ದಾರಿ ತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ನಿರಂತರವಾಗಿ ಸುಪ್ರೀಂ ಕೋರ್ಟ್‌ನ ಚಾಟಿ ಏಟಿಗೆ ಸಿಲುಕುತ್ತಿರುವ ಪತಂಜಲಿ ಸಂಸ್ಥಾಪಕರಾದ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ, ಈಗ ತಾವು ಬೆಂಬಲ ನೀಡುತ್ತಾ ಬಂದಿರುವ ಬಿಜೆಪಿ ಆಡಳಿತವಿರುವ ಉತ್ತರಾಖಂಡದಲ್ಲಿಯೇ ದೊಡ್ಡ ಹಿನ್ನಡೆಯನ್ನು ಕಂಡಿದ್ದಾರೆ. ಉತ್ತರಾಖಂಡದಲ್ಲಿ 14 ಪತಂಜಲಿ ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಲಾಗಿದೆ.
ಆಯುರ್ವೇದ ಮತ್ತು ಯುನಾನಿ ಸೇವೆಗಳಿಗಾಗಿ ಇರುವ ಉತ್ತರಾಖಂಡ ರಾಜ್ಯ ಪರವಾನಗಿ ಪ್ರಾಧಿಕಾರವು (ಎಸ್‌ಎಲ್‌ಎ) ಔಷಧಗಳು ಮತ್ತು ಸೌಂದರ್ಯವರ್ಧಕಗಳ ನಿಯಮಗಳು, 1945ರ ನಿಯಮಗಳನ್ನು ನಿರಂತರವಾಗಿ ಉಲ್ಲಂಘಿಸಿದ ಕಾರಣದಿಂದಾಗಿ ಪತಂಜಲಿ ಆಯುರ್ವೇದ್ ಲಿಮಿಟೆಡ್ ಮತ್ತು ದಿವ್ಯ ಫಾರ್ಮಸಿಯ 14 ಉತ್ಪನ್ನಗಳಿಗೆ ಉತ್ಪಾದನಾ ಪರವಾನಗಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ ಎಂದು ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
The Uttarakhand State Licensing Authority has suspended the license of 14 Patanjali products with immediate effect. In an affidavit filed in the Supreme Court, the licensing body said that it has suspended the license of 14 products manufactured by Patanjali’s Divya Pharmacy in…
— ANI UP/Uttarakhand (@ANINewsUP) April 29, 2024
ಎಸ್‌ಎಲ್‌ಎ ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದು ದಿವ್ಯ ಫಾರ್ಮಸಿ ಮತ್ತು ಪತಂಜಲಿ ಆಯುರ್ವೇದ್ ಲಿಮಿಟೆಡ್‌ಗೆ ಈ ಸಂಬಂಧ ಏಪ್ರಿಲ್ 15, 2024 ರಂದು ಆದೇಶವನ್ನು ಹೊರಡಿಸಲಾಗಿದೆ ಎಂದು ಹೇಳಿದೆ.
ಇದನ್ನು ಓದಿದ್ದೀರಾ? ದಿನಪತ್ರಿಕೆಯಲ್ಲಿ ಕ್ಷಮಾಪಣೆಯನ್ನು ನಿಮ್ಮ ಜಾಹೀರಾತಿನಷ್ಟು ಗಾತ್ರದಲ್ಲೇ ಪ್ರಕಟಿಸಲಾಗಿದೆಯೇ: ರಾಮ್‌ದೇವ್‌ಗೆ ಸುಪ್ರೀಂ ತರಾಟೆ
ಪತಂಜಲಿಯ ಸ್ವಸಾರಿ ಗೋಲ್ಡ್, ಸ್ವಸರಿ ವತಿ, ಬ್ರಾಂಚೋಮ್, ಸ್ವಾಸರಿ ಪ್ರವಾಹಿ, ಸ್ವಾಸರಿ ಅವಲೇಹ್, ಮುಕ್ತ ವತಿ ಎಕ್ಸ್‌ಟ್ರಾ ಪವರ್, ಲಿಪಿಡೋಮ್, ಬಿಪಿ ಗ್ರಿಟ್, ಮಧುಗ್ರಿತ್, ಮಧುನಾಶಿನಿ ವಟಿ ಎಕ್ಸ್‌ಟ್ರಾ ಪವರ್, ಲಿವಾಮೃತ್ ಅಡ್ವಾನ್ಸ್, ಲಿವೋಗ್ರಿಟ್, ಐಗ್ರಿಟ್ ಗೋಲ್ಡ್, ಪತಂಜಲಿ ದೃಷ್ಟಿ ಐ ಡ್ರಾಪ್ ಪರವಾನಗಿಯನ್ನು ತಕ್ಷಣವೇ ಜಾರಿಗೆ ಬರುವಂತೆ ರದ್ದು ಮಾಡಲಾಗಿದೆ.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಸಲ್ಲಿಸಿದ ಅರ್ಜಿಯನ್ನು ಏಪ್ರಿಲ್ 10 ರಂದು ಆಲಿಸಿದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ತಪ್ಪುದಾರಿಗೆಳೆಯುವ ಜಾಹೀರಾತು ಪ್ರಕರಣದಲ್ಲಿ ಪತಂಜಲಿ ಸಂಸ್ಥೆಯ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್‌ಎಲ್‌ಎ ಅನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಇದಾದ ಬಳಿಕ ಏಪ್ರಿಲ್ 15 ಪತಂಜಲಿ ವಿರುದ್ಧ ಕ್ರಮಕ್ಕೆ ಮುಂದಾದ ಉತ್ತರಾಖಂಡ ಸರ್ಕಾರವು 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಸೋಮವಾರ ಅಫಿಡವಿಟ್ ಮೂಲಕ ಮಾಹಿತಿ ನೀಡಿದೆ.
