ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಅವರನ್ನು ಟೀಕಿಸಿದ ಬೆನ್ನಲ್ಲೇ ಸ್ಟಾಂಡ್‌ಅಪ್ ಕಾಮೆಡಿಯನ್ ಕುನಾಲ್ ಕಾಮ್ರಾ ಶಿವಸೇನೆ ಕಾರ್ಯಕರ್ತರನ್ನು ಕುಟುಕಿ ಹೊಸ ಹಾಡು ಹಾಡಿದ್ದಾರೆ. ಈ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ತನ್ನ ಪಕ್ಷವನ್ನೇ ಇಬ್ಭಾಗ ಮಾಡಿದ ಏಕನಾಥ್ ಶಿಂದೆ ಅವರನ್ನು ದ್ರೋಹಿ ಎಂದು ಕುನಾಲ್ ಕಾಮ್ರಾ ಇತ್ತೀಚಿನ ತನ್ನ ಹಾಸ್ಯ ಕಾರ್ಯಕ್ರಮದಲ್ಲಿ ಹೇಳಿದ್ದರು. ಶಿಂದೆ ಹೆಸರನ್ನು ಉಲ್ಲೇಖಿಸದ ಕುನಾಲ್ ಥಾಣೆಯ ನಾಯಕ ಎಂದು ಉಲ್ಲೇಖಿಸಿ ದಿಲ್ ತೋ ಪಾಗಲ್ ಹೈ ಹಾಡನ್ನು ಅಣಕಿಸುವ ಹಾಡಾಗಿ ಬದಲಾಯಿಸಿ ಹಾಡಿದ್ದರು.
ಇದನ್ನು ಓದಿದ್ದೀರಾ? ‘ಯಾರು ಅವರು, 2 ನಿಮಿಷದ ಕಾಮೆಡಿಯನ್’: ಕುನಾಲ್ ಕಾಮ್ರಾ ಬಗ್ಗೆ ಕಂಗನಾ ರಣಾವತ್ ಕಿಡಿ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾಮ್ರಾ ವಿರುದ್ಧ ಆಕ್ರೋಶಗೊಂಡ ಶಿವಸೇನೆ ಕಾರ್ಯಕರ್ತರು ಈ ಕಾರ್ಯಕ್ರಮ ನಡೆದ ಸ್ಟುಡಿಯೋ ಧ್ವಂಸ ಮಾಡಿದ್ದರು. ಅದಾದ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರವೇ ಕುನಾಲ್ ಮಾಲೀಕತ್ವದ ಕಟ್ಟಡ ಅಕ್ರಮ ಎಂದು ನೆಲಸಮ ಪ್ರಕ್ರಿಯೆ ಶುರು ಮಾಡಿದೆ.
ಕಾಮ್ರಾಗೆ ಶಿವಸೇನೆ ನಾಯಕರು ಜೀವ ಬೆದರಿಕೆಯನ್ನೂ ಹಾಕಿದ್ದಾರೆ. ಹೊರಬಂದರೆ ಜೀವಂತವಾಗಿ ಉಳಿಯಲಾರೆ ಎಂದು ಟ್ವೀಟ್ ಮಾಡಿದ್ದಾರೆ. ಇವೆಲ್ಲವುದರ ನಡುವೆ ಕುನಾಲ್ ಹೊಸ ಹಾಡೊಂದನ್ನು ಪೋಸ್ಟ್ ಮಾಡಿ ಶಿವಸೇನೆ ನಾಯಕರನ್ನು ಕುಟುಕಿದ್ದಾರೆ.
👀👀👀 pic.twitter.com/C5Bnn81p5E
— Kunal Kamra (@kunalkamra88) March 25, 2025
‘ಹಮ್ ಹೋಂಗೆ ಕಾಮಿಯಾಬ್’ ಎಂಬ ಹಾಡನ್ನು ವಿಡಂಬನೆಯ ಹಾಡಾಗಿ ಬದಲಾಯಿಸಿರುವ ಕುನಾಲ್ ‘ವಿಕ್ಷಿತ್ ಭಾರತ’ದ ಹೊಸ ಹಾಡು ಎಂದು ಹೇಳಿದ್ದಾರೆ. ಕನ್ನಡದಲ್ಲಿ ಅದೇ ರಾಗದಲ್ಲಿ ಹಾಡುವುದಾದರೆ “ನಾವು ಗೆದ್ದೆ ಗೆಲ್ಲುವೆವು, ಗೆದ್ದೆ ಗೆಲ್ಲುವೆವು ಒಂದು ದಿನ. ಮನದಿ ಅಂಧ ವಿಶ್ವಾಸ, ದೇಶದ ಸತ್ಯನಾಶ, ನಾವು ದಿವಾಳಿಯಾಗುವೆವು ಒಂದು ದಿನ. ಬೆತ್ತಲಾಗ್ವೆವು ಎಲ್ಲೆಡೆ, ದಂಗೆ ಮಾಡ್ವೆವು ಎಲ್ಲೆಡೆ, ಪೊಲೀಸರೊಂದಿಗೆ ಗಲಾಟೆ ಒಂದು ದಿನ… ಮನದಲ್ಲಿ ನಾಥುರಾಮ್, ಕಾರ್ಯವೆಲ್ಲ ಆಸಾರಾಮ್, ನಾವು ಕಂಗಾಲಾಗುವೆವು ಒಂದು ದಿನ” ಎಂಬುದು ಸಾರಾಂಶವಾಗಿದೆ.
ಇದನ್ನು ಓದಿದ್ದೀರಾ? ಶಿಂದೆ ‘ದ್ರೋಹಿ’ ಎಂದ ಕುನಾಲ್ ಕಮ್ರಾ: ಎಫ್‌ಐಆರ್ ದಾಖಲು, ಹೋಟೆಲ್ ಧ್ವಂಸ
ಸ್ಟುಡಿಯೋಗೆ ನುಗ್ಗಿ ಹಾನಿ ಮಾಡಿದ ಕಾರಣ ಶಿವಸೇನೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಜಾಮೀನು ಪಡೆದ ಕಾರ್ಯಕರ್ತರು ಹೊರಬಂದಿದ್ದಾರೆ. ಇದಾದ ಬಳಿಕ ಕಾಮ್ರಾ ಫೋಟೋ ಸುಟ್ಟು ಹಾಕಿ, ಪ್ರತಿಕೃತಿ ಸುಟ್ಟು ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಇವೆಲ್ಲವುದನ್ನು ಕಾಮ್ರಾ ತನ್ನ ಹಾಡಿನಲ್ಲಿ ತೋರಿಸಿದ್ದಾರೆ.
ಸದ್ಯ ಈ ಹಾಡಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿಂದೆ ಬೆಂಬಲಿಗರು ಕಾಮ್ರಾಗೆ ಮತ್ತಷ್ಟು ಬೆದರಿಕೆ ಹಾಕಿ ಕಾಮೆಂಟ್ ಮಾಡಿದ್ದರೆ, ನೀವು ಪ್ರಸಕ್ತ ರಾಜಕೀಯವನ್ನು ಸರಿಯಾಗಿ ಕಟ್ಟಿಕೊಟ್ಟಿದ್ದೀರಿ ಎಂದು ಕೆಲವು ನೆಟ್ಟಿಗರು ಪ್ರಶಂಸಿಸಿದ್ದಾರೆ.
