ಮೇಲ್ಜಾತಿಯ ಸದಸ್ಯರು ಬುಡಕಟ್ಟು ವ್ಯವಹಾರಗಳ ಖಾತೆಯನ್ನು ನಿರ್ವಹಿಸಬೇಕು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ವಿವಾದ ಸೃಷ್ಟಿಸಿದ್ದಾರೆ.
ದೆಹಲಿಯಲ್ಲಿ ಇಂದು ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ನಟ-ರಾಜಕಾರಣಿ ಸುರೇಶ್ ಗೋಪಿ, ಮೇಲ್ಜಾತಿಯ ನಾಯಕರು ಸಚಿವಾಲಯದ ಮೇಲ್ವಿಚಾರಣೆಯನ್ನು ವಹಿಸಿಕೊಂಡರೆ ಮಾತ್ರ ಬುಡಕಟ್ಟು ಕಲ್ಯಾಣದಲ್ಲಿ ನಿಜವಾದ ಪ್ರಗತಿ ಸಾಧ್ಯ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪತಂಜಲಿ ರಾಮದೇವ್ ವಿರುದ್ಧ ಬಂಧನ ವಾರೆಂಟ್ ಜಾರಿ
ಬುಡಕಟ್ಟು ಸಮುದಾಯದ ವ್ಯಕ್ತಿಯನ್ನು ಮಾತ್ರ ಬುಡಕಟ್ಟು ವ್ಯವಹಾರಗಳ ಸಚಿವರನ್ನಾಗಿ ಮಾಡಬೇಕು ಎಂಬುವುದು ನಮ್ಮ ದೇಶದ ಶಾಪ. ಬುಡಕಟ್ಟು ಸಮುದಾಯದ ಹೊರಗಿನ ಯಾರನ್ನಾದರೂ ಅವರ ಕಲ್ಯಾಣಕ್ಕಾಗಿ ನೇಮಿಸಬೇಕು ಎಂಬುದು ನನ್ನ ಕನಸು ಮತ್ತು ನಿರೀಕ್ಷೆಯಾಗಿದೆ. ಬ್ರಾಹ್ಮಣ ಅಥವಾ ನಾಯ್ಡು ಬುಡಕಟ್ಟು ವ್ಯವಹಾರಗಳ ಇಲಾಖೆಯ ಅಧಿಕಾರ ವಹಿಸಿಕೊಳ್ಳಲಿ. ಇದರಿಂದ ಗಮನಾರ್ಹ ಬದಲಾವಣೆ ಸಾಧ್ಯ, ಅದೇ ರೀತಿ, ಮುಂದುವರಿದ ಸಮುದಾಯಗಳ ಕಲ್ಯಾಣ ಖಾತೆಗಳನ್ನು ಬುಡಕಟ್ಟು ನಾಯಕರಿಗೆ ವಹಿಸಬೇಕು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಅಂತಹ ಬದಲಾವಣೆ ಆಗಬೇಕು ಎಂದು ಸುರೇಶ್ ಗೋಪಿ ಹೇಳಿದ್ದಾರೆ.
ಬುಡಕಟ್ಟು ವ್ಯವಹಾರಗಳ ಖಾತೆಯನ್ನು ನಿರ್ವಹಿಸುವ ಬಯಕೆ ವ್ಯಕ್ತಪಡಿಸಿದ ತ್ರಿಶೂರ್ ಸಂಸದ ಸುರೇಶ್ ಗೋಪಿ, ಈ ಕುರಿತು ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಿರುವುದಾಗಿ ಹೇಳಿದ್ದಾರೆ. ಸುರೇಶ್ ಗೋಪಿ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.