ಭಾರತದ ಸಂವಿಧಾನದ ‘ಕೆಂಪು ಪುಸ್ತಕ’ವನ್ನು ನಗರ ನಕ್ಸಲಿಸಂಗೆ ಹೋಲಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. 2017ರಲ್ಲಿ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪ್ರಧಾನಿ ಇದೇ ಪ್ರತಿಯನ್ನು ನೀಡಿದ್ದರು ಎಂಬುದನ್ನು ಉಲ್ಲೇಖಿಸಿದ್ದಾರೆ.
ನವೆಂಬರ್ 20ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (ಎಂವಿಎ) ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದಾದ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಯಲ್ಲಿ ‘ಕೆಂಪು ಪುಸ್ತಕ’ ಹಿಡಿದು ‘ನಗರ ನಕ್ಸಲರು ಮತ್ತು ಅರಾಜಕತಾವಾದಿಗಳ’ ಬೆಂಬಲವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನು ಓದಿದ್ದೀರಾ? ಒಳಮೀಸಲಾತಿ | ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್‌ಗೆ ವರದಿ ಜಾರಿ ಇಷ್ಟವಿಲ್ಲ: ವಿಪಕ್ಷ ನಾಯಕ ಆರ್ ಅಶೋಕ್
ಲೋಕಸಭೆಯ ವಿರೋಧ ಪಕ್ಷದ ನಾಯಕ ಗಾಂಧಿಯವರು ತಮ್ಮ ರ‍್ಯಾಲಿಗಳಲ್ಲಿ ಕೆಂಪು ಕವರ್ ಹೊಂದಿರುವ ಸಂವಿಧಾನದ ಸಂಕ್ಷಿಪ್ತ ಆವೃತ್ತಿಯನ್ನು ಪ್ರದರ್ಶಿಸುತ್ತಿದ್ದಾರೆ. “ಕೆಂಪು ಕೈಪಿಡಿಯನ್ನು ಉಲ್ಲೇಖಕ್ಕಾಗಿ ಮಾತ್ರ ಬಳಸಲಾಗಿದೆ ಮತ್ತು ಅದು ಸಂಪೂರ್ಣ ಸಂವಿಧಾನವಲ್ಲ” ಎಂದು ಖರ್ಗೆ ಹೇಳಿದ್ದಾರೆ.
“ನರೇಂದ್ರ ಮೋದಿ ಅವರು 2017ರ ಜುಲೈ 26ರಂದು ಅಂದಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಇದೇ ಪ್ರತಿಯನ್ನು ನೀಡಿದ್ದಾರೆ” ಎಂದು ಕಾಂಗ್ರೆಸ್ ನಾಯಕ ಖರ್ಗೆ ಉಭಯ ನಾಯಕರ ಚಿತ್ರವನ್ನು ಪ್ರದರ್ಶಿಸಿದರು.
ಮೋದಿ ಮತ್ತು ಬಿಜೆಪಿಯವರು ಯೋಜಿಸುತ್ತಿರುವಂತೆ ಅದು ಖಾಲಿಯಾಗಿಲ್ಲ. ಪ್ರಧಾನಿ ಮೋದಿ ಮತ್ತೆ ಪ್ರಾಥಮಿಕ ಶಾಲೆಗೆ ಸೇರಿಸುವುದು ಅಗತ್ಯ ಎಂದು ಖರ್ಗೆ ಟೀಕಿಸಿದರು.
