ಲಿವ್-ಇನ್ ಸಂಬಂಧವು ಮಹಿಳೆಯರಿಗೆ ಹೆಚ್ಚು ಹಾನಿ ಮಾಡುತ್ತದೆ. ಸಂಬಂಧದಿಂದ ಬೇರ್ಪಟ್ಟಾಗ ಮಹಿಳೆಯರಿಗೆ ಸಮಸ್ಯೆಯಾಗುತ್ತದೆ. ಪುರುಷರು ಮದುವೆಯಾಗಿ ತಮ್ಮ ಜೀವನ ಮುಂದುವರಿಸುತ್ತಾರೆ. ಆದರೆ ಮಹಿಳೆಯರಿಗೆ ಜೀವನ ಸಂಗಾತಿಯನ್ನು ಹುಡುಕುವುದು ಕಷ್ಟ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಸಿದ್ಧಾರ್ಥ್ ಅವರನ್ನು ಒಳಗೊಂಡ ಏಕಸದಸ್ಯ ಪೀಠವು ಲಿವ್-ಇನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಲಿವ್-ಇನ್ ಎಂಬುದು ಮಧ್ಯಮ ವರ್ಗದ ಭಾರತೀಯ ಸಮಾಜದ ಸ್ಥಿರವಾದ ಮಾನದಂಡಗಳಿಗೆ ವಿರುದ್ಧವಾಗಿವೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಹಿಂದೂಗಳ ವಿವಾಹ ‘ಪವಿತ್ರವಾದುದ್ದು’ ವರ್ಷದಲ್ಲೇ ರದ್ದುಗೊಳಿಸಲಾಗದು: ಅಲಹಾಬಾದ್ ಹೈಕೋರ್ಟ್
“ಲಿವ್-ಇನ್ ಸಂಬಂಧ ಪರಿಕಲ್ಪನೆಯು ಮಹಿಳೆಯರ ಹಿತಾಸಕ್ತಿಗೆ ವಿರುದ್ಧವಾಗಿದೆ. ಲಿವ್-ಇನ್ ಸಂಬಂಧದ ಬಳಿಕವೂ ಪುರುಷರು ಹಲವು ಬೇರೆ ಮದುವೆಯಾಗಬಹುದು, ಬೇರೆ ಮಹಿಳೆಯೊಂದಿಗೆ ಸಂಬಂಧವೂ ಇಟ್ಟುಕೊಳ್ಳಬಹುದು. ಆದರೆ ಮಹಿಳೆಯರಿಗೆ ಬೇರೆ ಸಂಗಾತಿಯನ್ನು ಹುಡುಕುವುದು ಕಷ್ಟ” ಎಂದು ಹೇಳಿದ್ದಾರೆ.
“ಸುಪ್ರೀಂ ಕೋರ್ಟ್ ಲಿವ್-ಇನ್ ಸಂಬಂಧವನ್ನು ಕಾನೂನುಬದ್ಧಗೊಳಿಸಿದ ಬಳಿಕ ನ್ಯಾಯಾಲಯದಲ್ಲಿ ಅಂತಹ ಪ್ರಕರಣಗಳೇ ತುಂಬಿದೆ. ಈ ಪ್ರಕರಣವನ್ನು ಮಧ್ಯಮ ವರ್ಗದ ಸಮಾಜದಲ್ಲಿ ಇತ್ಯರ್ಥಪಡಿಸಲು ಸಾಧ್ಯವಾಗದ ಕಾರಣದಿಂದಾಗಿ ನ್ಯಾಯಾಲಯದವರೆಗೂ ಬರುತ್ತಿದೆ” ಎಂದು ಕೋರ್ಟ್ ತಿಳಿಸಿದೆ.
ಭಾರತೀಯ ನ್ಯಾಯ ಸಂಹಿತಾ(ಬಿಎನ್‌ಎಸ್) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಈ ಹೇಳಿಕೆ ನೀಡಿದ್ದಾರೆ. ವಿವಾಹದ ಸುಳ್ಳು ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿದ ಆರೋಪದ ಪ್ರಕರಣ ಇದಾಗಿದೆ.
ಅಲಹಾಬಾದ್ ಹೈಕೋರ್ಟ್ ನ್ಯಾಯಾಮೂರ್ತಿಗಳ ಈ ಅಭಿಪ್ರಾಯವು ಸದ್ಯ ಚರ್ಚೆಗೆ ಗ್ರಾಸವಾಗಿದೆ. ಪುರುಷರು ಹೇಗಿದ್ದರೂ ನಡೆಯುತ್ತದೆ, ಆದರೆ ಮಹಿಳೆ ಮಾತ್ರ ಸಮಾಜ ಬೆಳೆಸಿದ ನಿಯಮಗಳಿಗೆ ಬದ್ಧವಾಗಿರಬೇಕು ಎಂಬಂತಹ ಹೇಳಿಕೆ ನೀಡಿರುವುದು ವಿಷಾದನೀಯ. ಸುಪ್ರೀಂ ಕೋರ್ಟ್ ಲಿವ್-ಇನ್ ಸಂಬಂಧಗಳನ್ನು ಕಾನೂನುಬದ್ಧಗೊಳಿಸಿದೆ. ಲಿವ್-ಇನ್ ಸಂಬಂಧಗಳನ್ನು ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿಯಲ್ಲಿಯೂ ಗುರುತಿಸಲಾಗುತ್ತದೆ.
