ಅಪ್ರಾಪ್ತ ಬಾಲಕಿಯ ಮೇಲೆ ಸುಮಾರು ನಾಲ್ಕು ವರ್ಷಗಳಿಂದ ಸುಮಾರು 64 ಮಂದಿ ಕಾಮುಕರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆಘಾತಕಾರಿ, ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಐದು ಮಂದಿ ಕಾಮುಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ 6ನೇ ಆರೋಪಿ ಈಗಾಗಲೇ ಬೇರೊಂದು ಪ್ರಕರಣದಲ್ಲಿ ಜೈಲಿನಲ್ಲಿದ್ದಾನೆ ಎಂದು ವರದಿಯಾಗಿದೆ.
ಇತ್ತೀಚೆಗೆ, ಬಾಲಕಿ ವ್ಯಾಸಂಗ ಮಾಡುತ್ತಿದ್ದ ಶಾಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯಿಂದ ಕೌನ್ಸೆಲಿಂಗ್ ನಡೆಸಲಾಗಿತ್ತು. ಈ ವೇಳೆ, ಬಾಲಕಿ ತನ್ನ ಮೇಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಹೇಳಿಕೊಂಡಿದ್ದಾಳೆ. ಬಳಿಕ, ಮಕ್ಕಳ ಕಲ್ಯಾಣ ಸಮಿತಿಯು ಬಾಲಕಿಯಿಂದ ಪೊಲೀಸರಿಗೆ ದೂರು ದಾಖಲಿಸಿದೆ ಎಂದು ಸಮಿತಿಯ ಅಧ್ಯಕ್ಷ ರಾಜೀವ್ ಎನ್ ತಿಳಿಸಿದ್ದಾರೆ.
ಕ್ರೀಡಾಪಟು ಆಗಿರುವ ಬಾಲಕಿಯ ಮೇಲೆ ಪತ್ತನಂತಿಟ್ಟದ ವಿವಿಧ ಸ್ಥಳಗಳಲ್ಲಿ, ಕ್ರೀಡಾ ಶಿಬಿರಗಳಲ್ಲಿಯೂ ಲೈಂಗಿಕ ದೌರ್ಜನ್ಯಗಳು ನಡೆದಿವೆ. ಆಕೆಯ ಮೇಲೆ ದೌರ್ಜನ್ಯ ಎಸಗಿರುವ ಆರೋಪಿಗಳಲ್ಲಿ ಹೆಚ್ಚಿನವರು ತರಬೇತುದಾರರು, ಸಹಪಾಠಿಗಳು ಮತ್ತು ಸ್ಥಳೀಯ ನಿವಾಸಿಗಳಾಗಿದ್ದಾರೆ ಎಂದು ವರದಿಯಾಗಿದೆ.
ಪೋಕ್ಸೊ ಕಾಯ್ದೆಯಡಿ ಪ್ರಕರಣಗಳು ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪತ್ತನಂತಿಟ್ಟ ಜಿಲ್ಲಾ ಪೊಲೀಸ್ ಮುಖ್ಯಸ್ಥರು ತನಿಖೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ವರದಿ ಓದಿದ್ದೀರಾ?: ‘ಹಿಂದುತ್ವ ಮೊದಲು – ಜಾತಿ ನಂತರ’: ಏನಿದು ಬಿಜೆಪಿಯ ‘ಹೈಂದವ ಸಂಖಾರವಂ’?
ಬಾಲಕಿಯ ಬಳಿ ವೈಯಕ್ತಿಕ ಮೊಬೈಲ್ ಫೋನ್ ಇಲ್ಲ. ಆಕೆಯ ತಂದೆಯ ಮೊಬೈಲ್ ಫೋನ್ ಬಳಸುತ್ತಾರೆ. ಈ ಫೋನ್ನಲ್ಲಿ, ತನ್ನ ಮೇಲೆ ದೌರ್ಜನ್ಯ ಎಸಗಿದ ಸುಮಾರು 40 ಜನರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ತಾನು ಅನುಭವಿಸಿದ ದೌರ್ಜನ್ಯಗಳ ಬಗ್ಗೆ ಹೇಳಿಕೊಂಡಿದ್ದನ್ನು ಕೇಳಿ ಆಘಾತಕ್ಕೊಳಗಾದ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಆಕೆಯ ಆರೋಪಗಳು ಸತ್ಯವೇ ಎಂದು ಖಚಿತಪಡಿಸಿಕೊಳ್ಳಲು ಮನಶ್ಶಾಸ್ತ್ರಜ್ಞರಿಂದ ಕೌನ್ಸೆಲಿಂಗ್ಗೆ ಒಳಪಡಿಸಿದ್ದರು. “ಕೌನ್ಸೆಲಿಂಗ್ ವೇಳೆ ಆಕೆಯ ಆರೋಪಗಳು ನಂಬಲಾರ್ಹವೆಂದು ಗೊತ್ತಾಗಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಪ್ರಕರಣ ದಾಖಲಿಸಿದ್ದೇವೆ. ತನಿಖೆಯನ್ನು ‘ಫಾಲೋ’ ಮಾಡುತ್ತಿದ್ದೇವೆ” ಎಂದು ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.