ಇದನ್ನು ಓದಿದ್ದೀರಾ? ನೀವು ಅಷ್ಟೊಂದು ಮುಗ್ಧರೇನಲ್ಲ; ಬಾಬಾ ರಾಮ್‌ದೇವ್‌ಗೆ ಸುಪ್ರೀಂ ಕೋರ್ಟ್ ತಪರಾಕಿ
ಇನ್ನು ದಾರಿ ತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಪದೇ ಪದೇ ಅದೇ ತಪ್ಪನ್ನು ಮಾಡಿ ರಾಮ್‌ದೇವ್ ಈಗಾಗಲೇ ಸುಪ್ರೀಂ ಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಾಮ್‌ದೇವ್ ಕ್ಷಮಾಪಣೆಯನ್ನು ಸುಪ್ರೀಂ ಕೋರ್ಟ್ ಹಲವಾರು ಬಾರಿ ನಿರಾಕರಿಸಿದೆ. ಹಾಗೆಯೇ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎನ್ನುವ ಮೂಲಕ ಕಠಿಣ ಶಿಕ್ಷೆಯ ಎಚ್ಚರಿಕೆ ನೀಡಿದೆ.
ಸುಪ್ರೀಂ ತಪರಾಕಿ ಬೆನ್ನಲ್ಲೇ ಪತಂಜಲಿ ಸಂಸ್ಥೆಯು ಪತ್ರಿಕೆಗಳಲ್ಲಿ ಕ್ಷಮಾಪಣೆಯನ್ನು ಪ್ರಕಟಿಸಿದೆ. ಆದರೆ “ದಿನಪತ್ರಿಕೆಯಲ್ಲಿ ಕ್ಷಮಾಪಣೆಯನ್ನು ನಿಮ್ಮ ಜಾಹೀರಾತಿನಷ್ಟು ಗಾತ್ರದಲ್ಲೇ ಪ್ರಕಟಿಸಲಾಗಿದೆಯೇ” ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಇದನ್ನು ಓದಿದ್ದೀರಾ? ದಾರಿತಪ್ಪಿಸುವ ಜಾಹೀರಾತು ಪ್ರಕರಣ: ಮತ್ತೆ ಪತ್ರಿಕೆಗಳಲ್ಲಿ ಕ್ಷಮೆಯಾಚನೆ ಪ್ರಕಟಿಸಿದ ರಾಮ್‌ದೇವ್
“ನೀವು ದಿನಪತ್ರಿಕೆಯಲ್ಲಿ ನೀಡಿದ ಕ್ಷಮಾಪಣೆಯನ್ನು ಕತ್ತರಿಸಿ ನೀವೇ ಇಟ್ಟುಕೊಳ್ಳಿ. ಅದನ್ನು ದೊಡ್ಡದಾಗಿಸಿ ಫೋಟೊಕಾಪಿ ಮಾಡಿಕೊಳ್ಳಿ. ಅದು ನಮ್ಮನ್ನು ಮೆಚ್ಚಿಸಲಾರದು. ನಾನು ಜಾಹೀರಾತಿನ ನಿಜವಾದ ಗಾತ್ರವನ್ನು ನೋಡಲು ಬಯಸುತ್ತೇನೆ” ಎಂದು ನ್ಯಾಯಮೂರ್ತಿ ಹಿಮಾ ಕೊಹ್ಲಿ ಹೇಳಿದ್ದಾರೆ. ಅದಾದ ಒಂದು ದಿನದ ಬಳಿಕ ರಾಮ್‌ದೇವ್ ಹೆಸರು ಇರುವ ಮತ್ತೊಂದು ಜಾಹೀರಾತು ಪ್ರಕಟಿಸಲಾಗಿದೆ.
ಸುಪ್ರೀಂ ಕೋರ್ಟ್ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಪ್ರಕಟಿಸಿರುವ ಕ್ಷಮೆಯಾಚನೆಗೆ ಸಂಬಂಧಿಸಿದ ಪ್ರಕರಣವನ್ನು ಏಪ್ರಿಲ್ 30 ರಂದು ವಿಚಾರಣೆ ನಡೆಸಲಿದ್ದು ಮಂಗಳವಾರ ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.