ಕೇರಳದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ರಾಜ್ಯ ಅನುದಾನಿತ ವಿಶ್ವವಿದ್ಯಾಲಯಗಳನ್ನು ಕೇಸರಿಕರಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ತಿರುವನಂತಪುರಂ ಮತ್ತು ಕಣ್ಣೂರಿನಲ್ಲಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ವೇಳೆ ಕಣ್ಣೂರಿನಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಜಲಫಿರಂಗಿ ಬಳಸಿ ದಾಳಿ ಮಾಡಿದ್ದಾರೆ.
ತಿರುವನಂತಪುರಂನ ಕೇರಳ ವಿಶ್ವವಿದ್ಯಾಲಯದ ಆವರಣದಲ್ಲಿ ಅಖಿಲ ಭಾರತ ಯುವ ಒಕ್ಕೂಟ (AIYF) ಮತ್ತು ಭಾರತೀಯ ಪ್ರಜಾಸತ್ತಾತ್ಮಕ ಯುವ ಒಕ್ಕೂಟ (DYFI) ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಕಣ್ಣೂರಿನ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಭಾರತೀಯ ವಿದ್ಯಾರ್ಥಿ ಒಕ್ಕೂಟದ (SFI) ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಕಣ್ಣೂರಿನಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಜಲಫಿರಂಗಿ ಬಳಸಿದ್ದಾರೆ. ತಿರುವನಂತಪುರಂನಲ್ಲಿ ಹಲವಾರು ವಿದ್ಯಾರ್ಥಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
#WATCH | Kannur | Kerala Police use water cannon to disperse protesting members of the Students' Federation of India (SFI) from the premises of the Kunnur Head Post Office. SFI has been protesting against Kerala Governor Rajendra Arlekar, reportedly alleging that he is… pic.twitter.com/O2D3ir8hzy
— ANI (@ANI) July 10, 2025
“ಕೇರಳ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಮೋಹನನ್ ಕುನ್ನುಮ್ಮಲ್ ಅವರನ್ನು ರಾಜ್ಯಪಾಲರು ಅಮಾನತುಗೊಳಿಸಿದ್ದಾರೆ. ಅವರ ಸ್ಥಾನಕ್ಕೆ ಸಿಜಾ ಥಾಮಸ್ ಅವರನ್ನು ಪ್ರಭಾರ ಉಪಕುಲಪತಿಯಾಗಿ ನೇಮಿಸಿದ್ದಾರೆ. ಥಾಮಸ್ ಅವರು ಕಾನೂನಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ವಿಶ್ವವಿದ್ಯಾಲಯದ ಸಿಂಡಿಕೇಟ್‌ಅನ್ನು ಕಡೆಗಣಿಸಿ ಸ್ವ-ಇಚ್ಛೆಯಂತೆ ಆಡಳಿತ ನಡೆಸಲು ಯತ್ನಿಸುತ್ತಿದ್ದಾರೆ. ಹೆಚ್ಚುವರಿ ರಿಜಿಸ್ಟಾರ್ ನೇಮಕಕ್ಕೆ ಮುಂದಾಗಿದ್ದಾರೆ. ಈ ನಿರ್ಧಾರವನ್ನು ಅವರು ಆರ್‌ಎಸ್‌ಎಸ್ ಕಚೇರಿಯಲ್ಲಿ ತೆಗೆದುಕೊಂಡಿದ್ದಾರೆ. ಉಪಕುಲಪತಿಯ ಧೋರಣೆಯನ್ನು ವಿದ್ಯಾರ್ಥಿಗಳು ಖಂಡಿಸಿ, ಪ್ರತಿಭಟನೆಗಿಳಿದಿದ್ದೇವೆ” ಎಂದು DYFI ಕೇರಳ ಕಾರ್ಯದರ್ಶಿ ವಿ.ಕೆ. ಸನುಜ್ ಹೇಳಿದ್ದಾರೆ.
“ಉಪಕುಲಪತಿಗಳು ಆರ್‌ಎಸ್‌ಎಸ್ ಅಂಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಆರ್‌ಎಸ್‌ಎಸ್ ಕೈಗೊಂಬೆಯಂತೆ ಕೆಲಸ ಮಾಡಲು ನಾವು ಬಿಡುವುದಿಲ್ಲ. ವಿಶ್ವವಿದ್ಯಾಲಯದ ಕಾಯ್ದೆ ಮತ್ತು ಕಾನೂನಿನ ಪ್ರಕಾರ ಅವರು ಕೆಲಸ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.