ಕಣ್ಣೂರು ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಕೇರಳದ ಸಿಪಿಎಂ ನಾಯಕಿ ಪಿಪಿ ದಿವ್ಯಾ ಅವರಿಗೆ ಕಣ್ಣೂರಿನ ಸ್ಥಳೀಯ ನ್ಯಾಯಾಲಯ ಮಂಗಳವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದು ಇದಾದ ಬಳಿಕ ದಿವ್ಯಾ ಪೊಲೀಸರ ಮುಂದೆ ಶರಣಾಗಿದ್ದಾರೆ.
ಆಕೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಣ್ಣೂರು ಜಿಲ್ಲಾ ಪೊಲೀಸ್ ಮುಖ್ಯಸ್ಥ ಅಜಿತ್ ಕುಮಾರ್ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಈಗಾಗಲೇ ದಿವ್ಯಾ ಬಂಧನ ವಿಳಂಬ ಮಾಡಿದ್ದಕ್ಕೆ ಪೊಲೀಸರು ತೀವ್ರ ಟೀಕೆಗೆ ಗುರಿಯಾಗಿದ್ದರು.
ತಲಶ್ಶೇರಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ ಟಿ ನಿಸ್ಸಾರ್ ಅಹಮ್ಮದ್ ಅವರು ದಿವ್ಯಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.
ಇದನ್ನು ಓದಿದ್ದೀರಾ? ಕರಾವಳಿಗರ ಭಾರೀ ವಿರೋಧದ ನಡುವೆ ಬೆಂಗಳೂರು – ಮಂಗಳೂರು – ಕಣ್ಣೂರು ರೈಲು ಕೊಯಿಕ್ಕೋಡ್‌ಗೆ ವಿಸ್ತರಣೆ
ಕಣ್ಣೂರು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ನವೀನ್ ಬಾಬು ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ದಿವ್ಯಾ ಮೇಲಿದೆ.
ಅಕ್ಟೋಬರ್ 14ರಂದು ನಡೆದ ನವೀನ್ ಬಾಬು ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ದಿವ್ಯಾ, ಬಾಬು ಚೆಂಗಲೈನಲ್ಲಿ ಪೆಟ್ರೋಲ್ ಪಂಪ್‌ನ ಅನುಮೋದನೆಯನ್ನು ಹಲವಾರು ತಿಂಗಳುಗಳಿಂದ ನವೀನ್ ಬಾಬು ವಿಳಂಬಗೊಳಿಸಿದ್ದರು ಎಂದು ಟೀಕಿಸಿದ್ದರು.
ವರ್ಗಾವಣೆಯಾದ ಎರಡು ದಿನಗಳ ನಂತರ ನವೀನ್ ಬಾಬು ಪೆಟ್ರೋಲ್ ಪಂಪ್‌ಗೆ ಅನುಮೋದನೆ ನೀಡಿದ್ದರು ಎಂದು ಹೇಳುವ ಮೂಲಕ ಇದರ ಹಿಂದಿನ ಕಾರಣ ತನಗೆ ತಿಳಿದಿದೆ ಎಂದು ದಿವ್ಯಾ ಹೇಳಿದ್ದರು. ಇದಾದ ಮರುದಿನ ನವೀನ್ ಬಾಬು ಕಣ್ಣೂರಿನ ತನ್ನ ಕ್ವಾರ್ಟರ್ಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು.
ಬಿಎನ್‌ಎಸ್‌ಎಸ್‌ನ ಸೆಕ್ಷನ್ 108 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವನ್ನು ದಿವ್ಯಾ ವಿರುದ್ಧ ಪೊಲೀಸರು ದಾಖಲಿಸಿದ್ದರು. ಇದಾದ ಬಳಿಕ ನಿರೀಕ್ಷಣಾ ಜಾಮೀನು ಕೋರಿ ಅಕ್ಟೋಬರ್ 19ರಂದು ತಲಶ್ಶೇರಿ ಸೆಷನ್ಸ್ ನ್ಯಾಯಾಲಯಕ್ಕೆ ದಿವ್ಯಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಾಲಯ ಇಂದು ವಜಾಗೊಳಿಸಿದೆ.
