ಇತ್ತೀಚಿನ ದಿನಗಳಲ್ಲಿ ಧರ್ಮಸ್ಥಳ, ಟ್ರಂಪ್ ಸುಂಕ, ಬಿಹಾರ ಮತದಾರಪಟ್ಟಿ ಪರಿಷ್ಕರಣೆ, ಮತ ಕಳವು ಆರೋಪಗಳ ಸುದ್ದಿಗಳ ನಡುವೆ ಇದೀಗ ಮತ್ತೊಂದು ಸುದ್ದಿ ಮುನ್ನೆಲೆಗೆ ಬಂದಿದೆ. ಅದೇ ಕೊಲ್ಲಾಪುರದ ನಂದನಿ ಮಠದ ಆನೆಯ ವಿವಾದ.
ಕೊಲ್ಲಾಪುರದ ನಂದನಿ ಜೈನ ಮಠದ ಆನೆ ‘ಮಾಧುರಿ’ಯನ್ನು ಗುಜರಾತ್ ಜಾಮ್‌ನಗರದಲ್ಲಿರುವ ಮುಖೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿ ನಿರ್ವಹಿಸುತ್ತಿರುವ ವಂತಾರ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿತ್ತು. ಈ ಕ್ರಮದ ವಿರುದ್ಧ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಮಾಧುರಿ ಆನೆಯನ್ನು ಮತ್ತೆ ಮಠಕ್ಕೆ ಹಿಂದಿರುಗಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜನರ ಆಕ್ಷೇಪಗಳಿಗೆ ಮಂಡಿಯೂರಿದ ಸರ್ಕಾರ, ಆನೆಯನ್ನು ಮಠಕ್ಕೆ ಮರಳಿಸಲು ಕ್ರಮ ಕೈಗೊಂಡಿದೆ.
ಮಹಾದೇವಿ ಅಲಿಯಾಸ್ ಮಾಧುರಿ ಎಂಬ ಹೆಸರಿನ 36 ವರ್ಷದ ಈ ಆನೆ ಕರ್ನಾಟಕದಲ್ಲಿ ಜನಿಸಿತ್ತು. ಕಳೆದ 35 ವರ್ಷಗಳಿಂದ ಆನೆ ‘ಮಾಧುರಿ’ ಕೊಲ್ಹಾಪುರದ ನಂದನಿಯಲ್ಲಿರುವ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿ ಜೈನಮಠದಲ್ಲಿತ್ತು. ಈ ಆನೆಯನ್ನು ಸ್ಥಳೀಯರು ತಮ್ಮೊಂದಿಗೆ ಬದುಕುತ್ತಿರುವ ಮತ್ತೊಂದು ಜೀವದಂತೆ, ಸಾಂಸ್ಕೃತಿಕ ರಾಯಭಾರಿಯಂತೆ ಕಾಣುತ್ತಿದ್ದರು.
ಆದರೆ, ಪೀಪಲ್ ಫಾರ್ ದಿ ಎಥಿಕ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಎಂಬ ಸಂಸ್ಥೆಯು ಮಠದಲ್ಲಿ ಆನೆಯನ್ನು ಸರಿಯಾಗಿ ನೋಡಿಕೊಳ್ಳಲಾಗುತ್ತಿಲ್ಲ. ಆನೆಯ ಆರೋಗ್ಯ ಹದಗೆಟ್ಟಿದ್ದು, ಅದರ ಮಾನಸಿಕ ಸ್ಥಿಮಿತ ತಪ್ಪಿದೆ. ಹಾಗಾಗಿ, ಆನೆಯನ್ನು ವಂತಾರಗೆ ಸ್ಥಳಾಂತರಿಸಬೇಕು. ಅಲ್ಲಿ, ಉತ್ತಮ ಆರೈಕೆ ಮತ್ತು ಸಂರಕ್ಷಣೆ ದೊರೆಯುತ್ತಿದೆ ಎಂದು ವಾದಿಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡಿದ ಬಾಂಬೆ ಹೈಕೋರ್ಟ್, ಗುಜರಾತ್‌ನ ವಂತಾರ ಪ್ರಾಣಿ ರಕ್ಷಣಾ ಕೇಂದ್ರದಲ್ಲಿ ಆನೆಗೆ ಪುನರ್ವಸತಿ ನೀಡುವಂತೆ ಆದೇಶಿಸಿತ್ತು. ಬಳಿಕ ಸುಪ್ರೀಂಕೋರ್ಟ್ ಸಹ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿಯಿತು. ಅದರಂತೆ, 2025ರ ಜುಲೈ 16ರಂದು, ಆನೆಯನ್ನು ವಂತಾರಗೆ ಕೇಂದ್ರ ಸರ್ಕಾರ ಸ್ಥಳಾಂತರಿಸಿತು.
