ಶಿವಾಜಿಗೂ ಲಡಾಖ್‌ಗೂ ಯಾವುದೇ ಸಂಬಂಧವಿಲ್ಲ. ಶಿವಾಜಿ ಎಂದಿಗೂ ಲಡಾಖ್ ಭಾಗಕ್ಕೆ ಬಂದಿದ್ದ ಇತಿಹಾಸವೂ ಇಲ್ಲ. ಲಡಾಖ್‌ಗೆ ಶಿವಾಜಿಯ ಕೊಡುಗೆಗಳೂ ಇಲ್ಲ. ಹೀಗಿದ್ದರೂ, ಲಡಾಖ್‌ನಲ್ಲಿ ಶಿವಾಜಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಇದು ಕಾಶ್ಮೀರಿಗಳ ಮೇಲಿನ ಸಾಂಸ್ಕೃತಿಕ ದಬ್ಬಾಳಿಕೆಯಲ್ಲವೇ?
ಭಾರತದ ಪೂರ್ವ ಲಡಾಖ್‌ನ ವಲಯದಲ್ಲಿ ಚೀನಾದೊಂದಿಗೆ ಹಂಚಿಕೆಯಾಗಿರುವ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ) ಸಮೀಪದ ಪ್ಯಾಂಗಾಂಗ್ ತ್ಸೋ ಸರೋವರದ ದಡದಲ್ಲಿ ಭಾರತೀಯ ಸೇನೆಯು ಮಹಾರಾಷ್ಟ್ರದ ರಾಜ ಛತ್ರಪತಿ ಶಿವಾಜಿ ಪ್ರತಿಮೆಯನ್ನ ಅನಾವರಣಗೊಳಿಸಿದೆ. ಸೇನೆಯ ನಡೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಜಮ್ಮು-ಕಾಶ್ಮೀರದ ಜನರು ಸೇರಿದಂತೆ ಹಲವಾರು ಮಂದಿ ಸೇನೆಯ ನಡೆಯನ್ನು ಖಂಡಿಸಿದ್ದಾರೆ. ಇದು, ಒಂದು ಪ್ರದೇಶದ ಮೇಲಿನ ಸಾಂಸ್ಕೃತಿಕ ದಬ್ಬಾಳಿಕೆಯೆಂದು ಕಾಶ್ಮೀರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಫೈರ್ ಆ್ಯಂಡ್ ಫ್ಯುರಿ ಕಾರ್ಪ್ಸ್’ನ ಜನರಲ್ ಆಫೀಸರ್ ಹಾಗೂ ಮರಾಠಾ ಲೈಟ್ ಇನ್ ಫ್ಯಾಂಟ್ರಿಯ ಕರ್ನಲ್ ಆಗಿರುವ ಲೆ.ಜ. ಹಿತೇಶ ಭಲ್ಲಾ ಅವರು ಡಿಸೆಂಬರ್ 26ರಂದು ಛತ್ರಪತಿ ಶಿವಾಜಿಯ ಕಂಚಿನ ಪ್ರತಿಮೆಯನ್ನು ಪ್ಯಾಂಗಾಂಗ್ ತ್ಸೋ ಸರೊವರದ ದಡದಲ್ಲಿ ಅನಾವರಣಗೊಳಿಸಿದ್ದಾರೆ.
”ಈ ಭವ್ಯ ಪ್ರತಿಮೆಯು ಶೌರ್ಯ, ದೂರದೃಷ್ಟಿ ಮತ್ತು ಅಚಲ ನ್ಯಾಯದ ಸಂಕೇತವಾಗಿದೆ. ಶಿವಾಜಿ ಮಹಾರಾಜರ ಪರಂಪರೆಯು ತಲೆಮಾರುಗಳಿಂದಲೂ ಸ್ಫೂರ್ತಿಯ ಮೂಲವಾಗಿದೆ” ಎಂದು ಭಾರತಿಯ ಸೇನೆಯು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ.
