ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಗರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಬೆಂಕಿ ಅವಘಡಗಳು ಸಂಭವಿಸುತ್ತಲೇ ಇವೆ. ಬುಧವಾರ ಕಾಲ್ತುಳಿತವೂ ಸಂಭವಿಸಿದ್ದು, 40 ಮಂದಿ ಸಾವನ್ನಪ್ಪಿದ್ದಾರೆ. ಭಕ್ತರಲ್ಲಿ ಆತಂಕ ಹೆಚ್ಚಾಗುತ್ತಿದೆ. ಇದೆಲ್ಲದರ ನಡುವೆ, ಕುಂಭಮೇಳದಲ್ಲಿ ಭಕ್ತರಿಗಾಗಿ ತಯಾರಿಸುತ್ತಿದ್ದ ಆಹಾರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಬೂದಿ ಬೆರೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಅಧಿಕಾರಿಯನ್ನು ಇದೀಗ ಅಮಾನತು ಮಾಡಲಾಗಿದೆ.
ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ವಿಡಿಯೋವನ್ನು ಹಂಚಿಕೊಂಡು, ಕುಂಭಮೇಳ ನಡೆಯುತ್ತಿರುವ ಪ್ರದೇಶದ ಡಿಸಿಪಿ ಕುಲೀಪ್ ಸಿಂಗ್ ಗುಣವತ್ ಅವರನ್ನು ಟ್ಯಾಗ್ ಮಾಡಿದ್ದರು. ವಿಡಿಯೋದಲ್ಲಿ ಪೊಲೀಸ್ ಅಧಿಕಾರಿ ಬ್ರಿಜೇಶ್ ಕುಮಾರ್ ತಿವಾರಿ, ಒಲೆಯ ಮೇಲೆ ತಯಾರಿಸಲಾಗುತ್ತಿದ್ದ ಆಹಾರಕ್ಕೆ ಬೂದಿ ಸೇರಿಸುವುದು ಸೆರೆಯಾಗಿದೆ.
ವಿಡಿಯೋವನ್ನು ಹಂಚಿಕೊಂಡಿದ್ದ ಹಲವರು, ಇದು ನಾಚಿಕೆಗೇಡಿನ ಕೃತ್ಯವಾಗಿದೆ. ತಪ್ಪಿತಸ್ತ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.
ವಿಡಿಯೋ ವೈರಲ್ ಆದ ಬಳಿಕ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ಆಹಾರದಲ್ಲಿ ಬೂದಿ ಬೆರೆಸಿದ್ದ ಪೊಲೀಸ್ ಅಧಿಕಾರಿ ಬ್ರಿಜೇಶ್ ಕುಮಾರ್ ತಿವಾರಿ ಎಂಬವರನ್ನು ಅಮಾನತುಗೊಳಿಸಿದೆ.