ಅಬಕಾರಿ ನೀತಿ ಪ್ರಕರಣದಲ್ಲಿ ಇಡಿ ಬಂಧನಕ್ಕೆ ಒಳಗಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದ್ದು, ಅಲ್ಲಿ ಅವರಿಗೆ ಪುಸ್ತಕ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಲು ದೆಹಲಿ ಕೋರ್ಟ್ ಅವಕಾಶ ನೀಡಿದೆ.
ವಿಶೇಷ ಡಯೆಟ್‌ಗೆ ಕೋರ್ಟ್ ಅನುಮತಿಸಿದ್ದು, ಅರವಿಂದ್ ಕೇಜ್ರಿವಾಲ್ ಅವರು ಮನೆಯಲ್ಲಿ ತಯಾರಿಸಿದ ಊಟ ಸೇವಿಸಲು, ಮಿನರಲ್ ಬಾಟಲಿ ನೀರು ಪಡೆಯಬಹುದಾಗಿದೆ. ಜೊತೆಗೆ ದೇಹದಲ್ಲಿ ಸಕ್ಕರೆ ಪ್ರಮಾಣ ಏರುಪೇರಾದಾಗ ಸಿಹಿ (toffees) ಪಡೆಯಲು ಅವಕಾಶ ನೀಡಲಾಗಿದೆ. ಜೊತೆಗೆ ಪತ್ನಿ ಸುನೀತಾ ಕೇಜ್ರಿವಾಲ್ ಅವರನ್ನು ಜೈಲಿನಲ್ಲಿ ಭೇಟಿಯಾಗಲು ಅವಕಾಶವಿದೆ.
ಇನ್ನು ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯವನ್ನು ಪರಿಶೀಲಿಸುತ್ತಿರಲು ತಿಳಿಸಲಾಗಿದೆ. ಕೇಜ್ರಿವಾಲ್ ಮಧುಮೇಹ ಹೊಂದಿರುವ ಕಾರಣ ಶುಗರ್ ಸೆನ್ಸರ್ ಸೌಲಭ್ಯ ನಿಡಲಾಗಿದೆ. ಕೇಜ್ರಿವಾಲ್ ಅವರು ತಮ್ಮ ಕನ್ನಡಕ ಮತ್ತು ತಮ್ಮ ಧಾರ್ಮಿಕ ಲಾಕೆಟ್ ಧರಿಸಲು ಅವಕಾಶವಿದೆ. ಇನ್ನು ಕೆಲವು ಪುಸ್ತಕಗಳನ್ನು ನೀಡುವಂತೆ ಕೇಜ್ರಿವಾಲ್ ಕೋರ್ಟ್ ಮುಂದೆ ಮನವಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್‌ಗೆ 15 ದಿನ ನ್ಯಾಯಾಂಗ ಬಂಧನ
ಅದರಂತೆ ಕೋರ್ಟ್ ಭಗವದ್ಗೀತೆ, ರಾಮಾಯಣ, ಪತ್ರಕರ್ತೆ ನೀರ್ಜಾ ಚೌಧರಿ ಬರೆದ ಹೌ ಪ್ರೈಮ್ ಮಿನಿಸ್ಟರ್ಸ್ ಡಿಸೈಡ್ (How Prime Ministers Decide) ಪುಸ್ತಕ ನೀಡಲು ಜೈಲಿನ ಅಧಿಕಾರಿಗಳಿಗೆ ತಿಳಿಸಿದೆ. ಜೊತೆಗೆ ಇತರೆ ಪುಸ್ತಕ, ನೋಟ್‌ಪ್ಯಾಡ್, ಪೆನ್ ನೀಡಲು ತಿಳಿಸಲಾಗಿದೆ.
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿಯ ರೋಸ್ ಅವಿನ್ಯೂ ಕೋರ್ಟ್ 15 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ. ಇ.ಡಿ ಕಸ್ಟಡಿ ಅವಧಿ ಸೋಮವಾರ ಅಂತ್ಯವಾದ ಕಾರಣ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.