ದೇವರ ಉತ್ಸವದ ವೇಳೆ ಆನೆಗಳು ದಿಗ್ಭ್ರಾಂತಿಗೊಂಡು ಓಡಿದ್ದು, ಮೂವರು ಸಾವನ್ನಪ್ಪಿರುವ ಘಟನೆ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿಯಲ್ಲಿ ನಡೆದಿದೆ. ಘಟನೆಯಲ್ಲಿ 36 ಮಂದಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಕೊಯಿಲಾಂಡಿಯ ಕುರುವಂಗಾಡ್‌ನಲ್ಲಿರುವ ಮಾನಕ್ಕುಲಾಂಗರಾ ಭಗವತಿ ದೇವಾಲಯದಲ್ಲಿ ಉತ್ಸವ ನಡೆಯುತ್ತಿತ್ತು. ಈ ವೇಳೆ, ಉತ್ಸವದಲ್ಲಿ ಆನೆಯು ಮೆರವಣಿಗೆ ಸಾಗುತ್ತಿತ್ತು. ಈ ವೇಳೆ, ಕೆಲವರು ಪಟಾಕಿ ಸಿಡಿಸಿದ್ದಾರೆ. ಪಟಾಕಿ ಸಿಡಿದ ಸದ್ದಿಗೆ ದಿಗ್ಭ್ರಾಂತಿಗೊಂಡ ಆನೆಗಳು ಜನರ ಗುಂಪಿನ ಮೇಲೆ ಓಡಿವೆ.
ಘಟನೆಯಲ್ಲಿ ಮೃತಪಟ್ಟವರನ್ನು ಅಮ್ಮುಕುಟ್ಟಿ (70), ಲೀಲಾ (65) ಹಾಗೂ ರಾಜನ್ (70) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಏಳು ಮಂದಿಯ ಪರಿಸ್ಥಿತಿ ಗಂಭಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.