ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆ ಬುಧವಾರವೂ ಮುಂದುವರಿದಿದೆ. ಬೆಳಗ್ಗೆಯೇ ಸಾವಿರಾರು ಪ್ರತಿಭಟನಾಕಾರರು ಸೇರಿದ್ದು, ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಇನ್ನೂ ಲಕ್ಷಾಂತರ ಮಂದಿ ದೆಹಲಿಗೆ ಬರಲಿದ್ದಾರೆ, ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಸಿಜೆಪಿ ಹೇಳಿದೆ.
ಪರಿಸ್ಥಿತಿ ಉದ್ವಿಗ್ನವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಪಶ್ಚಿಮ ಬಂಗಾಳದಿಂದ 20 ಹೆಚ್ಚುವರಿ ಸಿಆರ್‌ಪಿಎಫ್ ತುಕಡಿಗಳನ್ನು ದೆಹಲಿಗೆ ನಿಯೋಜಿಸಿದೆ. ಸಂಸತ್, ರಫಿ ಮಾರ್ಗ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬಿಗಿ ಭದ್ರತೆ ಹಾಗೂ ಬ್ಯಾರಿಕೇಡ್ ಹಾಕಲಾಗಿದೆ. ವಿದ್ಯಾರ್ಥಿ, ಯುವಜನರ ಪ್ರತಿಭಟನೆಗೆ ವಿಪಕ್ಷಗಳು ಭಾರೀ ಬೆಂಬಲ ವ್ಯಕ್ತಪಡಿಸಿವೆ. ರಾಹುಲ್ ಗಾಂಧಿ ಕೂಡ ಸಿಜೆಪಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿದ್ದಾರೆ. ಸೋಮವಾರದ ‘ಚಲೋ ಸಂಸದ್’ ಪ್ರತಿಭಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಫ್ಐಆರ್‌ಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಸಿಜೆಪಿಯನ್ನು ಬೆಂಬಲಿಸಿ ದೇಶಾದ್ಯಂತ ಪ್ರತಿಭಟನೆಗಳು ಮುಂದುವರೆದಿವೆ.




