ಏಪ್ರಿಲ್ 7ರಂದು ಲೇಹ್ನಲ್ಲಿ “ಬಾರ್ಡರ್ ಮಾರ್ಚ್”ಗೆ ಲೇಹ್ ಅಪೆಕ್ಸ್ ಬಾಡಿ (ಎಲ್ಎಬಿ) ಮತ್ತು ಹವಾಮಾನ ಹೋರಾಟಗಾರ ಸೋನಮ್ ವಾಂಗ್ಚುಕ್ ಕರೆ ನೀಡಿದ್ದು, ಇದಕ್ಕೂ ಮುನ್ನ ಲಡಾಖ್ ಕೇಂದ್ರಾಡಳಿತ ಪ್ರದೇಶವು ಲೇಹ್ ಜಿಲ್ಲೆಯಲ್ಲಿ ಸೆಕ್ಷನ್ 144 ಅನ್ನು ವಿಧಿಸಿದೆ. ಹಾಗೆಯೇ ಮೊಬೈಲ್ ಇಂಟರ್ನೆಟ್ ವೇಗವನ್ನು 2ಜಿಗೆ ಇಳಿಸಲು ಆದೇಶಿಸಿದೆ.
ಲೇಹ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂತೋಷ್ ಸುಖದೇವ ಅವರು ಶುಕ್ರವಾರ ಲಡಾಖ್ನ ಲೇಹ್ ಜಿಲ್ಲೆಯಲ್ಲಿ ಸಿಆರ್ಪಿಸಿ 1973 ರ ಸೆಕ್ಷನ್ 144 ಅನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಶಾಂತಿ ಮತ್ತು ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟಾಗುವ ಕಾರಣವನ್ನು ನೀಡಿ ಸೆಕ್ಷನ್ 144 ವಿಧಿಸಿದ್ದಾರೆ.
ಮ್ಯಾಜಿಸ್ಟ್ರೇಟ್ ಸಂತೋಷ್ ಸುಖದೇವ ಅವರು ತಮ್ಮ ಲಿಖಿತ ಪೂರ್ವಾನುಮತಿ ಇಲ್ಲದೆ ಯಾವುದೇ ಮೆರವಣಿಗೆ, ರ್ಯಾಲಿ ಅಥವಾ ಮೆರವಣಿಗೆಯನ್ನು ನಡೆಸುವಂತಿಲ್ಲ ಎಂದು ಹೇಳಿದರು. ಹಾಗೆಯೇ ಆದೇಶದ ಉಲ್ಲಂಘನೆಯಾದರೆ ಐಪಿಸಿಯ ಸೆಕ್ಷನ್ 188 ರ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? 21 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್
“ಯಾವುದೇ ವಾಹನಗಳನ್ನು ಅಥವಾ ಇತರ ಧ್ವನಿವರ್ಧಕಗಳನ್ನು ಪ್ರಾಧಿಕಾರದಿಂದ ಪೂರ್ವಾನುಮತಿ ಇಲ್ಲದೆ ಬಳಸಬಾರದು. ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ಸಾರ್ವಜನಿಕ ಸಭೆಗೆ ಅವಕಾಶ ನೀಡಲಾಗುವುದಿಲ್ಲ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ನಡುವೆ ಲೇಹ್ ಆಡಳಿತವು ಮೊಬೈಲ್ ಇಂಟರ್ನೆಟ್ ವೇಗವನ್ನು 2ಜಿ ಮಟ್ಟಕ್ಕೆ ತಾತ್ಕಾಲಿಕವಾಗಿ ಇಳಿಸಲು ನಿರ್ಧರಿಸಿದೆ. “ತಕ್ಷಣದಿಂದ ಜಾರಿಗೆ ಬರುವಂತೆ, 3ಜಿ, 4ಜಿ, 5ಜಿ ಇಂಟರ್ನೆಟ್ ಸೇವೆ ಮತ್ತು 5ಜಿ ಸಾರ್ವಜನಿಕ ವೈ-ಫೈ ಸೌಲಭ್ಯಗಳನ್ನು ಒಳಗೊಂಡಂತೆ ಮೊಬೈಲ್ ಡೇಟಾ ಸೇವೆಗಳನ್ನು ಲೇಹ್ನಲ್ಲಿ 2ಜಿಗೆ ಇಳಿಸಲಾಗುತ್ತದೆ. ಎಪ್ರಿಲ್ 6ರ ಸಂಜೆ 5 ಗಂಟೆಯಿಂದ ಎಪ್ರಿಲ್ 7ರ ಸಂಜೆ 5 ಗಂಟೆವರೆಗೆ ಇಂಟರ್ನೆಟ್ ವೇಗ ಕಡಿತ ಮಾಡಲಾಗುತ್ತದೆ” ಎಂದು ಲಡಾಖ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಶಿವ ದರ್ಶನ್ ಸಿಂಗ್ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ನಿಮ್ಮ ಆದರ್ಶ ಅನುಸರಿಸಿ, ಭರವಸೆಗೆ ಬದ್ಧರಾಗಿರಿ: ಮೋದಿ-ಅಮಿತ್ ಶಾಗೆ ಸೋನಮ್ ವಾಂಗ್ಚುಕ್ ಮನವಿ
ಲಡಾಖ್ಗೆ ರಾಜ್ಯತ್ವ ನೀಡಲು, ಸಂವಿಧಾನದ ಆರನೇ ಪರಿಚ್ಛೇದದಡಿ ಸೇರಿಸಲು ಆಗ್ರಹಿಸಿ ಪ್ರತಿಭಟನೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಕೇಂದ್ರದೊಂದಿಗಿನ ಹಲವಾರು ಸುತ್ತಿನ ಮಾತುಕತೆ ವಿಫಲವಾಗಿದ್ದು, ಈಗ ಪ್ರತಿಭಟನೆಯ ಕಾವು ಅಧಿಕವಾಗುತ್ತಿದೆ. 2019ರ ಲೋಕಸಭೆ ಚುನಾವಣೆ ಮತ್ತು 2020 ರ ಸ್ಥಳೀಯ ಹಿಲ್ ಕೌನ್ಸಿಲ್ ಚುನಾವಣೆಯಲ್ಲಿ, ಕೇಂದ್ರಾಡಳಿತ ಪ್ರದೇಶಕ್ಕೆ 6ನೇ ಶೆಡ್ಯೂಲ್ ಅಡಿಯಲ್ಲಿ ರಕ್ಷಣೆಯ ಬಗ್ಗೆ ಬಿಜೆಪಿ ಭರವಸೆ ನೀಡಿತು. 2019ರಲ್ಲಿ ಲಡಾಖ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಗೆಲುವು ಸಾಧಿಸಿತು. ಆದರೆ ಈವರೆಗೂ ಭರವಸೆಯನ್ನು ಈಡೇರಿಸಿಲ್ಲ.