ಕೇರಳದ ಸಾಂಪ್ರದಾಯಿಕ ಆಹಾರದಲ್ಲಿ ಬೀಪ್ (ದನದ ಮಾಂಸ) ಕೂಡ ಅವಿಭಾಜ್ಯ ಅಂಗ. ಆದರೆ, ಬಿಹಾರದ ಮೂಲಕ ಬ್ಯಾಂಕ್ ಮ್ಯಾನೇಜರ್ ಒಬ್ಬರು ತಾವು ಕೆಲಸ ಮಾಡುತ್ತಿರುವ ಕೇರಳದ ಬ್ಯಾಂಕ್‌ನಲ್ಲಿ ‘ಗೋವಾಂಸ’ವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಅವರ ಧೋರಣೆಯನ್ನು ಖಂಡಿಸಿರುವ ಬ್ಯಾಂಕ್‌ನ ನೌಕರರು ‘ದನದ ಮಾಂಸ’ ತಿಂದು ಪ್ರತಿಭಟನೆ ನಡೆಸಿದ್ದಾರೆ.
ಕೇರಳದ ಕೊಚ್ಚಿಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಈ ಘಟನೆ ನಡೆದಿದೆ. ಬ್ಯಾಂಕ್‌ಗೆ ಹೊಸದಾಗಿ ನೇಮಕಗೊಂಡಿರುವ ಬಿಹಾರದ ಮೂಲಕ ಮ್ಯಾನೇಜರ್, ತಮ್ಮ ಶಾಖೆಯ ಕ್ಯಾಂಟೀನ್‌ನಲ್ಲಿ ‘ಬೀಫ್’ ಖಾದ್ಯಗಳನ್ನು ತಯಾರಿಸದಂತೆ ಆದೇಶಿಸಿದ್ದಾರೆ. ಇದು, ಕೇರಳದ ಪಾಕಪದ್ಧತಿಗೆ ವಿರುದ್ಧವಾದ ಧೋರಣೆ ಎಂದು ನೌಕರರು ಆರೋಪಿಸಿದ್ದಾರೆ.
ಬ್ಯಾಂಕ್‌ಗೆ ನೇಮಕಗೊಂಡ ಸಂದರ್ಭದಿಂದಲೂ ಮ್ಯಾನೇಜರ್ ಕಿರುಕುಳ ಮತ್ತು ಅವಮಾನಕರವಾಗಿ ನಡೆದುಕೊಳ್ಳಿತ್ತಿದ್ದಾರೆ ಎಂದು ಆರೋಪಿಸಿರುವ ಬ್ಯಾಂಕ್ ನೌಕರರ ಒಕ್ಕೂಟವು (BEFI) ಶುಕ್ರವಾರ ಪ್ರತಿಭಟನೆ ಹಮ್ಮಿಕೊಂಡಿತ್ತು. ಇದೇ ಸಂದರ್ಭದಲ್ಲಿ, ಕ್ಯಾಂಟಿನ್‌ನಲ್ಲಿ ಬೀಫ್‌ಅನ್ನು ನಿಷೇಧಿಸಲಾಗಿದೆ ಎಂಬ ವಿಚಾರ ತಿಳಿದ ಪ್ರತಿಭಟನಾಕಾರರು, ಪ್ರತಿಭಟನಾ ಸ್ಥಳದಲ್ಲಿಯೇ ಬೀಫ್-ಪರೋಟ ಸೇವಿಸಿ ಪ್ರತಿಭಟಿಸಿದ್ದಾರೆ.
“ನಮ್ಮ ಬ್ಯಾಂಕ್ ಸಂವಿಧಾನದ ಮಾರ್ಗಸೂಚಿಗಳ ಪ್ರಕಾರ ಕಾರ್ಯನಿರ್ವಹಿಸುತ್ತಿದೆ. ಆಹಾರ ನಮ್ಮ ವೈಯಕ್ತಿಕ ಆಯ್ಕೆ. ಭಾರತದಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಆಹಾರವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಹೊಂದಿದ್ದಾರೆ. ನಾವು ಯಾರನ್ನೂ ಬೀಫ್ ತಿನ್ನುವಂತೆ ಒತ್ತಾಯಿಸುತ್ತಿಲ್ಲ. ಅಂತೆಯೇ, ನಮ್ಮ ಆಹಾರದ ಆಯ್ಕೆಯನ್ನು ಕಸಿದುಕೊಳ್ಳಲು ಮತ್ತೊಬ್ಬರಿಗೆ ಅವಕಾಶವೂ ಇಲ್ಲ” ಎಂದು ಬ್ಯಾಂಕ್ ನೌಕರರ ಒಕ್ಕೂಟ ಎಸ್.ಎಸ್ ಅನಿಲ್ ಹೇಳಿದ್ದಾರೆ.
ನೌಕರರ ಪ್ರತಿಭಟನೆಗೆ ಕೊಚ್ಚಿ ಶಾಸಕ ಕೆ.ಟಿ ಜಲೀಲ್ ಬೆಂಬಲ ನೀಡಿದ್ದು, “ಕೇರಳದಲ್ಲಿ ಸಂಘ ಪರಿವಾರದ ಕಾರ್ಯಸೂಚಿಗಳ ಹೇರಿಕೆ/ಜಾರಿಗೆ ಅವಕಾಶ ನೀಡುವುದಿಲ್ಲ. ಈ ಮಣ್ಣು ಕೆಂಪು. ಈ ನೆಲದ ಹೃದಯ ಕೆಂಪು. ಕೆಂಪು ಧ್ವಜ ಹಾರುವಲ್ಲೆಲ್ಲಾ, ನೀವು ಭಯವಿಲ್ಲದೆ ಫ್ಯಾಸಿಸ್ಟ್‌ಗಳ ವಿರುದ್ಧ ಮಾತನಾಡಬಹುದು. ಕೇಸರಿ ಧ್ವಜವನ್ನು ಹಾರಿಸಲು, ಜನರ ನೆಮ್ಮದಿ ಹಾಳುಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ” ಎಂದು ಹೇಳಿದ್ದಾರೆ.