ಅಸ್ಸಾಂ ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಉಂಟಾಗಿರುವ ಪ್ರವಾಹದಿಂದ 1 ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದು, ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಸಂಪೂರ್ಣ ಜಲಾವೃತವಾಗಿದೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯ ಇತ್ತೀಚಿನ ವರದಿಗಳನ್ನು ಬಿಡುಗಡೆ ಮಾಡಿದೆ. ವರದಿಯನ್ವಯ ಇಂದಿನವರೆಗೆ, 13 ಜಿಲ್ಲೆಗಳ 371 ಗ್ರಾಮಗಳಲ್ಲಿ ಒಟ್ಟು 98,840 ಜನರು ಪ್ರವಾಹದಿಂದ ತತ್ತರಿಸುತ್ತಿದ್ದಾರೆ. ಆದಾಗ್ಯೂ, ಯಾವುದೇ ಹೊಸ ಸಾವುನೋವುಗಳು ಉಂಟಾಗಿಲ್ಲ. ಈ ವರ್ಷದ ಸಾವಿನ ಸಂಖ್ಯೆ 7 ರಷ್ಟಿದೆ ಎಂದು ತಿಳಿಸಿದೆ.
ದಿಖೌ ಮತ್ತು ಬ್ರಹ್ಮಪುತ್ರ ನದಿಗಳು ಪ್ರಸ್ತುತ ಅಸ್ಸಾಂನ ಹಲವು ಸ್ಥಳಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ದಿಖೌ ನದಿಯು ಶಿವಸಾಗರದಲ್ಲಿ ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿ ಹರಿಯುತ್ತಿದ್ದರೆ, ಬ್ರಹ್ಮಪುತ್ರ ಧುಬ್ರಿ, ತೇಜ್‌ಪುರ ಮತ್ತು ನೇಮತಿಘಾಟ್‌ನಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನಲ್ಲಿ ವಿಪಕ್ಷಗಳ ಒಗ್ಗಟ್ಟಿನ ಸಭೆ : ಯುಪಿಎ ಹೆಸರು ಬದಲಾವಣೆ ಸಾಧ್ಯತೆ
ಏತನ್ಮಧ್ಯೆ, ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಾಜಿರಂಗ ರಾಷ್ಟ್ರೀಯ ಉದ್ಯಾನವನ (ಕೆಎನ್‌ಪಿ) ಅರಣ್ಯ ವ್ಯಾಪ್ತಿಯ ಕೆಲವು ಭಾಗಗಳು ಜಲಾವೃತಗೊಂಡಿವೆ. ಜನಪ್ರಿಯ ಪ್ರವಾಸಿ ತಾಣವಾದ ಕೆಎನ್‌ಪಿಯ ಅಗೊರಟೋಲಿ ಅರಣ್ಯ ಶ್ರೇಣಿಯ ಶೇ 90 ರಷ್ಟು ಪ್ರವಾಹದಿಂದಾಗಿ ಮುಳುಗಿದೆ ಎಂದು ಅರಣ್ಯ ಅಧಿಕಾರಿ ತಿಳಿಸಿದ್ದಾರೆ.
“ಕಳೆದೆರಡು ದಿನಗಳಿಂದ ಮಳೆಯಿಂದಾಗಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಅರವತ್ತೆಂಟು ಅರಣ್ಯ ಶಿಬಿರಗಳು ಜಲಾವೃತವಾಗಿವೆ. ಪ್ರವಾಹದ ನೀರು ಕೆಎನ್‌ಪಿಗೆ ಪ್ರವೇಶಿಸಿ ಉದ್ಯಾನದ ಹೆಚ್ಚಿನ ಅರಣ್ಯ ಶಿಬಿರಗಳು ಜಲಾವೃತವಾಗಿವೆ. ಖೋರಾ ವ್ಯಾಪ್ತಿಯಲ್ಲಿ ಕನಿಷ್ಠ 15 ಅರಣ್ಯ ಶಿಬಿರಗಳು ಜಲಾವೃತವಾಗಿವೆ. ಬಗೋರಿ ವ್ಯಾಪ್ತಿಯಲ್ಲಿ ಒಂಬತ್ತು ಶಿಬಿರಗಳು ಮತ್ತು ಬುರಾಫರ್‌ನಲ್ಲಿ ಆರು ಅರಣ್ಯ ಶಿಬಿರಗಳು ಜಲಾವೃತಗೊಂಡಿವೆ. ಇಲ್ಲಿಯವರೆಗೆ ಯಾವುದೇ ಪ್ರಾಣಿಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಎರಡು ಹಂದಿ ಹಾಗೂ ಎರಡು ಜಿಂಕೆಗಳನ್ನು ಇಂದು ರಕ್ಷಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ” ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಹದಗೆಟ್ಟಿದ್ದರಿಂದ ಶನಿವಾರದಿಂದ ಕಾಜಿರಂಗದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಸದ್ಯ ಪರಿಸ್ಥಿತಿ ಗಂಭೀರವಾಗಿಲ್ಲ. ಆದರೆ ನಾವು ವನ್ಯಜೀವಿಗಳ ಸುರಕ್ಷತೆಯ ಮೇಲೆ ತೀವ್ರ ನಿಗಾ ಇರಿಸಿದ್ದೇವೆ” ಎಂದು ಅಧಿಕಾರಿ ಹೇಳಿದ್ದಾರೆ.