ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಯುವ ಸಂದರ್ಭದಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ರಾಹುಲ್ ಗಾಂಧಿ ಅವರನ್ನು ನಿಂದನೆ ಮಾಡಿದ್ದು ಸದನದಲ್ಲಿ ವಾಗ್ವಾದಕ್ಕೆ ಕಾರಣವಾಯಿತು.
ಅನುರಾಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಮಾತನಾಡಿದ ರಾಹುಲ್ ಗಾಂಧಿ, “ನಿಮಗೆ ಬೇಕಾದಷ್ಟು ನನ್ನನ್ನು ಅವಮಾನಿಸಿದ್ದೀರಿ, ಪ್ರತಿದಿನ ಮಾಡುತ್ತಿದ್ದೀರಿ. ಯಾರು ಆದಿವಾಸಿ, ದಲಿತ ಹಾಗೂ ಹಿಂದುಳಿದವರ ಬಗ್ಗೆ ಮಾತನಾಡುತ್ತಾರೋ ಅವರನ್ನು ಅವಮಾನಿಸಲಾಗುತ್ತಿದೆ. ನಾನು ಅವಮಾನಗಳನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ಅನುರಾಗ್ ಠಾಕೂರ್ ನನ್ನನ್ನು ನಿಂದಿಸಿ, ಅವಮಾನಿಸಿದ್ದಾರೆ. ಅವರಿಂದ ಯಾವುದೇ ಕ್ಷಮೆ ನನಗೆ ಬೇಕಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ದೇಶದಲ್ಲಿ ಎಷ್ಟು ಹಿಂದುಳಿದವರು, ದಲಿತರು ಹಾಗೂ ಬುಡಕಟ್ಟು ಸಮುದಾಯದವರಿದ್ದಾರೊ ಎಂಬುದರ ಬಗ್ಗೆ ಯಾರಿಗೂ ತಿಳಿದಿಲ್ಲ. ಜನಸಂಖ್ಯೆಯ ಬಗ್ಗೆ ದೊಡ್ಡ ದೊಡ್ಡ ಯೋಜನೆ ರೂಪಿಸುವವರಿಗೆ ಶೋಷಿತರ ಸಂಖ್ಯೆಯ ಬಗ್ಗೆ ತಿಳಿದಿಲ್ಲ. ಬಿಜೆಪಿ ಸರ್ಕಾರಕ್ಕೆ ಜಾತಿ ಗಣತಿಯ ಅಂಕಿಅಂಶಗಳ ಬಗ್ಗೆ ತಿಳಿದಿಲ್ಲ. ಜನಸಂಖ್ಯೆಯಲ್ಲಿ ವಿವಿಧ ಜಾತಿ ಗುಂಪುಗಳ ಬಗ್ಗೆ ತಿಳಿದುಕೊಳ್ಳಲು ನಾವು ಸಂಸತ್ತಿನಲ್ಲಿ ಜಾತಿ ಗಣತಿಯ ಮಸೂದೆಯನ್ನು ಮಂಡಿಸುತ್ತೇವೆ. ಒಮ್ಮೆ ಜಾತಿ ಗಣತಿ ಪೂರ್ಣಗೊಂಡ ನಂತರ ದೇಶ ಬದಲಾಗುತ್ತದೆ” ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೊಂದಾಣಿಕೆ ರಾಜಕಾರಣ ಮತ್ತು ಪಾದಯಾತ್ರೆ ಪಾಲಿಟಿಕ್ಸ್
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕೂಡ ಧ್ವನಿಗೂಡಿಸಿ, “ನೀವು ಯಾರೊಬ್ಬರ ಜಾತಿಯನ್ನು ಹೇಗೆ ಕೇಳುತ್ತೀರಿ? ನೀವು ಯಾರ ಜಾತಿಯನ್ನು ಕೇಳಲು ಸಾಧ್ಯವಿಲ್ಲ” ಎಂದು ಪ್ರಶ್ನಿಸಿದರು.
ಜಾತಿ ಗೊತ್ತಿಲ್ಲದವರು ಜಾತಿ ಗಣತಿಯ ಬಗ್ಗೆ ಮಾತನಾಡುತ್ತಾರೆ. ಈ ಸದನದಲ್ಲಿಯೇ ಮಾಜಿ ಪ್ರಧಾನಿ ಆರ್‌ಜಿ -1 (ರಾಜೀವ್ ಗಾಂಧಿ) ಅವರು ಒಬಿಸಿಗಳಿಗೆ ಮೀಸಲಾತಿಯನ್ನು ವಿರೋಧಿಸಿದ್ದರು ಎಂಬುದನ್ನು ಸ್ಪೀಕರ್‌ಗೆ ನೆನಪಿಸಲು ಬಯಸುತ್ತೇನೆ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ರಾಹುಲ್ ಗಾಂಧಿ ಬಗ್ಗೆ ಪರೋಕ್ಷವಾಗಿ ಹೇಳಿದ್ದು, ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