ಮಾಧುರಿಯನ್ನು ವಂತಾರಕ್ಕೆ ಸ್ಥಳಾಂತರಿಸಿದ ಕೂಡಲೇ, ಕೊಲ್ಲಾಪುರದ ನಂದನಿ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಪ್ರತಿಭಟನೆಗಳು ಭುಗಿಲೆದ್ದವು. ಸ್ಥಳೀಯರು, ಜೈನ ಸಮುದಾಯದ ಭಕ್ತರು ಮತ್ತು ಧಾರ್ಮಿಕ ಮುಖಂಡರು ಆನೆಯನ್ನು ಸ್ಥಳಾಂತರಿಸಿದ್ದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆನೆಯನ್ನು ಮಠಕ್ಕೆ ಮರಳಿಸುವಂತೆ ಆಗ್ರಹಿಸಿದರು. ಅಷ್ಟೇ ಅಲ್ಲದೇ, ಸಾಮಾಜಿಕ ಜಾಲತಾಣದಲ್ಲಿಯೂ ಕರ್ನಾಟಕ ಮತ್ತು ಮಹಾರಾಷ್ಟ್ರದ ನೆಟ್ಟಿಗರು ಆನೆಯ ಸ್ಥಳಾಂತರ ವಿರುದ್ಧ ಅಭಿಯಾನ ನಡೆಸಿದರು. #GajLakshmiMadhuri ಮತ್ತು #NandaniJainMath ಹ್ಯಾಶ್‌ಟ್ಯಾಗ್‌ಗಳೊಂದಿಗೆ ಆರಂಭವಾದ ಅಭಿಯಾನವು ಅಂಬಾನಿಯ ರಿಲಯನ್ಸ್ ಮತ್ತು PETA ವಿರುದ್ಧ ಜನಾಕ್ರೋಶವನ್ನು ರೂಪಿಸಿತು. ಮಾತ್ರವಲ್ಲದೆ, ರಿಲಯನ್ಸ್‌ನ ‘ಜಿಯೋ ಸಿಮ್ ಬಾಯ್‌ಕಾಟ್’ ಮಾಡುವ ಹಂತಕ್ಕೆ ಬೆಳೆಯಿತು. ಅಲ್ಲದೆ, ನಂದನಿ ಗ್ರಾಮದಿಂದ ಕೊಲ್ಲಾಪುರಕ್ಕೆ ಮಠದ ಭಕ್ತರು ಪಾದಯಾತ್ರೆಯ ಮೂಲಕ ಪ್ರತಿಭಟನೆಯನ್ನೂ ನಡೆಸಿದರು.
ಸ್ಥಳೀಯರು ಮತ್ತು ನೆಟ್ಟಿಗರ ತೀವ್ರ ವಿರೋಧದಿಂದಾಗಿ, ಈ ವಿವಾದವು ರಾಜಕೀಯ ಚರ್ಚೆಗೂ ಗ್ರಾಸವಾಯಿತು. ವಿವಾದದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಧ್ಯಸ್ಥಿಕೆ ವಹಿಸಿ, ವಂತಾರ ಅಧಿಕಾರಿಗಳೊಂದಿಗೆ ಚರ್ಚಿಸಿ, ಮಾಧುರಿ ಆನೆಯನ್ನು ಮತ್ತೆ ನಂದನಿ ಮಠಕ್ಕೆ ಕರೆತರುವಂತೆ ಸೂಚಿಸಿದರು.
