ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವವಾಗಿ ಗೆಲುವು ಸಾಧಿಸಿರುವ ಝೆಡ್‌ಪಿಎಂನ ಶಾಸಕಾಂಗ ನಾಯಕರಾಗಿ ಲಾಲ್ದುಹೋಮಾ ಆಯ್ಕೆಯಾಗಲಿದ್ದಾರೆ.
ಡಿಸೆಂಬರ್ 8ರಂದು ಲಾಲ್ದುಹೋಮಾ ಅವರು ಮಿಜೋರಾಂ ರಾಜಧಾನಿ ಐಜ್ವಾಲ್‌ನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಶಾಸಕರೊಂದಿಗೆ ಸಭೆಯ ನಂತರ ಇಂದು ಸಂಜೆಯೊಳಗೆ ರಾಜ್ಯಪಾಲ ಹರಿಬಾಬು ಕಂಬಂಪತಿ ಅವರನ್ನು ರಾಜಭವನದಲ್ಲಿ ಲಾಲ್ದುಹೋಮಾ ಭೇಟಿಯಾಗುವ ಸಾಧ್ಯತೆಯಿದೆ.
ಐಜ್ವಾಲ್‌ನಲ್ಲಿರುವ ಲಾಲ್ದುಹೋಮಾ ಅವರ ನಿವಾಸದಲ್ಲಿ ಝೆಡ್‌ಪಿಎಂ ಶಾಸಕರು ಸಭೆ ಸೇರಲಿದ್ದು, ಅಲ್ಲಿ ಪಕ್ಷದ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಲಾಲ್ದುಹೋಮಾ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.
ಈ ಸುದ್ದಿ ಓದಿದ್ದೀರಾ? ತೆಲಂಗಾಣದಲ್ಲಿ ಮುಂದುವರೆದ ಸಿಎಂ ಆಯ್ಕೆ ಕಗ್ಗಂಟು
ಐಪಿಎಸ್ ಅಧಿಕಾರಿಯಾಗಿದ್ದ ಲಾಲ್ದುಹೋಮಾ 1984ರಲ್ಲಿ ರಾಜೀನಾಮೆ ನೀಡಿ ರಾಜಕೀಯಕ್ಕೆ ಸೇರ್ಪಡೆಗೊಂಡಿದ್ದರು. ಕಳೆದ ನಾಲ್ಕು ದಶಕಗಳಲ್ಲಿ ತಮ್ಮ ರಾಜಕೀಯ ಹೋರಾಟದ ನಂತರ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಿದ್ದಾರೆ.
ಡಿ.4 ರಂದು ನಡೆದ ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಝೆಡ್‌ಪಿಎಂ ಒಟ್ಟು 40 ಸ್ಥಾನಗಳ ಪೈಕಿ 27 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಏರುವ ಪಕ್ಷವಾಗಿ ಹೊರಹೊಮ್ಮಿತು. ಹಿಂದಿನ ಜೋರಮ್ತಂಗಾ ನೇತೃತ್ವದ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ಸರ್ಕಾರ ಕೇವಲ 10 ಸ್ಥಾನಗಳನ್ನಷ್ಟೆ ಪಡೆಯಲು ಸಾಧ್ಯವಾಯಿತು.
ಬಿಜೆಪಿ ಎರಡು ಸ್ಥಾನ ಗಳಿಸಿದರೆ, 1986 ರಿಂದ ಮಿಜೋರಾಂನಲ್ಲಿ ಐದು ಬಾರಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಚುನಾವಣೆಯಲ್ಲಿ ಸೋತಿದ್ದ ಜೋರಮ್ತಂಗಾ ಸೋಮವಾರ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.