“ತಾಯಿಯಾಗಿ ನಾನು ನನ್ನ ಕರ್ತವ್ಯ ನಿರ್ವಹಿಸಿದೆ” – ತನ್ನ ಮಗಳ ಮೇಲೆ ನಿಗಾ ವಹಿಸಲು ಕಣ್ಗಾವಲು ದುರುಪಯೋಗ ಮಾಡಿದ ಆರೋಪದ ಬಗ್ಗೆ ಪ್ರತಿಕ್ರಿಯಿಸುತ್ತಾ ದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಹೇಳಿದ ಮಾತಿದು.
ಪುದುಚೇರಿಯ ಮಾಜಿ ಲೆಫ್ಟಿನೆಂಟ್ ಗವರ್ನರ್, ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರ ವಿರುದ್ಧ ಕಣ್ಗಾವಲು ದುರುಪಯೋಗ ಮತ್ತು ಸಾಕ್ಷಿಯನ್ನು ಮುಚ್ಚಿಟ್ಟ ಆರೋಪ ಮಾಡಿ ದಿ ನ್ಯೂಸ್ ಮಿನಿಟ್ ಸೋಮವಾರ ವರದಿ ಮಾಡಿದೆ.
ಇದನ್ನು ಓದಿದ್ದೀರಾ? ಮುಸ್ಲಿಮರಿಗೆ ‘ಎಚ್ಚರಿಕೆ’ ನೀಡಿದ ಕೇಂದ್ರ ಸಚಿವ ಕಿರಣ್ ರಿಜಿಜು
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕಿರಣ್ ಬೇಡಿ ಅವರು, “22 ವರ್ಷಗಳ ಹಿಂದೆ ನನ್ನ ಮಗಳನ್ನು ಗುರಿಯಾಗಿಸಿದಾಗ, ಅವಳನ್ನು ಸಿಲುಕಿಸಿದಾಗ ನಾನು ಮುಗ್ಧ ಜೀವವನ್ನು ಕಾಪಾಡುವಂತೆ ಪೊಲೀಸರಿಗೆ ಮನವಿ ಮಾಡಿದೆ. ಪೊಲೀಸರು ಅವರ ಕರ್ತವ್ಯ ಮಾಡಿದ್ದಾರೆ. ತಾಯಿಯಾಗಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ” ಎಂದು ಹೇಳಿದ್ದಾರೆ.
2003ರಲ್ಲಿ ದೆಹಲಿ ಪೊಲೀಸ್ ವ್ಯಾಪ್ತಿಯಲ್ಲಿ ತನ್ನ ಸಂಪರ್ಕವನ್ನು ಬಳಸಿ ಮಾಜಿ ಐಪಿಎಸ್ ಅಧಿಕಾರಿ ತನ್ನ 20 ವರ್ಷದ ಮಗಳ ಮೇಲೆ ಮತ್ತು ಆಕೆಯ ಪ್ರಿಯಕರನ ಮೇಲೆ ಕಣ್ಗಾವಲು ಇರಿಸಿದ್ದರು ಎಂಬುದು ಆರೋಪವಾಗಿದೆ. ಈ ಆರೋಪ ನಿಜವಾದರೆ ಕಿರಣ್ ಬೇಡಿ ಖಾಸಗಿತನಕ್ಕೆ ಧಕ್ಕೆ ತಂದಾಗುತ್ತದೆ ಮತ್ತು ತನ್ನ ಅಧಿಕಾರ ದುರ್ಬಳಕೆ ಮಾಡಿದಂತಾಗುತ್ತದೆ.
