ಲಿವ್-ಇನ್ ಸಂಬಂಧದಲ್ಲಿ ಜೊತೆಯಾಗಿ ಬದುಕುತ್ತಿದ್ದ ಮುಸ್ಲಿಂ ಯುವಕ ಮತ್ತು ಹಿಂದು ಯುವತಿಯನ್ನು ಬೇರ್ಪಡಿಸಲು ಯುವತಿಯ ಪೋಷಕರು ಯತ್ನಿಸಿದ್ದರು. ಪ್ರಕರಣವು ಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್, “ಇದು ಆಕೆಯ ಜೀವನ. ಆಕೆಯ ಭವಿಷ್ಯದ ಬಗ್ಗೆ ಆಕೆಯೇ ನಿರ್ಧರಿಸಬೇಕು” ಎಂದು ಹೇಳಿದೆ. ತನ್ನ ಬದುಕಿನ ಆಯ್ಕೆಗೆ ಯುವತಿಗೆ ಅನುಮತಿ ನೀಡಿದೆ.
ಯವಕ-ಯುವತಿಯ ಅಂತರ್ ಧರ್ಮೀಯ ಸಂಬಂಧಕ್ಕೆ ಯುವತಿಯ ಷೋಷಕರು ವಿರೋಧ ವ್ಯಕ್ತಪಡಿಸಿದ್ದರು. ಯುವಕ-ಯುವತಿಯ ಸಂಬಂಧವನ್ನು ಮುರಿದು, ಅವರಿಬ್ಬರನ್ನು ಬೇರ್ಪಡಿಸಲು ಮುಂದಾಗಿದ್ದರು. ಯುವತಿಯನ್ನು ಬಲವಂತವಾಗಿ ಚೆಂಬೂರ್ ಸರಕಾರಿ ಮಹಿಳಾ ವಸತಿ ನಿಲಯ ಕರೆದೊಯ್ಯಲಾಗಿತ್ತು. ಆಕೆಯನ್ನು ವಸತಿ ನಿಲಯದಿಂದ ಬಿಡುಗಡೆ ಮಾಡಲು ನಿರ್ದೇಶಿಸಬೇಕೆಂದು ಕೋರಿ ಯುವಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜುಷಾ ದೇಶಪಾಂಡೆ ಅವರಿದ್ದ ಪೀಠ, ತನ್ನ ಭವಿಷ್ಯದ ಬದುಕಿನ ಆಯ್ಕೆ ಯುವತಿಗೇ ಬಿಟ್ಟ ವಿಚಾರ ಎಂದು ಸಾರಿದೆ.
“ಇದು ಆಕೆಯ ಜೀವನ. ಆಕೆ ಬಯಸಿದ್ದನ್ನು ಮಾಡಲಿ. ಆಕೆಗೆ ನಾವು ಶುಭ ಹಾರೈಸಬಹುದಷ್ಟೇ. ಹೀಗೇ ಮಾಡಬೇಕೆಂದು ಒತ್ತಾಯ ಮಾಡಲು ಸಾಧ್ಯವಿಲ್ಲ. ನಾವು ಆಕೆಯನ್ನು ಪೋಷಕರ ಜೊತೆ ಹೋಗಲು ಸಿದ್ಧವೇ ಎಂದು ಕೇಳಿದ್ದೇವೆ. ಆಕೆ ತಯಾರಿಲ್ಲ. ಯುವತಿಗೆ ತನ್ನ ಯೋಗಕ್ಷೇಮದ ಬಗ್ಗೆ ತಿಳಿವಳಿಕೆ ಇರುವುದೇ ಆದರೆ ಯಾವುದೇ ಸಮಸ್ಯೆ ಇಲ್ಲ” ಎಂದು ನ್ಯಾಯಾಲಯ ತಿಳಿಸಿದೆ.