ಪಹಲ್ಗಾಮ್‌ ದಾಳಿ ಬಳಿಕ ಕಳೆಗುಂದಿದ ಕಾಶ್ಮೀರದ ʼಖೀರ್‌ ಭವಾನಿ ಮೇಳʼ

Date:

Advertisements

ಕಳೆದ ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್‌ ದಾಳಿ ಮತ್ತು ಭಾರತ-ಪಾಕಿಸ್ತಾನ ನಡುವಿನ ಸೈನಿಕ ಸಂಘರ್ಷದ ನಂತರ ಕಾಶ್ಮೀರದ ಮೇಲೆ ಭೀತಿಯ ವಾತಾವರಣ ಆವರಿಸಿದಂತೆ ಕಾಣುತ್ತಿದೆ. ಕಾಶ್ಮೀರಿಗಳ, ವಿಶೇಷವಾಗಿ ಕಾಶ್ಮೀರಿ ಪಂಡಿತರ ಧಾರ್ಮಿಕ ಆಚರಣೆ ʼಮಾತಾ ಖೀರ್‌ ಭವಾನಿ ಮೇಳʼಕ್ಕೂ ಅದರ ಬಿಸಿ ತಟ್ಟಿದೆ. ಈ ವರ್ಷದ ಮೇಳದಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಕುಸಿತಗೊಂಡಿದೆ. ಈ ಹಿನ್ನೆಲೆ, ಸ್ಥಳೀಯ ರಾಜಕೀಯ ನಾಯಕರು, ಪಂಡಿತರು ಕಣಿವೆಯ ದೇವಾಲಯಗಳಿಗೆ ಆಗಮಿಸುವಂತೆ ಪ್ರವಾಸಿಗರಿಗೆ, ಭಕ್ತರಿಗೆ ಪ್ರೋತ್ಸಾಹಿಸುತ್ತಿದ್ದಾರೆ.

ಮಾಹಿತಿಯಂತೆ, ಈ ಬಾರಿ ದೇಶದ ವಿವಿಧ ಭಾಗಗಳಿಂದ ಕಾಶ್ಮೀರಕ್ಕೆ ಬಂದಿರುವ ಮೊದಲ ಹಂತದ ಕಾಶ್ಮೀರಿ ಪಂಡಿತ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ಕಳೆದ ವರ್ಷ ಸುಮಾರು 4,500 ಇದ್ದ ಭಕ್ತರ ಸಂಖ್ಯೆ ಈ ವರ್ಷ 2,500ಕ್ಕೆ ಕುಸಿದಿದೆ. ಕಳೆದ ವರ್ಷ 30,000 ಕ್ಕಿಂತ ಹೆಚ್ಚು ಭಕ್ತರು ಈ ಮೇಳದಲ್ಲಿ ಭಾಗವಹಿಸಿದ್ದರು ಎಂಬುದು ಗಮನಾರ್ಹ. ಈ ವರ್ಷ ಹಬ್ಬಕ್ಕಾಗಿ ಹೆಚ್ಚುವರಿ ಭದ್ರತಾ ವ್ಯವಸ್ಥೆಗಳನ್ನು ಕೂಡ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

WhatsApp Image 2025 06 03 at 4.00.11 PM

ʼಖೀರ್‌ ಭವಾನಿ ಮೇಳʼದ ಹಿನ್ನೆಲೆ:

Advertisements

ಖೀರ್ ಭವಾನಿಯ ಕಥೆಯು ಪ್ರಾಚೀನ ಪುರಾಣಗಳಲ್ಲಿ ಉಲ್ಲೇಖಿತವಾಗಿದ್ದು, ದೇವಿಯು ಲಂಕಾದಿಂದ ತಾನಾಗಿಯೇ ಕಾಶ್ಮೀರದತ್ತ ಬಂದು, ಈ ಸ್ಥಳದಲ್ಲಿ ನೆಲೆಸಿದಳು ಎಂಬುದು ಕಾಶ್ಮೀರಿ ಭಕ್ತರ ನಂಬಿಕೆ. ಭಕ್ತರು ದೇವಿಗೆ ‘ಖೀರ್‌’ (ಪಾಯಸ /ಅಕ್ಕಿ ಮತ್ತು ಹಾಲಿನಿಂದ ತಯಾರಿಸಿದ ಮಿಠಾಯಿ), ಅರ್ಪಿಸುವ ಸಂಪ್ರದಾಯದಿಂದ ಈ ಕ್ಷೇತ್ರಕ್ಕೆ ಖೀರ್‌ ಭವಾನಿ ಎಂಬ ಹೆಸರು ಬಂದಿದೆಯಂತೆ.

