ಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ವೈದ್ಯರ್ಥಿನಿ ಮೇಲಿನ ಅತ್ಯಾಚಾರ-ಕೊಲೆ ಪ್ರಕರಣ ನಡೆದು ಒಂವು ವರ್ಷವಾಗಿದೆ. ಆದರೆ, ಪ್ರಕರಣದ ತನಿಖೆಯು ಗಮನಾರ್ಹ ಹಂತಕ್ಕೆ ತಲುಪಿಲ್ಲ. ಹೀಗಾಗಿ, ಸಂತ್ರಸ್ತೆಯ ಪೋಷಕರು ಮತ್ತು ಬಿಜೆಪಿಗರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಪ್ರತಿಭಟನೆ ನಡೆಸಿದ್ದು, ಮಮತಾ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಪ್ರತಿಭಟನಾ ಮೆರವಣಿಗೆ ತೆರಳುತ್ತಿದ್ದ ವೇಳೆ, ಮಹಿಳಾ ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ, ತಲೆಗೆ ಪೆಟ್ಟು ಬಿದ್ದಿದೆ. ನನ್ನ ಕೈಯಲ್ಲಿದ್ದ ಬಳೆಗಳು ಒಡೆದಿವೆ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ.
ಶಾಂತಿಯುತವಾಗಿ ಪ್ರತಿಭಟನಾ ಮೆರವಣಿಗೆ ನಡೆಸಲು ನ್ಯಾಯಾಲಯವು ಅನುಮತಿ ನೀಡಿದ್ದರೂ, ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸದಂತೆ ನಮ್ಮನ್ನು ಪೊಲೀಸರು ತಡೆದಿದ್ದಾರೆ ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ.
ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ವಿದ್ಯಾಸಾಗರ್ ಸೇತುವೆ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಆ ಬ್ಯಾರಿಕೇಡ್‌ಗಳನ್ನು ಮುರಿಯಲು ಪ್ರತಿಭಟನಾಕಾರರು ಯತ್ನಿಸಿದ್ದರಿಂದ, ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರು ನಡೆಸಿದ ಲಾಠಿಚಾರ್ಜ್‌ನಿಂದ ಸಂತ್ರಸ್ತೆಯ ಪೋಷಕರು, ಬಿಜೆಪಿ ನಾಯಕರು ಸೇರಿದಂತೆ 100ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎಂದು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.
2024ರ ಆಗಸ್ಟ್ 9ರಂದು ಕೋಲ್ಕತ್ತದ ಆರ್.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿತ್ತು.