ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯೆಯೊಬ್ಬರ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ ಸಂಜಯ್ ರಾಯ್ ಆಗಸ್ಟ್ 9ರ ಘಟನೆಯ ದಿನ ಉನ್ನತ ಪೊಲೀಸ್ ಅಧಿಕಾರಿಯ ಬೈಕ್ ಬಳಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಕೋಲ್ಕತ್ತಾ ಪೊಲೀಸ್ ಇಲಾಖೆಯಲ್ಲಿ ಸ್ವಯಂಸೇವಕನಾಗಿದ್ದ ಸಂಜಯ್ ರಾಯ್ ಅಂದು ಮುಂಬೈನ ರೆಡ್ ಲೈಟ್ ಏರಿಯಾಗೆ ಹೋಗುವಾಗ ಬಳಸಿದ್ದು ಇದೇ ಅಧಿಕಾರಿಯ ಬೈಕ್ ಆಗಿತ್ತು. ಆರೋಪಿ ಕುಡಿದ ಅಮಲಿನಲ್ಲಿ 15 ಕಿ.ಮೀ ದೂರದವರೆಗೆ ಬೈಕ್ ಚಲಾಯಿಸಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಬೈಕ್ 2014 ರಲ್ಲಿ ನೋಂದಾಯಿಸಲ್ಪಟ್ಟಿದೆ. ಅತ್ಯಾಚಾರ-ಕೊಲೆ ಪ್ರಕರಣದ ತನಿಖೆಯ ಭಾಗವಾಗಿ ಸಿಬಿಐ ವಾಹನವನ್ನು ವಶಪಡಿಸಿಕೊಂಡಿದೆ. ಬೈಕ್ನಲ್ಲಿ ಕೆಪಿ ಅಂದರೆ ಕೋಲ್ಕತ್ತಾ ಪೊಲೀಸ್ ಎಂದು ಬರೆಯಲಾಗಿದೆ. ಸಂಜಯ್ ತನ್ನನ್ನು ಪೊಲೀಸ್ ಎಂದು ಹೇಳಿಕೊಂಡು ಎಲ್ಲರನ್ನೂ ಬೆದರಿಸುತ್ತಿದ್ದ. ಈ ಬೈಕ್ ಹಿರಿಯ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ನೋಂದಣಿಯಾಗಿದೆ. ಆಗಸ್ಟ್ 9 ರ ಘಟನೆಯ ನಂತರ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಕೋಲ್ಕತ್ತಾ ಪೊಲೀಸರು ಸಂಜಯ್ ರಾಯ್‌ನನ್ನು ಬಂಧಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದರ್ಶನಾತಿಥ್ಯ- ಪೊಲೀಸರಿಂದ ಪೊಲೀಸರಿಗಾದ ಅವಮಾನ
ಆರ್‌ಜಿ ಕರ್ ಆಸ್ಪತ್ರೆಯ ಸೆಮಿನಾರ್ ಕೊಠಡಿಗೆ ಬಂದಾಗ ಮಹಿಳಾ ವೈದ್ಯೆ ಆಗಲೇ ಮೃತಪಟ್ಟಿದ್ದಳು ಎಂದು ಆರೋಪಿ ಸಂಜಯ್ ರಾಯ್ ಪಾಲಿಗ್ರಾಫ್ ಪರೀಕ್ಷೆ ವೇಳೆ ಹೇಳಿಕೆ ನೀಡಿದ್ದಾನೆ. ಅತ್ಯಾಚಾರ, ಕೊಲೆ ಮಾಡಿದ್ದು ನಾನೇ ಎಂದು ಈಗಾಗಲೇ ಒಪ್ಪಿಕೊಂಡಿರುವ ಸಂಜಯ್ ರಾಯ್ ಇದೀಗ ಸುಳ್ಳು ಹೇಳುತ್ತಿದ್ದಾನೆ. ಅಂದು ನಾನು ಸೆಮಿನಾರ್ ಕೊಠಡಿಗೆ ಹೋಗುವ ಮೊದಲು ಆಕೆ ಸಾವನ್ನಪ್ಪಿದ್ದಳು, ನಾನು ನಿರಪರಾಧಿ ಎಂದು ಹೇಳಿದ್ದಾನೆ.
ಕೋಲ್ಕತ್ತಾದ ಪ್ರೆಸಿಡೆನ್ಸಿ ಜೈಲಿನಲ್ಲಿ ಸಿಬಿಐ ಅಧಿಕಾರಿಗಳು ಆರೋಪಿ ಸಂಜಯ್ ರಾಯ್‌ನ ಪಾಲಿಗ್ರಾಫ್ ಪರೀಕ್ಷೆಯನ್ನು ನಡೆಸಿದ್ದರು. ಸುಳ್ಳು ಪತ್ತೆ ಪರೀಕ್ಷೆ ವೇಳೆ ಸುಳ್ಳು ಹಾಗೂ ಅನುಮಾನಾಸ್ಪದ ಉತ್ತರಗಳನ್ನು ಗುರುತಿಸಲಾಗಿದೆ. ಸಂಜಯ್ ರಾಯ್ ಆ ವೇಳೆ ಆತಂಕಗೊಂಡಿದ್ದು, ಸಿಬಿಐ ಹಲವು ಸಾಕ್ಷ್ಯಗಳನ್ನು ಮುಂದಿಟ್ಟರೂ ಆತ ಸಮರ್ಥನೆ ನೀಡುತ್ತಲೇ ಇದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ.
