನಾವಣೆಯಲ್ಲಿ ಧನಂಜಯ್ ಎಡ ವಿದ್ಯಾರ್ಥಿ ಸಂಘಟನೆಗಳನ್ನು ಪ್ರತಿನಿಧಿಸಿ ಚುನಾವಣೆ ಗೆದ್ದು ಅಧ್ಯಕ್ಷಗಿರಿಯನ್ನು ಪಡೆದುಕೊಂಡಿದ್ದಾರೆ.