ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ಸಮಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಪಾಕಿಸ್ತಾನವನ್ನು ನೇಮಕ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ಇದು ಅತ್ಯಂತ ದುರದೃಷ್ಟಕರ. ಇದು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಪಾಕಿಸ್ತಾನದಿಂದ ಹೊರಹೊಮ್ಮುವ ಭಯೋತ್ಪಾದನೆಯ ಬಗ್ಗೆ ಭಾರತದ ನಿಲುವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಬೆಂಬಲಿಸಬೇಕು ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಆಗ್ರಹಿಸಿದ್ದಾರೆ.
ಪಾಕಿಸ್ತಾನ ಭಯೋತ್ಪಾದನೆಯ ಅಪರಾಧಿ. ಭಾರತ ಭಯೋತ್ಪಾದನೆಯ ಬಲಿಪಶು. ಅವರನ್ನು ನಮ್ಮ ಜೊತೆ ಸಮೀಕರಿಸಬಾರದು ಎಂದು ಖರ್ಗೆ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಭಾರತದಲ್ಲಿ ಟೆಸ್ಲಾ ಉತ್ಪಾದನೆ | ಕೇಂದ್ರ ಸಚಿವ ಎಚ್ ಡಿಕೆ ಉತ್ಪಾದನಾ ಘಟಕ ಸ್ಥಾಪನೆ ಇಲ್ಲ ಎಂದಿದ್ದೇಕೆ?
ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಈ ಬೆಳವಣಿಗೆ ನಮ್ಮದೇ ವಿದೇಶಾಂಗ ನೀತಿಯ ಅಧಃಪತನದ ದುಃಖದ ಕಥೆ ಎಂದು ಹೇಳಿದ್ದಾರೆ. ಪಾಕಿಸ್ತಾನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಾಲಿಬಾನ್ ನಿರ್ಬಂಧ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದೆ. ಪಾಕಿಸ್ತಾನದಿಂದ ಭಯೋತ್ಪಾದನೆಯ ಪ್ರಾಯೋಜಕತ್ವದ ನಿರಂತರ ಕಾನೂನುಬದ್ಧಗೊಳಿಸುವಿಕೆಯನ್ನು ಜಾಗತಿಕ ಸಮುದಾಯವು ಹೇಗೆ ದೃಢೀಕರಿಸುವುದನ್ನು ಮುಂದುವರಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.
ಮೇ 9ರಂದು ಆಪರೇಷನ್ ಸಿಂಧೂರ್ ಸಮಯದಲ್ಲಿ ಐಎಂಎಫ್ ಪಾಕಿಸ್ತಾನಕ್ಕೆ 1 ಬಿಲಿಯನ್ ಯುಎಸ್ ಡಾಲರ್ ನೀಡಿದೆ. ಆಪರೇಷನ್ ಸಿಂಧೂರ್ ನಂತರ ವಿಶ್ವ ಬ್ಯಾಂಕ್ ಪಾಕಿಸ್ತಾನಕ್ಕೆ 40 ಬಿಲಿಯನ್ ಯುಎಸ್ ಡಾಲರ್ ನೀಡಲು ನಿರ್ಧರಿಸಿದೆ. ಆಪರೇಷನ್ ಸಿಂಧೂರ್ ನಂತರ ಜೂನ್ 3ರಂದು ಪಾಕಿಸ್ತಾನಕ್ಕೆ 800 ಮಿಲಿಯನ್ ಯುಎಸ್ ಡಾಲರ್ ಎಡಿಬಿ ನೀಡಿದೆ ಎಂದು ಹೇಳಿದ್ದಾರೆ.