ಕಾಶ್ಮೀರದ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾಗಿರುವ ಖೀರ್‌ ಭವಾನಿ ದೇವಾಲಯ, ಕಾಶ್ಮೀರೀ ಪಂಡಿತ ಸಮುದಾಯದ ಧಾರ್ಮಿಕ ನೆಲೆಯಾಗಿದ್ದು, ಇಲ್ಲಿ ವಾರ್ಷಿಕ ಮೇಳವನ್ನು ಜ್ಯೇಷ್ಠ ಅಷ್ಟಮಿ ದಿನದಂದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೇವಿಯು ರಾಗ್ನ್ಯಾ ಭಗವತಿ ಎಂಬ ಹೆಸರಿನಲ್ಲಿ ಪೂಜಿತಳಾಗುತ್ತಿದ್ದು, ಈ ಕ್ಷೇತ್ರವು ಗಂಡರ್‌ಬಲ್ ಜಿಲ್ಲೆಯ ತುಲಮುಲ್ಲಾ ಗ್ರಾಮದಲ್ಲಿದೆ. ಜತೆಗೆ ಕುಪ್ವಾರದ ಟಿಕ್ಕರ್, ಕುಲ್ಗಾಂದ ದೇವಸರ್, ಮಂಜಾಂ, ಅನಂತನಾಗದ ಲೋಗ್ರಿಪೋರಾ ಎಂಬ ಸ್ಥಳಗಳಲ್ಲಿ ಪ್ರತಿ ವರ್ಷ ಆಯೋಜಿಸಲಾಗುತ್ತದೆ.

WhatsApp Image 2025 06 03 at 4.00.44 PM

ಸಾಂಸ್ಕೃತಿಕ ಸೌಹಾರ್ದತೆಗೆ ಪ್ರತೀಕ:

ಈ ಮೇಳವು ಕೇವಲ ಧಾರ್ಮಿಕ ಉತ್ಸವವಲ್ಲ; ಅದು ಅಲ್ಲಿನ ಹಿಂದೂ-ಮುಸ್ಲಿಂ ಸಹಜೀವನದ ಜೀವಂತ ಉದಾಹರಣೆ. 1990ರ ದಶಕದಲ್ಲಿ ಕಾಶ್ಮೀರೀ ಪಂಡಿತರ ನಿರ್ಗಮನದ ನಂತರವೂ, ಸ್ಥಳೀಯ ಮುಸ್ಲಿಂ ಸಮುದಾಯವೇ ಈ ದೇವಾಲಯದ ಸಂರಕ್ಷಣೆ, ಶುದ್ಧತೆ ಮತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಂಡಿತ್ತು ಎನ್ನಲಾಗುತ್ತದೆ. ಈ ಹಿನ್ನೆಲೆ, ಖೀರ್ ಭವಾನಿ ಮೇಳವು ಸಾಮುದಾಯಿಕ ಸಹಬಾಳ್ವೆಯ ಚಿಹ್ನೆಯಾಗಿ ಪರಿಣಮಿಸಿದೆ.

ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಯಾತ್ರಾರ್ಥಿಗಳಿಗೆ ಮನವಿ:

ಹಬ್ಬದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ನಾಯಕ ಕರಣ್ ಸಿಂಗ್ ಭಕ್ತರಲ್ಲಿ ಕೇಳಿಕೊಂಡಿದ್ದರು. ನಿನ್ನೆ (ಜೂ.2) ಖೀರ್‌ ಭವಾನಿ ದೇವಾಲಯಕ್ಕೆ ಭೇಟಿ ನೀಡಿ ಭದ್ರತೆ ಸೇರಿ ಅಗತ್ಯ ಕ್ರಮಗಳನ್ನು ಪರಿಶೀಲಿಸಿದ ನಂತರ ಮಾತನಾಡಿ, “ಇದು ದೇವಿಯ ಮಹಾ ಅನುಗ್ರಹವಾಗಿರುವ ಸ್ಥಳ. ನಾವು ಭಯಪಡುವ ಅಗತ್ಯವಿಲ್ಲ. ನಂಬಿಕೆಯಲ್ಲಿಯೇ ಶಕ್ತಿ ಇದೆ ಎಂಬುದನ್ನು ಜಗತ್ತಿಗೆ ತೋರಿಸಬೇಕು. ಕಾಶ್ಮೀರದ ಜನರು ಈ ಘರ್ಷಣೆಯ ವರ್ಷಗಳಲ್ಲಿ ಬಹುಮಟ್ಟಿಗೆ ಬಾಧೆಪಟ್ಟಿದ್ದಾರೆ. ಭಯವನ್ನು ತೊರೆದು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಈ ಭಾಗದ ಪುನಶ್ಚೇತನಕ್ಕೆ ಬೆಂಬಲ ನೀಡಬೇಕಿದೆ” ಎಂದು ಹೇಳಿದ್ದರು.

