ರಾಜಸ್ಥಾನದ ಕರಾನ್‌ಪುರ್ ಕ್ಷೇತ್ರಕ್ಕೆ ನಡೆದ ವಿಧಾನಸಬಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ವಿರುದ್ಧ ಭಾರಿ ಅಂತರದ ಮತಗಳಿಂದ ಜಯ ಸಾಧಿಸಿದೆ.
ಶ್ರೀಗಂಗಾನಗರ್ ಜಿಲ್ಲೆಯ ಕರಾನ್‌ಪುರ್ ಕ್ಷೇತ್ರಕ್ಕೆ ಶುಕ್ರವಾರ ಜ.5 ರಂದು ಮತದಾನ ನಡೆದಿತ್ತು. ಇಂದು ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೂಪೇಂದರ್ ಸಿಂಗ್ ಬಿಜೆಪಿಯ ಸುರೇಂದರ್ ಪಾಲ್ ಸಿಂಗ್ ಅವರನ್ನು 12,570 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಸುರೇಂದರ್ ಪಾಲ್ ಇತ್ತೀಚಿಗಷ್ಟೆ ರಚನೆಗೊಂಡ ರಾಜಸ್ಥಾನ ಬಿಜೆಪಿ ಸರ್ಕಾರದ ಸಂಪುಟದಲ್ಲಿ ಮಂತ್ರಿಯಾಗಿದ್ದರು. ಚುನಾವಣೆ ಘೋಷಣೆಯಾದ ನಂತರ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‌ನ ಅಭ್ಯರ್ಥಿ ಗುರುಮೀತ್ ಸಿಂಗ್ ಮೃತಪಟ್ಟ ಕಾರಣ ಕರಾನ್‌ಪುರ್ ಕ್ಷೇತ್ರದ ಮತದಾನವನ್ನು ಚುನಾವಣಾ ಆಯೋಗ ಮುಂದೂಡಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಡವರ ಭೂಮಿ ಮತ್ತು ನೈಸ್ ರಾಜಕಾರಣ
ಈ ಕ್ಷೇತ್ರಕ್ಕೆ ಗುರುಮೀತ್ ಸಿಂಗ್ ಅವರೇ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಶ್ರೀಗಂಗಾನಗರ್ ಜಿಲ್ಲೆಯಲ್ಲಿ ಒಟ್ಟು ಐದು ಕ್ಷೇತ್ರಗಳಿದ್ದು, ಡಿಸೆಂಬರ್ 5 ರಂದು ನಡೆದ ಫಲಿತಾಂಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದವು. ಕರಾನ್‌ಪುರ್ ಕ್ಷೇತ್ರ ಕೈ ಅಭ್ಯರ್ಥಿ ಗೆಲುವು ಗಳಿಸಿರುವುದರಿಂದ ಕಾಂಗ್ರೆಸ್ ಈ ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದೆ.
ಕೈ ಅಭ್ಯರ್ಥಿ ಗೆಲುವು ಸಾಧಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಈ ಚುನಾವಣೆಯು ಹಲವು ಸಂದೇಶಗಳನ್ನು ನೀಡಿದೆ. ಬಿಜೆಪಿಯ ಅಹಂನಿಂದ ಅಲ್ಲಿನ ನಾಯಕರು ಹೇಗೆ ನೈತಿಕತೆಯನ್ನು ತೊರೆದಿದ್ದಾರೆ ಎಂಬುದನ್ನು ತೋರಿಸುತ್ತದೆ. ಇದು ಜನರು ಬಿಜೆಪಿಗೆ ನೀಡಿದ ಕಪಾಳ ಮೋಕ್ಷವಾಗಿದೆ ಎಂದು ತಿಳಿಸಿದ್ದಾರೆ.
ನವೆಂಬರ್ 25 ರಂದು 199 ಕ್ಷೇತ್ರಗಳಿಗೆ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 115 ಗಳಿಸಿ ಅಧಿಕಾರ ಹಿಡಿದರೆ, ಕೈ ಪಕ್ಷ 69 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಇಂದಿನ ಗೆಲುವಿನೊಂದಿಗೆ ಕಾಂಗ್ರೆಸಿನ ಸಂಖ್ಯೆ 70ಕ್ಕೆ ಏರಿಕೆಯಾಗಿದೆ.