ಮಲಯಾಳಂನ ಖ್ಯಾತ ನಟ ಮತ್ತು ಆಡಳಿತಾರೂಢ ಸಿಪಿಐ(ಎಂ) ಶಾಸಕ ಎಂ ಮುಖೇಶ್ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಮುಖೇಶ್ ಅವರು ವರ್ಷಗಳ ಹಿಂದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂಬ ಮಹಿಳಾ ನಟಿ ಆರೋಪ ಮಾಡಿದ್ದರು. ಈ ಆರೋಪದ ಆಧಾರದಲ್ಲಿ ಮುಖೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬುಧವಾರ ರಾತ್ರಿ ಕೊಚ್ಚಿ ನಗರದ ಮರಡು ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ ಐಪಿಸಿ 376 (ಅತ್ಯಾಚಾರ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಸ ಭಾರತೀಯ ನ್ಯಾಯ ಸಂಹಿತೆ ಜಾರಿಗೆ ಬರುವ ಮುನ್ನವೇ ಈ ಅಪರಾಧ ನಡೆದಿರುವುದರಿಂದ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಲೈಂಗಿಕ ದೌರ್ಜನ್ಯವಾಗಿದ್ದಕ್ಕೆ ಮಲಯಾಳಂ ಚಿತ್ರರಂಗ ತೊರೆದೆ: ನಟಿ ಮಿನು ಮುನೀರ್
ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಬಗ್ಗೆ ಬೆಳಕು ಚೆಲ್ಲುವ ನ್ಯಾಯಮೂರ್ತಿ ಕೆ ಹೇಮಾ ಸಮಿತಿಯ ವರದಿಯ ಬೆನ್ನಲ್ಲೇ ಹಲವಾರು ನಟಿಯರು ತಮ್ಮ ಮೇಲಾದ ಅತ್ಯಾಚಾರ, ಲೈಂಗಿಕ ಕಿರುಕುಳದ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.
ಎಂಟು ವರ್ಷಗಳ ಹಿಂದೆ ಹೋಟೆಲ್‌ವೊಂದರಲ್ಲಿ ನಟಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ನಟ ಸಿದ್ಧಿಕ್ ವಿರುದ್ಧ ತಿರುವನಂತಪುರಂ ಮ್ಯೂಸಿಯಂ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದರು.
Massive allegations against Actor #Mukesh, Actor #Jayasurya and the culture of Malayalam film industry, drugs & mafia. pic.twitter.com/jUXYL0Ehbn
— Deepu (@deepu_drops) August 26, 2024
ಇನ್ನು ಹಲವಾರು ನಟರು ಮತ್ತು ನಿರ್ದೇಶಕರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಶೋಷಣೆಯ ಆರೋಪಗಳ ನಡುವೆ, ರಾಜ್ಯ ಸರ್ಕಾರ ಆಗಸ್ಟ್ 25ರಂದು ತನಿಖೆಗಾಗಿ ಏಳು ಸದಸ್ಯರ ವಿಶೇಷ ತನಿಖಾ ತಂಡವನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಇದಾದ ಬಳಿಕ ನಟಿಯರು ಮುಂದೆ ಬಂದು ದೂರು ದಾಖಲಿಸುತ್ತಿದ್ದಾರೆ.