ಸೇನೆಯ ಈ ನಡೆಯನ್ನು ಲಡಾಖ್ ಹಾಗೂ ಜಮ್ಮು-ಕಾಶ್ಮೀರದ ಬಿಜೆಪಿಯೇತರ ಶಾಸಕರು ಮತ್ತು ಸಾಮಾಜಿಕ ಕಾರ್ಯಕರ್ತರು ಕಠುವಾಗಿ ವಿರೋಧಿಸಿದ್ದಾರೆ. ಶಿವಾಜಿಗೂ ಲಡಾಖ್‌ಗೂ ಯಾವುದೇ ಸಂಬಂಧವಿಲ್ಲ. ಶಿವಾಜಿ ಎಂದಿಗೂ ಲಡಾಖ್ ಭಾಗಕ್ಕೆ ಬಂದಿದ್ದ ಇತಿಹಾಸವೂ ಇಲ್ಲ. ಲಡಾಖ್‌ನಲ್ಲಿ ಶಿವಾಜಿಯ ಕೊಡುಗೆಗಳೂ ಇಲ್ಲ. ಹೀಗಿದ್ದರೂ, ಲಡಾಖ್‌ನಲ್ಲಿ ಶಿವಾಜಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಕಾಶ್ಮೀರಿಗಳ ಮೇಲೆ ಸಾಂಸ್ಕೃತಿಕ ದಮನ ನಡೆಯುತ್ತಿದೆ. ಲಡಾಖ್, ಜಮ್ಮು-ಕಾಶ್ಮೀರದ ಸ್ಥಳೀಯ ಸಾಂಸ್ಕೃತಿಕ ಆಚರಣೆಗಳ ಮೇಲೆ ಮತ್ತೊಂದು ಸಂಸ್ಕೃತಿಯನ್ನು ಹೇರಲಾಗುತ್ತಿದೆ. ಜೊತೆಗೆ, ಹಿಮಾಲಯದ ಸೂಕ್ಷ್ಮ ಪರಿಸರಕ್ಕೆ ‘ಅಪಮಾನ’ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸ್ಥಳೀಯ ನಿವಾಸಿಯಾಗಿ, ನಾನು ಪ್ಯಾಂಗಾಂಗ್‌ನಲ್ಲಿ ನಿರ್ಮಾಣ ಮಾಡಲಾಗಿರುವ ಶಿವಾಜಿ ಪ್ರತಿಮೆಯನ್ನು ವಿರೋಧಿಸುತ್ತೇನೆ. ಸ್ಥಳೀಯ ಜನರ ಜತೆಗೆ ಸಮಾಲೋಚನೆ ನಡೆಸದೇ ಶಿವಾಜಿ ಪ್ರತಿಮೆಯನ್ನ ನಿರ್ಮಾಣ ಮಾಡಲಾಗಿದೆ. ಈ ನಡೆಯು ನಮ್ಮ ವಿಶಿಷ್ಟ ಪರಿಸರ ಮತ್ತು ವನ್ಯಜೀವಿ ವ್ಯವಸ್ಥೆ ಮತ್ತು ಸಂಸ್ಕೃತಿಗಳ ಪ್ರಸ್ತುತತೆಯ ಪ್ರಶ್ನೆಯನ್ನು ಹುಟ್ಟುಹಾಕಿದೆ. ನಮ್ಮ ಸಮುದಾಯ ಮತ್ತು ಪ್ರಕೃತಿಯನ್ನು ನಿಜವಾಗಿಯೂ ಪ್ರತಿಬಿಂಬಿಸುವ ಮತ್ತು ಗೌರವಿಸುವ ಯೋಜನೆಗಳಿಗೆ ಆದ್ಯತೆ ನೀಡೋಣ” ಎಂದು ಲಡಾಖ್ ಹಿಲ್ ಡೆವಲಪ್ಮೆಂಟ್ ಕೌನ್ಸಿಲ್‌ನ ಮಾಜಿ ಕಾರ್ಯಕಾರಿ ಕೌನ್ಸಿಲರ್ ಸ್ಟಾಂಜಿನ್ ಹೇಳಿದ್ದಾರೆ.
ಭಾರತೀಯ ಸೇನೆಯ ಈ ಕ್ರಮವನ್ನು ಸಾಂಸ್ಕ್ರತಿಕ ದಬ್ಬಾಳಿಕೆ ಎಂದು ಹಿರಿಯ ರಾಜಕಾರಣಿ ಸಜ್ಜದ್ ಕಾರ್ಗಿಲಿ ಅಭಿಪ್ರಾಯಪಟ್ಟಿದ್ದಾರೆ. “ಭಾರತಿಯ ಸೇನೆಯು ಸ್ಥಳೀಯ ಆಡಳಿತ, ಪಕ್ಷಗಳು, ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಿಲ್ಲ. ಅಭಿಪ್ರಾಯ ಸಂಗ್ರಹಿಸಿಲ್ಲ. ಮರಾಠಾ ರಾಜ ಮಹಾರಾಷ್ಟ್ರಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದರೂ ಕೂಡ, ಶಿವಾಜಿ ಅವರು ಲಡಾಖ್‌ಗೆ ರಾಜಕೀಯವಾಗಿ ಸಂಬಂಧಿಸಿಲ್ಲ. ಅವರ ಪ್ರತಿಮೆಯನ್ನು ಲಡಾಖ್‌ನಲ್ಲಿ ಸ್ಥಾಪಿಸುವ ಅಗತ್ಯವಿರಲಿಲ್ಲ. ಲಡಾಖ್ ಮೇಲೆ ಸಾಂಸ್ಕೃತಿಕ ಗುರುತುಗಳನ್ನು ಹೇರುವುದು ಸ್ವೀಕಾರಾರ್ಹವಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವರದಿ ಓದಿದ್ದೀರಾ?: ಮುನಿರತ್ನನ ಪರ ನಿಂತ ಸ್ತ್ರೀಯರು ಆತನ ʼಏಡ್ಸ್ ಟ್ರ್ಯಾಪ್ʼ ಕೃತ್ಯವನ್ನು ಬೆಂಬಲಿಸುವರೇ?; ರವಿ ಬೆಂಬಲಿಗರು ಆ ಪದವನ್ನು ಒಪ್ಪುವರೇ?
