ಇತ್ತೀಚೆಗೆ ನಡೆದ ಬಹುಮುಖ್ಯ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆಹೊತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತ ಧರಣಿಗೆ ಕರೆಕೊಟ್ಟಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಭಾರತಕ್ಕೆ ಹೊರಟಿದ್ದಾರೆ. ಹೊರಡುವ ಮುನ್ನ ಟ್ವೀಟ್ ಮಾಡಿರುವ ದೀಪ್ಕೆ, “ನನ್ನ ಹಣೆಬರಹವನ್ನು ಸಂವಿಧಾನದ ಕೈಗಿಟ್ಟಿದ್ದೇನೆ” ಎಂದು ಹೇಳಿದ್ದಾರೆ.
ಅಮೆರಿಕದ ಬೋಸ್ಟನ್‌ನಲ್ಲಿರುವ ದೀಪ್ಕೆ, ಶನಿವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಅಲ್ಲಿಂದ ನೇರವಾಗಿ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಸೇರಿದಂತೆ ಹಲವರೊಂದಿಗೆ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ ಧರಣಿಗೆ ಅನುಮತಿ ಕೋರಲು ಉದ್ದೇಶಿಸಿದ್ದಾರೆ. ಆದಾಗ್ಯೂ, ಮೋದಿ ಸರ್ಕಾರ ಅವರನ್ನು ವಿಮಾನ ನಿಲ್ದಾಣದಲ್ಲಿಯೇ ಬಂಧಿಸುವ ಅಥವಾ ಗೃಹಬಂಧನದಲ್ಲಿ ಇರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ದೀಪ್ಕೆ, “ಭಾರತದೆಡೆಗೆ ನನ್ನ ಹಾದಿಯಲ್ಲಿದ್ದೇನೆ… ನನ್ನ ಭವಿಷ್ಯವನ್ನು ಸಂವಿಧಾನದ ಕೈಗೆ ಬಿಡುತ್ತಿದ್ದೇನೆ. #JaiBhim,” ಎಂದು ಪೋಸ್ಟ್ ಮಾಡಿದ್ದಾರೆ.
On my way to India…
— Abhijeet Dipke (@abhijeet_dipke) June 5, 2026
Leaving my fate in the hands of the Constitution. #JaiBhim
ಬುಧವಾರ, ಸಂಸತ್ತಿನ ಸಮೀಪವಿರುವ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆದ ಸಿಜೆಪಿಯ ಚೊಚ್ಚಲ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಮುಖ್ಯ ವಕ್ತಾರ ಸೌರವ್ ದಾಸ್, ಶನಿವಾರ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲು ಎಲ್ಲ ರಾಜಕೀಯ ಸಿದ್ಧಾಂತಗಳ ಪ್ರತಿಭಟನಾಕಾರನ್ನು ಆಹ್ವಾನಿಸಿದ್ದಾರೆ.
“ಅಭಿಜೀತ್ ದಿಪ್ಕೆ ಜಿ ಅವರು ಜೂನ್ 6 ರಂದು ಬೆಳಗ್ಗೆ 8 ಗಂಟೆಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಅವರು ತಮ್ಮ ಬೆಂಬಲಿಗರನ್ನು ವಿಮಾನ ನಿಲ್ದಾಣಕ್ಕೆ ಬಂದು ತಮ್ಮನ್ನು ಬರಮಾಡಿಕೊಳ್ಳುವಂತೆ ಕರೆ ನೀಡಿದ್ದಾರೆ. ಅಲ್ಲಿಗೆ ಬರುವ ವಾಂಗ್ಚುಕ್ ಸೇರಿದಂತೆ ನಾವೆಲ್ಲರೂ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಹೋಗಿ, ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಪೊಲೀಸರಿಂದ ಅನುಮತಿ ಕೇಳಲಿದ್ದೇವೆ” ಎಂದು ದಾಸ್ ತಿಳಿಸಿದ್ದಾರೆ.
“ಜಂತರ್ ಮಂತರ್ – ಪ್ರತಿಭಟನೆಗಾಗಿ ನಿಗದಿಪಡಿಸಲಾದ ಅಧಿಕೃತ ಸ್ಥಳ. ಆಡಳಿತ ಪಕ್ಷ ಅಥವಾ ವಿರೋಧ ಪಕ್ಷದ ಯಾವುದೇ ಸಿದ್ಧಾಂತದ ಪ್ರತಿಭಟನಾಕಾರರಿಗೂ ಇಲ್ಲಿಗೆ ಬರಲು ಮುಕ್ತ ಸ್ವಾಗತವಿದೆ. ಆದರೆ ಎಲ್ಲರೂ ತಮ್ಮ ತಮ್ಮ ಪಕ್ಷದ ಬ್ಯಾನರ್‌ಗಳಿಲ್ಲದೆ ಬರಬೇಕು. ಏಕೆಂದರೆ ಇದು ಯುವಜನರ ಸಮಸ್ಯೆ ಮತ್ತು ಯುವಜನರೇ ಈ ದೇಶದ ಅತಿ ದೊಡ್ಡ ಬಹುಸಂಖ್ಯಾತರಾಗಿದ್ದಾರೆ. ಎಲ್ಲ ರಾಜಕೀಯ ಸಿದ್ಧಾಂತಗಳ ಪ್ರತಿಯೊಬ್ಬರನ್ನೂ ಈ ಚಳುವಳಿಯ ಭಾಗವಾಗಲು ನಾವು ಆಹ್ವಾನಿಸುತ್ತೇವೆ,” ಎಂದು ಅವರು ತಿಳಿಸಿದ್ದಾರೆ.




