‘ಲಿವ್-ಇನ್’ ಸಂಬಂಧಗಳನ್ನು ಕೂಡ ನೋಂದಾಯಿಸಿಕೊಳ್ಳಬೇಕು. ಅದಕ್ಕಾಗಿ, ಹೊಸ ವೆಬ್ ಪೋರ್ಟಲ್ ಅನ್ನು ಪ್ರಾರಂಭಿಸಬೇಕು ಎಂದು ರಾಜಸ್ಥಾನ ಸರ್ಕಾರಕ್ಕೆ ಅಲ್ಲಿನ ಹೈಕೋರ್ಟ್ ನಿರ್ದೇಶನ ನೀಡಿದೆ.
ರಕ್ಷಣೆ ಕೋರಿ ಹಲವಾರು ‘ಲಿವ್-ಇನ್ ಸಂಬಂಧ’ದಲ್ಲಿರುವ ಸಂಗಾತಿಗಳು ಅಲ್ಲಿಸಿದ್ದ ಅರ್ಜಿಗಳನ್ನು ರಾಜಸ್ಥಾನ ಹೈಕೋರ್ಟ್ ನ್ಯಾಯಮೂರ್ತಿ ಅನ್ನಪ್ ಕುಮಾರ್ ಧಂಡ್ ಅವರಿದ್ದ ಏಕ ಸದಸ್ಯ ಪೀಠವು ವಿಚಾರಣೆ ನಡೆಸಿದೆ. “ಲಿವ್-ಇನ್ ಸಂಬಂಧಕ್ಕೆ ರಕ್ಷಣೆ ಕೊಡುವ ಕಾನೂನು ಜಾರಿಗೆ ಬರುವವರೆಗೆ, ಲಿವ್-ಇನ್ ಸಂಬಂಧಗಳನ್ನು ಸಕ್ಷಮ ಪ್ರಾಧಿಕಾರ/ನ್ಯಾಯಮಂಡಳಿಯಲ್ಲಿ ನೋಂದಾಯಿಸಬೇಕು” ಎಂದು ಹೇಳಿದೆ.
“ಹಲವಾರು ದಂಪತಿಗಳು ‘ಲಿವ್-ಇನ್’ ಸಂಬಂಧದಲ್ಲಿ ವಾಸಿಸುತ್ತಿದ್ದಾರೆ. ಅವರ ಸಂಬಂಧದ ಸ್ಥಿತಿಗೆ ಮಾನ್ಯತೆ ದೊರೆಯದ ಕಾರಣ, ಅವರು ತಮ್ಮ ಕುಟುಂಬಗಳು ಮತ್ತು ಸಮಾಜದಿಂದ ಬೆದರಿಕೆ, ಅಪಾಯಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ, ಅವರು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ರಕ್ಷಣೆ ಕೋರಿ 226ನೇ ವಿಧಿಯ ಅಡಿಯಲ್ಲಿ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸುತ್ತಿದ್ದಾರೆ. ಪರಿಣಾಮವಾಗಿ, ನ್ಯಾಯಾಲಯಗಳು ಅಂತಹ ಅರ್ಜಿಗಳು ಹೆಚ್ಛಾಗಿ ತುಂಬುತ್ತಿವೆ” ಎಂದು ಪೀಠ ಗಮನಿಸಿದೆ.
“ಲಿವ್-ಇನ್ ಸಂಬಂಧದ ಕಲ್ಪನೆಯು ವಿಶಿಷ್ಟ ಮತ್ತು ಆಕರ್ಷಕವಾಗಿ ಕಾಣಿಸಬಹುದು. ಆದರೆ, ವಾಸ್ತವದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳು ಮತ್ತು ಸವಾಲುಗಳಿವೆ. ಈ ಸಂಬಂಧದಲ್ಲಿ ಮಹಿಳೆಯ ಸ್ಥಾನಮಾನವು ಹೆಂಡತಿಯ ಸ್ಥಾನಮಾನವಲ್ಲ. ಸಾಮಾಜಿಕ ಅನುಮೋದನೆ ಅಥವಾ ಪವಿತ್ರತೆಯನ್ನು ಹೊಂದಿರುವುದಿಲ್ಲ” ಎಂದು ನ್ಯಾಯಮೂರ್ತಿ ಅನ್ನಪ್ ಕುಮಾರ್ ಹೇಳಿದ್ದಾರೆ.
“ಲಿವ್-ಇನ್-ಸಂಬಂಧದ ಒಪ್ಪಂದವನ್ನು ಸಕ್ಷಮ ಪ್ರಾಧಿಕಾರ/ನ್ಯಾಯಮಂಡಳಿಯಲ್ಲಿ ನೋಂದಾಯಿಸಬೇಕು. ಇದಕ್ಕೆ ಅಗತ್ಯ ವೆಬ್ ಪೋರ್ಟಲ್‌ಅನ್ನು ಸರ್ಕಾರ ಸ್ಥಾಪಿಸಬೇಕು. ಸಕ್ಷಮ ಪ್ರಾಧಿಕಾರವು ಲಿವ್-ಇನ್ ಸಂಬಂಧದ ದಂಪತಿಗಳು ಮತ್ತು ಅವರಿಂದ ಜನಿಸುವ ಮಕ್ಕಳ ಕುಂದುಕೊರತೆಗಳನ್ನು ಪರಿಹರಿಸುವ ಕಾರ್ಯವನ್ನೂ ಮಾಡಬೇಕು” ಎಂದು ಕೋರ್ಟ್ ಹೇಳಿದೆ.