ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳು ಉತ್ತಮ ಸಾಧನೆ ಮಾಡಿವೆ. ಇತ್ತೀಚಿನ ವರದಿಗಳಂತೆ ಇಂಡಿಯಾ ಮೈತ್ರಿಕೂಟದ ಪಕ್ಷ 230ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 400ಕ್ಕೂ ಅಧಿಕ ಸ್ಥಾನ ಗೆಲುತ್ತೇವೆಂದು ಹೇಳುತ್ತಿದ್ದ ಬಿಜೆಪಿ ಮಿತ್ರ ಪಕ್ಷದ ಎನ್‌ಡಿಎ 290ರ ಗಡಿ ದಾಟಲು ತಿಣುಕುತ್ತಿದೆ. ಬಿಜೆಪಿಯ ಮುನ್ನಡೆ 240ನ್ನು ದಾಟಿಲ್ಲ.
ಮ್ಯಾಜಿಕ್ ನಂಬರ್‌ಗಳಿಗಿಂತ ಹೆಚ್ಚು ಸ್ಥಾನದೊಂದಿಗೆ ಅಚ್ಚರಿ ಫಲಿತಾಂಶ ನೀಡುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ ಈ ಬಾರಿ ಸಂಖ್ಯೆಯಲ್ಲಿ ತೊಡಕಾಗಿದ್ದು, ಕರ್ನಾಟಕ ರಾಜ್ಯ ಹಾಗೂ ದೆಹಲಿ ಕೇಂದ್ರಾಡಳಿತ ಪ್ರದೇಶ.
ಇವೆರೆಡು ರಾಜ್ಯಗಳಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳೆ ಅಧಿಕಾರದಲ್ಲಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ, ನವದೆಹಲಿಯಲ್ಲಿ ಆಪ್ ಪಕ್ಷ ಸರ್ಕಾರ ನಡೆಸುತ್ತಿದೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದ್ದ ಕರ್ನಾಟಕ ತಾನು ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಐದು ಅಭೂತಪೂರ್ವ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿತ್ತು.
ಇಷ್ಟಾಗಿಯೂ ಕರ್ನಾಟಕದ ಮತದಾರರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ನೀಡಲಿಲ್ಲ. 9 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಸಫಲರಾಗಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ 20ಕ್ಕೂ ಅಧಿಕ ಸ್ಥಾನಗಳನ್ನು ಗೆಲುತ್ತೇವೆಂದು ಇಲ್ಲಿನ ನಾಯಕರು ಹೇಳುತ್ತಿದ್ದರು. ಗ್ಯಾರಂಟಿ ಯೋಜನೆಗಳ್ಯಾವವು ಲೋಕಸಭೆ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಯಾಗಲಿಲ್ಲ. ಗೆಲುವಿನ ನಿರೀಕ್ಷೆಯಲ್ಲಿದ್ದ ಬೆಂಗಳೂರು ಗ್ರಾಮಾಂತರ, ತುಮಕೂರು, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ಸೇರಿದಂತೆ ಹಲವು ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಹುಮತದತ್ತ ಸುಳಿಯದ ಬಿಜೆಪಿ: ಇಂಡಿಯಾ ಮೈತ್ರಿಕೂಟಕ್ಕೆ ಟಿಡಿಪಿ, ಜೆಡಿಯು ಬೆಂಬಲ?
ಅದೇ ರೀತಿ ಜನಪ್ರಿಯದ ಉತ್ತುಂಗದಲ್ಲಿರುವ ನವದೆಹಲಿಯ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಕೂಡ ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 6 ಕ್ಷೇತ್ರದಲ್ಲಿ ಒಂದು ಸ್ಥಾನವನ್ನು ಗೆದ್ದಿಲ್ಲ. ಮೈತ್ರಿ ಪಕ್ಷ ಕಾಂಗ್ರೆಸ್ ಕೂಡ ಸೋಲು ಕಂಡಿದೆ. ದೆಹಲಿ ಅಬಕಾರಿ ಹಗರಣದಲ್ಲಿ ಜೈಲು ವಾಸ ಅನುಭವಿಸುತ್ತಿರುವ ಅರವಿಂದ್ ಕೇಜ್ರಿವಾಲ್ ಚುನಾವಣಾ ಪ್ರಚಾರಕ್ಕಾಗಿಯೇ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದುಕೊಂಡು ಭರ್ಜರಿ ಪ್ರಚಾರ ನಡೆಸಿದ್ದರು.
ಕಳೆದ 9 ವರ್ಷಗಳಿಂದ ಅಧಿಕಾರದಲ್ಲಿರುವ ಕೇಜ್ರಿವಾಲ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಸೇರಿದಂತೆ ಹಲವು ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸಿದ್ದರು. ಕೇಜ್ರಿವಾಲ್ ಜಾರಿಗೊಳಿಸಿದ ಯೋಜನೆಗಳು ವಿಧಾನಸಭೆಗಳಲ್ಲಿ ಕೈಹಿಡಿದರೂ, ಕಳೆದ ಮೂರು ಲೋಕಸಭೆ ಚುನಾವಣೆಗಳಲ್ಲಿ ಗೆಲುವು ತಂದುಕೊಡುತ್ತಿಲ್ಲ.
ಇವೆರೆಡು ರಾಜ್ಯಗಳಿಂದ ಹೆಚ್ಚುವರಿ 20 ಸ್ಥಾನಗಳು ಲಭಿಸಿದ್ದರೆ ಇಂಡಿಯಾ ಒಕ್ಕೂಟವು ಬಹುಮತದ ಸಂಖ್ಯೆ 272ರ ಹತ್ತಿರಕ್ಕೆ ಹೋಗುವುದಕ್ಕೆ ಸುಲಭವಾಗುತ್ತಿತ್ತು. ಇದರ ಹೊರತಾಗಿಯೂ ಇಂಡಿಯಾ ಒಕ್ಕೂಟ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಪಂಜಾಬ್, ಕೇರಳ, ಮಹಾರಾಷ್ಟ್ರ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಉತ್ತಮ ಸಾಧನೆ ಮಾಡಿದೆ.
