ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೂ ವಿವಾದ ಪ್ರಕರಣವೊಂದು ಬರೋಬ್ಬರಿ 66 ವರ್ಷಗಳ ಕಾಲ ವಿಚಾರಣೆ ನಡೆದಿದೆ. ಆದಾಗ್ಯೂ, ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯ ದೊರೆತಿಲ್ಲ. ಬದಲಾಗಿ, ವಿವಾದ ಸಂಬಂಧ ಅರ್ಜಿ ಸಲ್ಲಿಸಿದ್ದ ಮೂಲ ಅರ್ಜಿದಾರರು ಸಾವನ್ನಪ್ಪಿದ್ದಾರೆ ಎಂಬ ಕಾರಣಕ್ಕೆ, ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ.
1959ರಲ್ಲಿ ಭೂ ವಿವಾದ ಸಂಬಂಧಿತ ಪ್ರಕರಣ ದಾಖಲಾಗಿತ್ತು. ಅರ್ಜಿದಾರ ಮೋಹನ್ ಲಾಲ್ ಎಂಬವರು ದೆಹಲಿಯ ಬಸಾಯಿ ದಾರಾಪುರ ಪ್ರದೇಶದಲ್ಲಿರುವ ತಮ್ಮ ಭೂಮಿಯಲ್ಲಿ ಡೆವಪರ್‌ಗಳು ಮನೆ ಕಟ್ಟಿದ್ದಾರೆಂದು ಆರೋಪಿಸಿದ್ದರು.
ಅರ್ಜಿ ದಾಖಲಿಸಿದ್ದ ಸಮಯದಲ್ಲಿ, “ತಮ್ಮ ಒಪ್ಪಿಗೆ ಇಲ್ಲದೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆ ಭೂಮಿಯಲ್ಲಿ ಡೆವಲಪರ್‌ಗಳು ಕಾರ್ಯಾಚರಣೆ ನಡೆಸದಂತೆ ತಡೆಯಾಜ್ಞೆ ನೀಡಬೇಕು. ತಮಗೆ ಪರಿಹಾರ ಕೊಡಿಸಬೇಕು” ಎಂದು ಅರ್ಜಿದಾರ ಮೋಹನ್ ಲಾಲ್ ವಾದಿಸಿದ್ದರು.
ಆ ಪ್ರಕರಣವನ್ನು ಪ್ರಸ್ತುತ ದೆಹಲಿಯ ನಗರ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಕಪಿಲ್ ಗುಪ್ತಾ ವಿಚಾರಣೆ ನಡೆಸುತ್ತಿದ್ದರು. ಆದಾಗ್ಯೂ, ಈಗ ಮೂಲ ಅರ್ಜಿದಾರರು (ಮೋಹನ್ ಲಾಲ್) ಸಾವನ್ನಪ್ಪಿದ್ದು, “ಅವರು ಪರಿಹಾರವನ್ನು ಮಾತ್ರವೇ ಕೋರಿದ್ದರಿಂದ, ಇಂತಹ ಪರಿಸ್ಥಿತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಪ್ರಕರಣವು ವಜಾಗೊಳಿಸಲು ಅರ್ಹವಾಗಿದೆ” ಎಂದಿರುವ ನ್ಯಾಯಾಧೀಶರು, ಪ್ರಕರಣವನ್ನು ರದ್ದುಗೊಳಿಸಿದ್ದಾರೆ.
“ಮೂರು ತಲೆಮಾರುಗಳ ಕಾಲ ನಡೆದ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಲು ಕ್ರಮ ತೆಗೆದುಕೊಂಡ ನ್ಯಾಯಾಧೀಶರಿಗೆ ಅಭಿನಂದನೆ ಸಲ್ಲಿಸಬೇಕು” ಎಂದು ಪ್ರತಿವಾದಿ ಪರ ವಕೀಲ ಅಮಿತ್ ಕುಮಾರ್ ಹೇಳಿದ್ದಾರೆ.
ಆದಾಗ್ಯೂ, ಮೊಕದ್ದಮೆ ಇನ್ನೂ ಸಂಪೂರ್ಣವಾಗಿ ಮುಕ್ತಾಯಗೊಂಡಿಲ್ಲ. ಏಕೆಂದರೆ ವಾದಿಗಳು ಉನ್ನತ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.