ಸುಮಾರು 50 ಬಾರಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದರೂ ಸರ್ಕಾರಿ ಉದ್ಯೋಗ ದೊರೆಯಲಿಲ್ಲ ಎಂಬ ಹತಾಶೆಯಿಂದ 23 ವರ್ಷದ ಬಿ.ಟೆಕ್ ಚಿನ್ನದ ಪದಕ ವಿಜೇತ ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
“ಅಪ್ಪಾ ನನ್ನನ್ನು ಕ್ಷಮಿಸಿ, ಸರ್ಕಾರಿ ಕೆಲಸಕ್ಕಾಗಿ ಸುಮಾರು 50 ಬಾರಿ ಪ್ರಯತ್ನಿಸಿದೆ. ಆದರೆ, ನನಗೆ ಯಶಸ್ಸು ಸಿಗಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದು ಬರೆದಿರುವ ಐದು ಸಾಲಿನ ಡೆತ್‌ನೋಟ್ ಆತನ ಕೋಣೆಯಲ್ಲಿ ಪತ್ತೆಯಾಗಿದೆ. ಪದೇಪದೇ ಸರ್ಕಾರಿ ಉದ್ಯೋಗದ ಪರೀಕ್ಷೆಗಳಲ್ಲಿ ಎದುರಾಗುವ ವೈಫಲ್ಯಗಳು ಎಂತಹ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತವೆ ಎಂಬುದನ್ನು ಈ ಪ್ರಕರಣವು ಎತ್ತಿತೋರಿಸಿದೆ.
ಆನಂದ್ (23) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ 2024ರಲ್ಲಿ ಪಿಎಸ್‌ಐಟಿ (PSIT) ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಟಾಪರ್ ಆಗಿ, ಉತ್ತರ ಪ್ರದೇಶ ರಾಜ್ಯಕ್ಕೆ ಮೂರನೇ ರ್‍ಯಾಂಕ್ ಪಡೆದಿದ್ದ. ಇದೇ ಆಗಸ್ಟ್ 13, 2024ರಂದು ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಆನಂದ್‌ಗೆ ಚಿನ್ನದ ಪದಕ ಪ್ರದಾನ ಮಾಡಲಾಗಿತ್ತು. ಬಿ.ಟೆಕ್ ಮುಗಿದ ಬಳಿಕ ‘ಪವರ್ ಗ್ರಿಡ್’ನಲ್ಲಿ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ಪೂರೈಸಿದ್ದ ಈತ, ನಂತರ ಸಂಪೂರ್ಣವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನಹರಿಸಿದ್ದ. ರೈಲ್ವೆ, ಎಸ್‌ಎಸ್‌ಸಿ (SSC), ಬ್ಯಾಂಕಿಂಗ್ ಮತ್ತು ಶಿಕ್ಷಣ ಇಲಾಖೆಯ ನೇಮಕಾತಿ ಪರೀಕ್ಷೆಗಳನ್ನು ಬರೆದಿದ್ದ. ಆದರೆ, ಯಾವುದರಲ್ಲೂ ಆಯ್ಕೆಯಾಗದ ಕಾರಣ ಕಳೆದ ಕೆಲವು ತಿಂಗಳುಗಳಿಂದ ಆತ ತೀವ್ರ ಖಿನ್ನತೆಗೆ ಒಳಗಾಗಿದ್ದ ಎಂದು ಆತನ ತಂದೆ ರಾಜ್‌ಕುಮಾರ್ ತಿಳಿಸಿದ್ದಾರೆ.
ಮೂಲತಃ ಬಿಹಾರದ ಬಕ್ಸರ್‌ನವರಾದ ರಾಜ್‌ಕುಮಾರ್ ಅವರು ಖಾಸಗಿ ಕಂಪನಿಯ ನಿವೃತ್ತ ಉದ್ಯೋಗಿ. ಆನಂದ್‌ನ ಅಣ್ಣನ ಮದುವೆ ಮಾತುಕತೆಗಾಗಿ ಇಡೀ ಕುಟುಂಬ ಬಿಹಾರಕ್ಕೆ ತೆರಳಿದ್ದ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಗೋವಿಂದ್ ನಗರದ ಗುಜೈನಿ ಪ್ರದೇಶದಲ್ಲಿರುವ ಮೂರು ಅಂತಸ್ತಿನ ಮನೆಯಲ್ಲಿ ಆನಂದ್ ಒಂಟಿಯಾಗಿದ್ದ. ಮನೆಗೆಲಸದವರು ಬಂದು ಎಷ್ಟೇ ಬಾರಿ ಬಾಗಿಲು ತಟ್ಟಿದರೂ ತೆಗೆಯದಿದ್ದಾಗ, ನೆರೆಹೊರೆಯವರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಗಿಲು ಒಡೆದು ನೋಡಿದಾಗ ಆನಂದ್ ಸೀಲಿಂಗ್ ಫ್ಯಾನ್‌ಗೆ ನೇಣುಬಿಗಿದುಕೊಂಡಿರುವುದು ಕಂಡುಬಂದಿದೆ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಶನಿವಾರ ಸಂಜೆ ಭೈರವ ಘಾಟ್‌ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. “ಯುವಕ ಸರ್ಕಾರಿ ಉದ್ಯೋಗ ಸಿಗದ ಕಾರಣ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೂ ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ” ಎಂದು ಗೋವಿಂದ್ ನಗರ ಪೊಲೀಸ್ ಠಾಣೆಯ ಅಧಿಕಾರಿ ಅಶೋಕ್ ಕುಮಾರ್ ದುಬೆ ಸ್ಪಷ್ಟಪಡಿಸಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104