ಈ ಕಣ್ಗಾವಲಿನ ಸಂದರ್ಭದಲ್ಲಿ 2003ರ ಸ್ವಿಸ್ ಡಿಪ್ಲೊಮಟ್ ಲೈಂಗಿಕ ದೌರ್ಜನ್ಯ ಪ್ರಕರಣದ ಮಾಹಿತಿಯೂ ದೊರೆತಿತ್ತು. ಆದರೆ ಅದನ್ನು ಬಹಿರಂಗಪಡಿಸಿಲ್ಲ. ತನಿಖೆಯಾದರೆ ತನ್ನ ಮಗಳೂ ಈ ಪ್ರಕರಣದಲ್ಲಿ ಸಿಲುಕಬಹುದು ಎಂಬ ಕಾರಣಕ್ಕೆ ಮಾಹಿತಿಯನ್ನು ಮುಚ್ಚಿಹಾಕಿದ್ದಾರೆ ಎಂಬ ಆರೋಪವಿದೆ.
ಇದನ್ನು ಓದಿದ್ದೀರಾ? ವಿಜಯಪುರ | ಗುಳೆ ತಪ್ಪಿಸಲು ಕೈಗೊಂಡ ಸಾವಯವ ಆಹಾರೋದ್ಯಮ; ಸಬಲೀಕರಣದತ್ತ ಮಹಿಳೆಯರ ಹೆಜ್ಜೆ
ಇನ್ನು ಕಾನೂನುಬಾಹಿರವಾಗಿ ಹಣ ಗಳಿಸುವ ಯೋಜನೆಯ ಬಗ್ಗೆಯೂ ಕಿರಣ್ ಮತ್ತು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಎಲ್ಲಾ ವಿಚಾರ ತಿಳಿದಿದ್ದರೂ ಕೂಡಾ ಕಿರಣ್ ಪುತ್ರಿ ಮತ್ತು ಸ್ನೇಹಿತನ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಮೇಲ್‌ನಲ್ಲಿ ಈ ಮಾಹಿತಿ ಬಹಿರಂಗವಾಗಿದೆ ಎನ್ನಲಾಗಿದೆ.
ಈ ಇಮೇಲ್ ಲಭಿಸಿದ್ದೆಲ್ಲಿ, ಇದು ಖಾಸಗಿತನದ ಉಲ್ಲಂಘನೆ, ಆದ್ದರಿಂದ ಈ ಬಗ್ಗೆಯೂ ತನಿಖೆಯಾಗಬೇಕು ಎಂಬುದು ಕಿರಣ್ ವಾದ. “ನನ್ನ ಇಮೇಲ್ ಹ್ಯಾಕ್ ಮಾಡಲಾಗಿದೆ” ಎಂದು ಕಿರಣ್ ಹೇಳಿಕೊಂಡಿದ್ದಾರೆ. ಈ ಆರೋಪ ಪ್ರತ್ಯಾರೋಪದ ನಡುವೆ ಹಲವು ಗೊಂದಲ ಪ್ರಶ್ನೆಗಳು ಎದ್ದಿವೆ.
ಕಿರಣ್ ಬೇಡಿ ಮೇಲಿರುವ ಎಲ್ಲಾ ಆರೋಪಗಳು ನಿಜವಾದರೆ ಅಧಿಕಾರಿಯಾಗಿ ಪ್ರಕರಣವನ್ನು ಮುಚ್ಚಿ ಹಾಕಿದ್ದು ಎಷ್ಟು ಸರಿಯೆಂಬ ಪ್ರಶ್ನೆ ಬರುತ್ತದೆ. ತನ್ನ ಮಗಳನ್ನು ರಕ್ಷಿಸಲು ಅಧಿಕಾರ ದುರ್ಬಳಕೆ ಮಾಡಿದ ವಿಚಾರಕ್ಕೆ ಬಂದಾಗ ತಾಯಿ ಮನಸು ಮತ್ತು ಕಾನೂನಿನ ನಡುವಿನ ಸಮರ ಸೃಷ್ಟಿಯಾಗುತ್ತದೆ. ಅದರಲ್ಲೂ ಓರ್ವ ಮಹಿಳೆಗಾದ ಲೈಂಗಿಕ ದೌರ್ಜನ್ಯ, ಅಕ್ರಮ ಹಣ ಗಳಿಕೆಯಂತಹ ಪ್ರಕರಣಗಳನ್ನು ಮುಚ್ಚಿ ಹಾಕಿರುವುದು ಅತೀ ಗಂಭೀರ ವಿಚಾರ.