”ಲಡಾಖ್‌ನ ಸಂಸ್ಕೃತಿ ಮತ್ತು ಇತಿಹಾಸವನ್ನು ಸಂರಕ್ಷಿಸುವುದು ಹೆಚ್ಚು ಮುಖ್ಯವಾಗಿದೆ. ನಮ್ಮ ಇತಿಹಾಸಕ್ಕೆ ಸಂಬಂಧಿಸಿದ ಖ್ರೀ ಸುಲ್ತಾನ್ ಚೋ, ಅಲಿ ಶೇರ್ ಖಾನ್ ಅಂಚನ್ ಅಥವಾ ಗ್ಯಾಲ್ ಖಾತೂನ್ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದರೆ ಹೆಚ್ಚು ಸೂಕ್ತವಾಗುತ್ತಿತ್ತು. ಪ್ಯಾಂಗಾಂಗ್ ತ್ಸೋ ಸರೋವರದಂತಹ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಇಂತಹ ಪ್ರತಿಮೆಗಳ ಅಗತ್ಯವಿಲ್ಲ” ಎಂದು ಅವರು ವಿವರಿಸಿದ್ದಾರೆ.
ಇನ್ನು ಹಲವರು ಸೇನೆಗಾಗಿ ಸೇವೆ ಸಲ್ಲಿಸಿದ ಸಿಖ್ ಜನರಲ್ ಜೋರಾವರ್ ಸಿಂಗ್ ಅಥವಾ ಮಹಾರಾಜ ಗುಲಾಬ್ ಸಿಂಗ್ ಅವರ ಪ್ರತಿಮೆ ನಿರ್ಮಾಣ ಮಾಡಬಹುದಿತ್ತು. ಮರಾಠಿಗರನ್ನು ಓಲೈಸಲು ಶಿವಾಜಿಯ ಪ್ರತಿಮೆಯನ್ನು ಲಡಾಖ್‌ನಲ್ಲಿ ಸ್ಥಾಪಿಸಲಾಗಿದೆ. ಇದರ ಹಿಂದೆ, ಪ್ರಧಾನಿ ಮೋದಿ ಮತ್ತು ಬಿಜೆಪಿಯ ರಾಜಕೀಯ ಲಾಭದ ದುರುದ್ದೇಶವಲ್ಲದೆ, ಬೇರೇನೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮ್ಮು ಮೂಲದ ಹಿರಿಯ ರಾಜಕೀಯ ವಿಮರ್ಶಕ ಜಾಫರ್ ಚೌಧರಿ, ”ಮರಾಠ ದೊರೆ ಭಾರತೀಯ ಇತಿಹಾಸದಲ್ಲಿ ಮಹಾನ್ ವ್ಯಕ್ತಿಯಾಗಿದ್ದರೂ, ಅವರಿಗೆ ಲಡಾಖ್ ಜೊತೆಗೆ ಯಾವುದೇ ಸಂಬಂಧವಿಲ್ಲ. ಲಡಾಖ್ ತನ್ನ ಸಾರ್ವಜನಿಕ ಸಂಭ್ರಮಕ್ಕೆ ಅರ್ಹವಾದ ಹಲವಾರು ಸ್ಥಳೀಯ ವೀರರನ್ನು ಹೊಂದಿದೆ. ಶಿವಾಜಿಯ ಪ್ರತಿಮೆಯ ಬದಲು ಕಿಂಗ್ ಸ್ಕಿಲ್ಡೆ ನಿಮಾಗೊನ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಬಹುದಿತ್ತು. ಜನರು ಸ್ಥಳೀಯ ವೀರರೊಂದಿಗೆ ಹೆಮ್ಮೆ ಹೊಂದಿರುತ್ತಾರೆ. ಭಾರತೀಯ ರಾಷ್ಟ್ರೀಯ ಏಕೀಕರಣದ ದೃಷ್ಟಿಕೋನದಿಂದ ಪ್ರತಿಮೆಗಳನ್ನು ನಿರ್ಮಾಣ ಮಾಡಬೇಕಿದ್ದರೆ, ಜನರಲ್ ಜೋರಾವರ್ ಮತ್ತು ಮಹಾರಾಜ ಗುಲಾಬ್ ಸಿಂಗ್ ಉತ್ತಮ ಆಯ್ಕೆಯಾಗಿದ್ದರು” ಎಂದು ಹೇಳಿದ್ದಾರೆ.