ಶಿವಮೊಗ್ಗದ ಹಿರಿಯ ಪತ್ರಕರ್ತ, ಶಿವಮೊಗ್ಗ ಟೆಲೆಕ್ಸ್ ಕನ್ನಡ ದಿನಪತ್ರಿಕೆ ಸಂಪಾದಕ ಎನ್. ರವಿಕುಮಾರ್ (ಟೆಲೆಕ್ಸ್) ಅವರು ಕೇರಳದ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘ ಕೊಡಮಾಡುವ ‘ಹವ್ವಾ ಹಸನ್ ಫೌಂಡೇಶನ್ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಮೇ 3ರಂದು ಸಂಘವು ರವಿಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಕರ್ನಾಟಕದ ಪತ್ರಿಕೋದ್ಯಮದಲ್ಲಿ ಎನ್ ರವಿಕುಮಾರ್ ಅವರ ವೃತ್ತಿಪರತೆ, ಸಾಮಾಜಿಕ ಸೌಹಾರ್ದತೆ ಹಾಗೂ ವೈಚಾರಿಕತೆಯ ಪ್ರತಿಪಾದನೆಯನ್ನು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘವು ಗುರುತಿಸಿದೆ. 2025ನೇ ಸಾಲಿನ ‘ಹವ್ವಾ ಹಸನ್ ಫೌಂಡೇಶನ್ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ’ಯನ್ನು ರವಿಕುಮಾರ್ ಅವರಿಗೆ ನೀಡಲು ಆಯ್ಕೆ ಮಾಡಿದೆ. ಪ್ರಶಸ್ತಿಯು ನಗದು, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ ಎಂದು ಸಂಘವು ತಿಳಿಸಿದೆ.
ಮೇ 3ರಂದು ಸಂಘವು ಗಡಿನಾಡು ಪ್ರದೇಶಾಭಿವೃದ್ದಿ ಪ್ರಾಧಿಕಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕಾಸರಗೋಡಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಪರಿಷತ್ತಿನ ಸಭಾಪತಿ ಬಸವರಾಜಹೊರಟ್ಟಿ, ಕೃಷಿ ಸಚಿವ ಚೆಲುವರಾಯಸ್ವಾಮಿ, ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಭಾಗವಹಿಸಲಿದ್ದಾರೆ.
ಅದೇ ಕಾರ್ಯಕ್ರಮದಲ್ಲಿ ರವಿಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸಂಘವು ತಿಳಿಸಿದೆ.