ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಯ ಮೇಲಿನ ಅತ್ಯಾಚಾರ-ಕೊಲೆ ಪ್ರಕರಣದ ಬಗ್ಗೆ ಕೋಲ್ಕತ್ತಾ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ವೈದ್ಯರಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಒದಗಿಸಲಾಗದ ಸರ್ಕಾರದ ಸಾಮರ್ಥ್ಯವನ್ನು ಪ್ರಶ್ನಿಸಿದೆ. ಆರ್‌ಜಿ ಕರ್ ಆಸ್ಪತ್ರೆಯಿಂದ ರೋಗಿಗಳನ್ನು ಸ್ಥಳಾಂತರಿಸಿ, ಆಸ್ಪತ್ರೆಯನ್ನು ಮುಚ್ಚುವುದು ಉತ್ತಮ ಎಂದು ಹೇಳಿದೆ.
ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಕೃತ್ಯವನ್ನು ಖಂಡಿಸಿ, ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾನಿರತ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಆಗಸ್ಟ್ 14ರ ಮಧ್ಯರಾತ್ರಿ ನಡೆದ ದಾಳಿಯ ಬಗ್ಗೆ ಕೋಲ್ಕತ್ತಾ ಹೈಕೋರ್ಟ್ ವಿಚಾರಣೆ ನಡೆಸಿದೆ.
ಆಸ್ಪತ್ರೆಗಳಲ್ಲಿ ಅತ್ಯಾಚಾರ-ಕೊಲೆಯಂತಹ ಘಟನೆಗಳು ಆರೋಗ್ಯ ವೃತ್ತಿಪರರಲ್ಲಿ ಭಯ ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸುತ್ತದೆ ಎಂದು ಹೈಕೋರ್ಟ್ ಒತ್ತಿ ಹೇಳಿದೆ. ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವಲ್ಲಿ ರಾಜ್ಯ ಸರ್ಕಾರವು ತೆಗೆದುಕೊಳ್ಳಬೇಕಾದ ಕ್ರಮಗಳ ಅಗತ್ಯದ ಬಗ್ಗೆ ಗಮನ ಸೆಳೆದಿದೆ.
ಹಿಂಸಾಚಾರ ಅಥವಾ ಬೆದರಿಕೆಯ ಭಯವಿಲ್ಲದೆ ಆರೋಗ್ಯ ವೃತ್ತಿಪರರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ವಾತಾವರಣವನ್ನು ಸೃಷ್ಟಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದೆ.
“ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಕ್ಷಣದ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.