ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಬಹಿರಂಗವಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿತ್ತು. ಆದರೆ ಪಕ್ಷವು ಅಧಿಕಾರಕ್ಕೆ ಬಂದ ನಂತರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿಲ್ಲ ಎಂದು ಬಿಕೆಯು ಮುಖ್ಯಸ್ಥ ನರೇಶ್ ಟೀಕಾಯತ್ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯ ಬಗ್ಗೆ ಆಕ್ರೋಶ ಹೊರಹಾಕಿದರು.
ದೆಹಲಿಯ ಗಡಿಯಲ್ಲಿ 2020-21ರಲ್ಲಿ ನಡೆದ 13 ತಿಂಗಳ ಸುದೀರ್ಘ ಪ್ರತಿಭಟನೆಯಲ್ಲಿ ಹುತಾತ್ಮರಾದ ಸುಮಾರು 750 ರೈತರನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಿಂಚಿತ್ತು ಸ್ಮರಿಸಲಿಲ್ಲ. ಕೇಸರಿ ಪಕ್ಷವು ಸರ್ವಾಧಿಕಾರದಿಂದ ಮೆರೆಯುತ್ತಿದೆ ಎಂದು ಟೀಕಾಯತ್ ಹೇಳಿದರು.
“ಬಿಕೆಯು ದೊಡ್ಡ ಸಂಘಟನೆಯಾಗಿದ್ದು, ಇಲ್ಲಿನ ಸದಸ್ಯರು ಒಂದಲ್ಲ ಒಂದು ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾರೆ. ಕೆಲವರು ಅಭ್ಯರ್ಥಿಗಳಿಗೆ ಸಂಬಂಧಿಕರಾಗಿದ್ದರೆ, ಕೆಲವರು ಅಭ್ಯರ್ಥಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಅಥವಾ ಅವರೊಂದಿಗೆ ವೈಯಕ್ತಿಕ ಹಂತದಲ್ಲಿ ಸಂಬಂಧ ಹೊಂದಿದ್ದಾರೆ” ಎಂದು ಟೀಕಾಯತ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಯಲಾಗುತ್ತಿರುವ ಸುಳ್ಳುಗಳು, ಬೆತ್ತಲಾಗುತ್ತಿರುವ ಬಿಜೆಪಿ
“ನಾನು 2014ರ ಚುನಾವಣೆಯಲ್ಲಿ ಬಿಜೆಪಿಗೆ ಬಹಿರಂಗವಾಗಿ ಬೆಂಬಲ ನೀಡಿದ್ದೆ ಎಂದು ಹೇಳಲು ಯಾವುದೇ ಹಿಂಜರಿಕೆಯಿಲ್ಲ. ಆದರೆ ಅವರು ತಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಲಿಲ್ಲ. ಅವರು ರಾಮ ರಾಜ್ಯದ ಬಗ್ಗೆ ಮಾತನಾಡುತ್ತಾರೆ. ಅವರು ತಮ್ಮ ಮಾನದಂಡಗಳೊಂದಿಗೆ ಉತ್ತಮವಾಗಿ ಕೆಲಸ ಮಾಡಿರಬಹುದು ಆದರೆ ಬಹುತೇಕವುಗಳನ್ನು ನಿರ್ಲಕ್ಷಿಸಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದರು.
ಭಾರತದಂತ ದೊಡ್ಡ ರಾಷ್ಟ್ರದಲ್ಲಿ ಹಲವು ಸಮಸ್ಯೆಗಳಿವೆ. ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಆದರೆ ಹಲವು ಸಮಸ್ಯೆಗಳನ್ನು ಸರ್ಕಾರದಿಂದ ಕಡೆಗಣಿಸಲಾಯಿತು. ಮುಖ್ಯವಾಗಿ ರೈತರ ಸಮಸ್ಯೆಯನ್ನು ನಿರ್ಲಕ್ಷಿಸಲಾಯಿತು ಎಂದು ನರೇಶ್ ಟೀಕಾಯತ್ ಹೇಳಿದರು.
“13 ತಿಂಗಳ ರೈತರ ಹೋರಾಟದಲ್ಲಿ 750 ರೈತರು ಹುತಾತ್ಮರಾದರು. ಆದರೆ ಸರ್ಕಾರ ಹುತಾತ್ಮ ಯೋಧರನ್ನು ಸ್ಮರಿಸಲಿಲ್ಲ. ವಿಶ್ವದಾದ್ಯಂತ ಚರ್ಚಿಸಲಾದ ದೊಡ್ಡ ಚಳುವಳಿ ಇದಾಗಿತ್ತು. ಬಿಜೆಪಿಯು 10 ವರ್ಷದ ಆಡಳಿತದಲ್ಲಿ ಸರ್ವಾಧಿಕಾರದಿಂದ ಮೆರೆಯುತ್ತಿದೆ. ಹಠಮಾರಿ ವ್ಯಕ್ತಿಯೊಬ್ಬ ಏನು ಹೇಳುತ್ತಾನೊ ಅದನ್ನೆ ಮಾಡಲಾಗುತ್ತಿದೆ. ಒಂದು ದೇಶದಲ್ಲಿ ಕಾರ್ಯನಿರ್ವಹಿಸುವ ರೀತಿ ಇದಲ್ಲ. ಕೆಲವು ಬಾರಿ ಸರ್ಕಾರ ತಲೆಬಾಗಬೇಕು, ಮತ್ತು ಕೆಲವು ಬಾರಿ ಜನರು ತಲೆಬಾಗಬೇಕು. ಆಗ ಕೆಲಸ ಸುಗಮವಾಗಿ ನಡೆಯುತ್ತದೆ” ಎಂದು ಟೀಕಾಯತ್ ಹೇಳಿದರು.
“ಸರ್ಕಾರ ಸಮತೋಲನ ಕಾಯ್ದುಕೊಂಡು ಉತ್ತಮ ವಾತಾವರಣ ಕಲ್ಪಿಸಬೇಕಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಲವು ಸಮಸ್ಯೆಗಳಿವೆ. ಬಿಕೆಯುಗೆ ಹಲವರ ಬೆಂಬಲವಿದೆ. ಆದರೆ ನಮ್ಮ ಜನರಿಗೆ ಇಂತವರಿಗೆ ಮತ ನೀಡಿ ಎಂದು ಹೇಳುವುದಿಲ್ಲ. ಏ.17ರಂದು ಮಹಾ ಪಂಚಾಯತ್ ಸಭೆ ಕೈಗೊಳ್ಳಲಿದ್ದು, ಚುನಾವಣೆಯ ಬಗ್ಗೆ ಸಮಗ್ರ ನಿರ್ಧಾರ ಕೈಗೊಳ್ಳಬಹುದು” ಎಂದು ಟೀಕಾಯತ್ ತಿಳಿಸಿದರು.
ಟೀಕಾಯತ್ ಅವರ ಬಿಕೆಯು ಪ್ರಾಬಲ್ಯವುಳ್ಳ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಏ.19 ಹಾಗೂ ಏ.26 ರಂದು ಚುನಾವಣೆಗಳು ನಡೆಯಲಿದೆ.