WhatsApp Image 2025 06 03 at 4.17.54 PM

“ಈ ಹಬ್ಬವು ಇತಿಹಾಸಾತೀತವಾಗಿ ಸೌಹಾರ್ದತೆಯ ಅಪೂರ್ವ ಉದಾಹರಣೆಯಾಗಿದೆ. ಕಾಶ್ಮೀರಿ ಪಂಡಿತರ ನಿರ್ಗಮನದ ಬಳಿಕದ ಸಂಕಟಮಯ ವರ್ಷಗಳಲ್ಲಿ ಕೂಡಾ, ಸ್ಥಳೀಯ ಮುಸ್ಲಿಂ ಸಮುದಾಯವೇ ಖೀರ್ ಭವಾನಿ ದೇವಾಲಯದ ಪಾಲನೆ ಮತ್ತು ರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ದೇವಾಲಯದ ಪವಿತ್ರತೆ ಕಾಪಾಡುವ ಈ ಕಾಳಜಿ ಮತ್ತು ನಿಷ್ಠೆ ಎರಡೂ ಸಮುದಾಯಗಳ ನಡುವೆ ಇರುವ ಆತ್ಮೀಯ ಸಂಬಂಧಗಳ ಸಂಕೇತವಾಗಿದೆ” ಎಂದಿದ್ದರು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಅಧ್ಯಕ್ಷೆ ಮೆಹಬೂಬಾ ಮುಫ್ತಿ.

ಜಮ್ಮು ಮತ್ತು ಕಾಶ್ಮೀರ ಅಪ್ನಿ ಪಾರ್ಟಿಯ ಅಧ್ಯಕ್ಷ ಅಲ್ತಾಫ್ ಬುಖಾರಿ, “ಖೀರ್ ಭವಾನಿ ಮೇಳವು ಶತಮಾನಗಳಿಂದಲೂ ಕಾಶ್ಮೀರದ ಬಹುಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ. ಈ ಪವಿತ್ರ ಹಬ್ಬವು ಸಮುದಾಯಗಳ ನಡುವೆ ಸೌಹಾರ್ದತೆ, ಬಂಧುತ್ವ ಮತ್ತು ಪರಸ್ಪರ ಗೌರವವನ್ನು ಬೆಳೆಸುವಲ್ಲಿ ಅತ್ಯಂತ ಮಹತ್ವಪೂರ್ಣ ಪಾತ್ರ ವಹಿಸಿದೆ” ಎಂದು ಹೇಳಿದ್ದಾರೆ.

ಹೆಚ್ಚುವರಿ ಭದ್ರತೆ:

ಈ ವರ್ಷದ ಮೇಳವು ಬಿಗಿ ಬಂದೋಬಸ್ತಿನಲ್ಲಿ ನಡೆಯುತ್ತಿದ್ದು, ಜಿಲ್ಲಾಡಳಿತ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ನೀಡಲು ಸಮರ್ಪಕ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಅಧಿಕೃತವಾಗಿ ಮೇಳವು ಒಂದು ದಿನ (ಜೂ.3) ನಡೆದರೂ ಯಾತ್ರಾರ್ಥಿಗಳು, ಭಕ್ತರು ಮೇಳದ ಮೊದಲೆರಡು ದಿನ ಹಾಗೂ ಮೇಳದ ಬಳಿಕ ಎರಡು ದಿನಗಳವರೆಗೆ ದೇವಿಯ ಕ್ಷೇತ್ರಗಳಲ್ಲಿ ತಂಗುತ್ತಾರೆ. ಹಾಗಾಗಿ ಈ ವರ್ಷ ಅಗತ್ಯವಾಗಿ ಹೆಚ್ಚಿನ ಭದ್ರತೆ ನಡುವೆ ಮೇಳ ನಡೆಯುತ್ತಿದೆ.

