ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ಸುತ್ತ ಹಲವಾರು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಅವುಗಳನ್ನು ಭೇದಿಸುತ್ತಿರುವ ಕೋಲ್ಕತ್ತಾ ಪೊಲೀಸರು ಈವರೆಗೆ 10 ಎಫ್‌ಐಆರ್‌ಗಳನ್ನು ದಾಖಲಿಸಿದ್ದು, 35 ಪ್ರಕರಣಗಳನ್ನು ದಾಖಲಿಕೊಂಡಿದ್ದಾರೆ. ನ್ಯಾಯಕ್ಕೆ ಅಡ್ಡಿಪಡಿಸುವ, ಹಿಂಸಾಚಾರವನ್ನು ಪ್ರಚೋದಿಸುವ ಅಥವಾ ಸಾರ್ವಜನಿಕ ಅಶಾಂತಿಯನ್ನು ಪ್ರಚೋದಿಸುವ ಸುಳ್ಳು ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಹರಡುವುದನ್ನು ತಡೆಯಲು ಕಳೆದ 24 ಗಂಟೆಗಳಲ್ಲಿ ಹಲವರಿಗೆ 200ಕ್ಕೂ ಹೆಚ್ಚು ನೋಟಿಸ್‌ಗಳನ್ನು ಪೊಲೀಸರು ನೀಡಿದ್ದಾರೆ.
ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿಗಳು ಹೇರಳವಾಗಿ ವೈರಲ್ ಆಗುತ್ತಿವೆ. ಅವುಗಳ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್‌ಗಳಲ್ಲಿ ಕ್ರಿಮಿನಲ್ ಪಿತೂರಿ ಆರೋಪ ಮತ್ತು ಐಟಿ ಕಾಯ್ದೆಯ ಹಲವು ಸೆಕ್ಷನ್‌ಗಳನ್ನು ಸೇರಿಸಲಾಗಿದೆ.
ಪ್ರಕರಣ ದಾಖಲಾಗಿರುವ ಆರೋಪಿಗಳಲ್ಲಿ ಪತ್ರಕರ್ತರು, ರಾಜಕಾರಣಿಗಳು, ವೈದ್ಯರು ಮತ್ತು ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಸೇರಿದ್ದಾರೆ. ಪ್ರಕರಣ ಮತ್ತು ಘಟನೆಗೆ ಸಂಬಂಧಿಸಿದಂತೆ ತಪ್ಪಾದ ಮಾಹಿತಿಗಳು, ವೀಡಿಯೊಗಳು, ಧ್ವನಿ ಟಿಪ್ಪಣಿಗಳು, ನಕಲಿ ಮರಣೋತ್ತರ ವರದಿ ಸೇರಿದಂತೆ ನಾನಾ ಸುಳ್ಳುಗಳನ್ನು ಹರಿಬಿಡುಲಾಗುತ್ತಿದೆ. ಪೊಲೀಸರು ಹೆಚ್ಚಿನ ನೋಟಿಸ್‌ಗಳನ್ನು ಕಳುಹಿಸುವ ಮೂಲಕ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಕೋಲ್ಕತ್ತಾ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಅಪರಾಧದ ಬಗ್ಗೆ ತನಿಖೆಗಳು ನಡೆಯುತ್ತಿರುವಾಗ ಸುಳ್ಳು ನಿರೂಪಣೆಗಳು ಮತ್ತು ಪರಿಶೀಲಿಸದ ಮಾಹಿತಿಗಳನ್ನು ಫೇಸ್‌ಬುಕ್, ‘ಎಕ್ಸ್’ ಮತ್ತು ವಾಟ್ಸಾಪ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಕೆಲವು ಪೋಸ್ಟ್‌ಗಳು ತನಿಖೆಯ ಸತ್ಯಗಳನ್ನು ದಾರಿ ತಪ್ಪಿಸುವಂತಿವೆ. ಆಧಾರರಹಿತ ತಪ್ಪು ಮಾಹಿತಿಯಿಂದ ಉಂಟಾಗುವ ಗಂಭೀರ ಅಪಾಯಗಳನ್ನು ಎದುರಿಸುತ್ತಿರುವಾಗ ನಾವು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ” ಎಂದು ಅವರು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಲೋಕಸಭಾ ಚುನಾವಣೆ | ಮೋದಿ 173 ಭಾಷಣಗಳ ಪೈಕಿ 110 ‘ಮುಸ್ಲಿಂ ದ್ವೇಷ’ದಿಂದ ಕೂಡಿವೆ
ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ-ಕೊಲೆ ನಡೆದ ಬಳಿಕ ವೈದ್ಯರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಅತ್ಯಾಚಾರದಂತಹ ಕೃತ್ಯಗಳನ್ನು ಕೊನೆಗಾಣಿಸುವಂತೆ ವೈದ್ಯರು ಸೇರಿದಂತೆ ಎಲ್ಲ ಕ್ಷೇತ್ರದ ಮಹಿಳೆಯರಿಗೆ ರಕ್ಷಣೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಕೃತ್ಯ ನಡೆದ ಬಳಿಕ ಆಸ್ಪತ್ರೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಆದಾಗ್ಯೂ, ಗುರುವಾರ ರಾತ್ರಿ, ಸುಮಾರು 40-50 ಅಪರಿಚಿತ ದುಷ್ಕರ್ಮಿಗಳ ಗುಂಪು ಆರ್‌ಜಿ ಕರ್ ಆಸ್ಪತ್ರೆಗೆ ನುಂಗಿ ಹಿಂಸಾಚಾರ ನಡೆಸಿದೆ.
“ಗೂಂಡಾಗಳು ಕ್ಯಾಂಪಸ್‌ಗೆ ನುಗ್ಗಿ ಧರಣಿ ನಿರತ ವೈದ್ಯರಿಗೆ ಥಳಿಸಿದ್ದಾರೆ. ಇದು ನಮ್ಮ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನವಾಗಿದೆ. ಹಿಂಸಾಚಾರಕ್ಕೆ ಹೆದರಿ ನಾವು ಪ್ರತಿಭಟನೆಯಿಂದ ಹಿಂದೆ ಸರಿಯುತ್ತೇವೆ ಎಂದು ಭಾವಿಸಿದ್ದಾರೆ. ಆದರೆ, ಇಂತಹ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ. ನಮ್ಮ ಹೋರಾಟ ಮತ್ತಷ್ಟು ಗಟ್ಟಿಗೊಳ್ಳುತ್ತದೆ” ಎಂದು ಧರಣಿನಿರತ ವೈದ್ಯರು ಹೇಳಿದ್ದಾರೆ.