ಆಂಧ್ರ ಪ್ರದೇಶದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೆ ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾಕ್ಕೆ ತೆರಳುವ ಹಜ್ ಯಾತ್ರೆಗೆ ಒಂದು ಲಕ್ಷ ರೂ. ನೆರವು ನೀಡುವುದಾಗಿ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
ಆಂಧ್ರದ ನಲ್ಲೂರಿನಲ್ಲಿ ಮುಸ್ಲಿಂ ಸಮುದಾಯದವರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು,ರಾಜ್ಯದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿದ್ದು, ಮೆಕ್ಕಾಗೆ ತೆರಳುವ ಪ್ರತಿ ಮುಸ್ಲಿಂ ಸಮುದಾಯದವರಿಗೂ ಒಂದು ಲಕ್ಷ ರೂ. ಆರ್ಥಿಕ ನೆರವು ನೀಡುವುದಾಗಿ ಹೇಳಿದರು.
ಹಿಂದಿನ ಟಿಡಿಪಿ ಸರ್ಕಾರ ಆಂಧ್ರ ಪ್ರದೇಶದಲ್ಲಿ ಮುಸ್ಲಿಂ ಹಬ್ಬವಾದ ರೋಟಿಯಾನ್ ಕಿ ಈದ್‌ಗೆ ರಾಜ್ಯದ ಹಬ್ಬದ ಮಾನ್ಯತೆ ನೀಡಿತ್ತು. ಟಿಡಿಪಿ ಈ ಹಿಂದೆಯೂ ಎನ್‌ಡಿಎ ಒಕ್ಕೂಟದ ಭಾಗವಾಗಿತ್ತು. ಈ ಸಂದರ್ಭದಲ್ಲಿ ಸಮುದಾಯಕ್ಕೆ ಯಾವುದೇ ರೀತಿಯ ಅನ್ಯಾಯವಾಗಲು ಬಿಟ್ಟಿರಲಿಲ್ಲ ಎಂದು ಚಂದ್ರಬಾಬು ನಾಯ್ಡು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಳ್ಳುಗಾರರನ್ನು ಸೋಲಿಸುವ ಸಮಯ ಬಂದಿದೆ; ಮತದಾರರೇ ಮುಂದಾಗಬೇಕಿದೆ
ಟಿಡಿಪಿ ಹೈದರಾಬಾದ್‌ನಲ್ಲಿ ಉರ್ದು ವಿವಿ ಸ್ಥಾಪಿಸಿದೆ. ಅಲ್ಲದೆ ಹಜ್ ಕೆಂದ್ರಗಳನ್ನು ಸ್ಥಾಪಿಸಿದೆ. ಆದರೆ ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿ ಕಳೆದ 5 ವರ್ಷಗಳಲ್ಲಿ ಒಂದೇ ಒಂದು ಮಸೀದಿಯನ್ನು ಕಟ್ಟಿಸಿಲ್ಲ ಎಂದು ನಾಯ್ಡು ಆರೋಪಿಸಿದರು.
ಆಂಧ್ರ ಪ್ರದೇಶದ 175 ವಿಧಾನಸಭೆ ಹಾಗೂ 25 ಲೋಕಸಭಾ ಕ್ಷೇತ್ರಗಳಿಗೆ ಮೇ 13 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.