ಈ ಲೇಖನ ಓದಿದ್ದೀರಾ?: ಟ್ರಂಪ್ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ
ಆದಾಗ್ಯೂ, ಮಾಧುರಿ ಆನೆಯನ್ನು ವಂತಾರಗೆ ಸ್ಥಳಾಂತರಿಸಿದ್ದರ ಹಿಂದೆ ರಾಜಕೀಯ ಮತ್ತು ಕಾರ್ಪೊರೇಟ್ ಹೊಂದಾಣಿಕೆ ಇದೆ. ಮೋದಿ ಮತ್ತು ಅಂಬಾನಿ – ಇಬ್ಬರು ಗೆಳೆಯರು. ಈ ದೋಸ್ತಿಯ ಕಾರಣಕ್ಕಾಗಿ, ಹೈಕೋರ್ಟ್ ಗೆ PETA ಮೂಲಕ ಅರ್ಜಿ ಸಲ್ಲಿಸಿ, ಆನೆಯನ್ನು ಮಠದಿಂದ ಕಸಿದುಕೊಂಡು ವಂತಾರಗೆ ಕಳಿಸಲಾಗಿತ್ತು ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಅಷ್ಟಕ್ಕೂ ಮಾಧುರಿ ಆನೆಯನ್ನ ಮಠದಿಂದ ಅದಾನಿ ಒಡೆತನದ ವಂತಾರಗೆ ಕಳಿಸಿದ್ದು ಯಾಕೆ? ಇದರ ಹಿಂದಿರುವ ಉದ್ದೇಶ ಏನು? ಅಷ್ಟಕ್ಕೂ ಆನೆಗೆ ಹುಷಾರಿಲ್ಲ ಎಂಬುದೇ ಆಗಿದ್ದರೂ ಸರ್ಕಾರಿ ಒಡೆತನದ ಝೂಗಳಿಗೆ ಆನೆಯನ್ನ ಸ್ಥಳಾಂತರ ಮಾಡಬಹುದಿತ್ತಲ್ಲ?
ಕಾನೂನು ಪ್ರಕಾರ, ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಸೆಕ್ಷನ್ 43ರ ಅಡಿ, ಆನೆಗಳನ್ನು ಧಾರ್ಮಿಕ ಅಥವಾ ಇತರ ಉದ್ದೇಶಗಳಿಗಾಗಿ ವರ್ಗಾಯಿಸಲು ಅಥವಾ ಸಾಗಿಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಅಲ್ಲದೆ, 2022ರಲ್ಲಿ ತಿದ್ದುಪಡಿಯಾದ ಕಾಯ್ದೆಯು ‘ಧಾರ್ಮಿಕ ಅಥವಾ ಇತರ ಉದ್ದೇಶಗಳಿಗೆ. ಆನೆಯನ್ನು ಸಾಕುವ ಮತ್ತು ವರ್ಗಾವಣೆಗೆ ಅವಕಾಶ ಕಲ್ಪಿಸಿದೆ. ಕಾನೂನಿನ ನಿಯಮಗಳನ್ನು ಪಾಲಿಸುವ ಮೂಲಕ ಮಠಗಳು ಆನೆಯನ್ನು ಸಾಕಬಹುದು ಮತ್ತು ಧಾರ್ಮಿಕ ಉದ್ದೇಶಗಳಿಗೆ ಬಳಸಬಹುದು. ಆನೆಗೆ ಆರೋಗ್ಯದಲ್ಲಿ ಸಮಸ್ಯೆ ಇದ್ದರೇ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಆನೆಗೆ ಚಿಕಿತ್ಸೆ ನೀಡಬಹುದಿತ್ತು. ಆನೆಯನ್ನ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಕಳಿಸಬಹುದಿತ್ತು. ಆದರೂ, ಕೂಡ ಆನೆಯನ್ನ ಅಂಬಾನಿ ಒಡೆತನದ ಸಂಸ್ಥೆಗೆ ಸೇರಿಸಿದ್ದೇಕೆ? ಇದರ ಹಿಂದಿರುವ ಹುನ್ನಾರ ಏನು?