“ಯಾತ್ರಾರ್ಥಿಗಳ ಆಹಾರ ಮತ್ತು ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ಲಂಗರ್ ಸೇವೆಗಳು ಮತ್ತು ಕುಡಿಯುವ ನೀರಿನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಉಚಿತ ಆರೋಗ್ಯ ಸೇವೆಗಳಿಗೂ ವ್ಯವಸ್ಥೆ ಮಾಡಲಾಗಿದ್ದು, ವೈದ್ಯಕೀಯ ತಂಡಗಳು ಹಾಗೂ ಆಂಬ್ಯುಲೆನ್ಸ್‌ಗಳು ಮೇಳದ ಅವಧಿಯಲ್ಲಿ ಸಿದ್ಧ ಸ್ಥಿತಿಯಲ್ಲಿ ಇರುತ್ತವೆ. ಹೆಚ್ಚಿನ ಅನುಕೂಲಕ್ಕಾಗಿ ಚಲಿಸುವ ಎಟಿಎಂಗಳನ್ನು ಕೂಡಾ ಒದಗಿಸಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Capture 19

ಯಾತ್ರಾರ್ಥಿಗಳ ಭದ್ರತೆ ಮತ್ತು ವಸತಿಗಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಮೇಳದಲ್ಲಿ ಕಡಿಮೆ ಭಕ್ತರು ಭಾಗವಹಿಸುತ್ತಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರದಲ್ಲಿ ಪ್ರವಾಸೋದ್ಯಮ ಉತ್ತಮ ಚೇತರಿಕೆ ಕಂಡಿತ್ತು. 2024ರಲ್ಲಿ 30 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಇದು ಕಳೆದ ವರ್ಷಗಳಿಗಿಂತ ಹೆಚ್ಚಿನದು ಮತ್ತು ಸ್ಥಳೀಯ ಆರ್ಥಿಕತೆಗೆ ಶೇ.7ರಷ್ಟು ಉತ್ತೇಜನ ನೀಡಿತ್ತು. ಆದರೆ, 2025ರ ಏಪ್ರಿಲ್‌ ನಂತರ ಈ ಬೆಳವಣಿಗೆಯೆಲ್ಲವೂ ಹಿಮ್ಮುಖವಾಗಿದೆ. ದುರಂತದಿಂದ ಪ್ರವಾಸಿಗರಲ್ಲಿ ಭಯ ಉಂಟಾಗಿ ಅವರು ತಮ್ಮ ಕಾಶ್ಮೀರ ಪ್ರವಾಸ ಯೋಜನೆಗಳನ್ನೇ ರದ್ದುಗೊಳಿಸುತ್ತಿದ್ದಾರೆ. ಸಮೀಕ್ಷೆಗಳ ಪ್ರಕಾರ ಶೇಕಡಾ 60ರಷ್ಟು ಜನರು ತಮ್ಮ ಪ್ರವಾಸ ಮುಂದೂಡಿದ್ದಾರೆ ಅಥವಾ ರದ್ದುಗೊಳಿಸಿದ್ದಾರೆ. ಇದರಿಂದ ಸ್ಥಳೀಯ ವ್ಯಾಪಾರಗಳು ಮತ್ತು ಸಾವಿರಾರು ಜನರ ಜೀವನೋಪಾಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಿದೆ. ಈಗ ಧಾರ್ಮಿಕ ಮೇಳಗಳೂ ಈ ಪಟ್ಟಿಗೆ ಸೇರಲಿವೆಯಾ ಎನ್ನುವ ಮುನ್ಸೂಚನೆ ಸಿಗುತ್ತಿದೆ.

ಸೈನಿಕ ಸಂಘರ್ಷ, ಕೋಮು ಕ್ರಾಂತಿಗಳ ನಡುವೆಯೂ ತನ್ನ ತಾನು ಸ್ಥಿರಗೊಳಿಸಿಕೊಳ್ಳಲು ನಿತ್ಯ ಹೋರಾಡುತ್ತಲೇ ಇರುವ ಕಾಶ್ಮೀರ ಖೀರ್ ಭವಾನಿ ಮೇಳವು ಕಣಿವೆಯ ನಾಡಿನ ಸಂಸ್ಕೃತಿ ಮತ್ತು ಸಮುದಾಯಗಳ ನಡುವಿನ ಬಾಂಧವ್ಯಕ್ಕೆ ಜೀವಂತ ಸಾಕ್ಷಿಯಾಗಿದೆ. ಪಹಲ್ಗಾಮ್‌ನ ದಾಳಿಯ ನಂತರ ಭಕ್ತರಲ್ಲಿ ಕಂಡುಬಂದ ಭೀತಿ, ಈ ವರ್ಷದ ಮೇಳದ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದ್ದರೂ, ಸ್ಥಳೀಯರ ಸಹಕಾರ ಮತ್ತು ಭದ್ರತಾ ವ್ಯವಸ್ಥೆಯ ನಡುವೆ ನಡೆಯುತ್ತಿರುವ ಈ ಹಬ್ಬವು ನಂಬಿಕೆ ಭಯಕ್ಕಿಂತ ಶಕ್ತಿಯುತವಾಗಿದೆ ಎಂಬ ಸಂದೇಶ ಸಾರಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X