ಇಂಡಿಯಾ ಒಕ್ಕೂಟದಲ್ಲಿ ಕಾಂಗ್ರೆಸ್ಗೆ ಮತ್ತೊಂದು ಹಿನ್ನಡೆಯಾಗಿದ್ದು ಪಂಜಾಬ್ನಲ್ಲಿ ಆಡಳಿತ ನಡೆಸುತ್ತಿರುವ ಆಪ್ ಲೋಕಸಭಾ ಚುನಾವಣೆಯ ತನ್ನ ಎಲ್ಲ 13 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಎಎಪಿ ಕೂಡ ಇಂಡಿಯಾ ಒಕ್ಕೂಟದ ಪಾಲುದಾರ ಪಕ್ಷವಾಗಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ತನ್ನ ಸ್ವಂತ ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತದೆ ಎಂದು ಹೇಳಿದ ಕೆಲವು ಗಂಟೆಗಳಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿಕೆ ನೀಡಿದ್ದಾರೆ.
“ಪಂಜಾಬ್ನಲ್ಲಿ ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್ನೊಂದಿಗೂ ನಾವು ಮೈತ್ರಿ ಮಾಡಿಕೊಳ್ಳುವುದಿಲ್ಲ. ನಮ್ಮ ಪಕ್ಷ ರಾಜ್ಯದ ಎಲ್ಲ 13 ಲೋಕಸಭಾ ಕ್ಷೇತ್ರಗಳಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮುತ್ತದೆ” ಎಂದು ತಿಳಿಸಿದ್ದಾರೆ.
ಪಂಜಾಬ್ನ ಲೋಕಸಬಾ ಚುನಾವಣೆಯಲ್ಲಿ ಆಪ್ ಏಕಾಂಗಿಯಾಗಿ ಸ್ಪರ್ಧಿಸಲು ಪಕ್ಷದ ಮುಖ್ಯಸ್ಥ ಕೇಜ್ರೀವಾಲ್ ಕೂಡ ಅನುಮೋದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ನ ಹಠಮಾರಿ ವರ್ತನೆಯಿಂದ ಎಎಪಿ ಪಂಜಾಬ್ನಲ್ಲಿ ಮೈತ್ರಿಮಾಡಿಕೊಳ್ಳಲು ನಿರಾಕರಿಸಿದೆ ಎಂದು ಎಎಪಿ ನಾಯಕರು ತಿಳಿಸಿದ್ದಾರೆ.
ಬಂಗಾಳದಲ್ಲಿ ಟಿಎಂಸಿ ಏಕಾಂಗಿ ಸ್ಪರ್ಧೆ
ಪಶ್ಚಿಮ ಬಂಗಾಳದ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮುಖ್ಯಮಂತ್ರಿ ಹಾಗೂ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಇಂದು ಬೆಳಿಗ್ಗೆ ತಿಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಯಾವುದು ರಾಮರಾಜ್ಯ? ಗಾಂಧೀಜಿ ಹೇಳಿದ್ದೇ, ಪ್ರಧಾನಿ ಪಾಲಿಸುತ್ತಿರುವುದೇ?
“ನಾವು ನೀಡಿದ್ದ ಪ್ರಸ್ತಾಪನೆಗಳನ್ನು ಅವರು ತಿರಸ್ಕರಿಸಿದ್ದಾರೆ. ಆ ನಂತರದಲ್ಲಿ ನಾವು ಪಶ್ಚಿಮ ಬಂಗಾಳದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಅಧೀರ್ ರಂಜನ್ ಚೌಧರಿ ಅವರು ಕ್ಷೇತ್ರ ಹಂಚಿಕೆ ವಿಷಯದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಒಂದು ದಿನದ ನಂತರ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಅವಕಾಶವಾದಿ, ಕಾಂಗ್ರೆಸ್ ಪಕ್ಷವು ಯಾರ ನೆರವಿಲ್ಲದೆ ಪಶ್ಚಿಮ ಬಂಗಾಳದಲ್ಲಿ ತನ್ನ ಸ್ವಂತ ಬಲದಲ್ಲಿ ಸ್ಪರ್ಧಿಸಲಿದೆ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದರು.
ಮೂಲಗಳ ಪ್ರಕಾರ 2019ರ ಲೋಕಸಭಾ ಚುನಾವಣೆಯ ಪ್ರದರ್ಶನವನ್ನು ಗಮನಿಸಿ ಟಿಎಂಸಿಯು ಕಾಂಗ್ರೆಸ್ಗೆ ಎರಡು ಕ್ಷೇತ್ರಗಳ ಪ್ರಸ್ತಾವ ನೀಡಿತ್ತು. ಇಷ್ಟು ಕಡಿಮೆ ಕ್ಷೇತ್ರಗಳನ್ನು ನೀಡಿರುವುದಕ್ಕೆ ಎರಡೂ ಪಕ್ಷಗಳ ನಡುವೆ ವೈಮನಸ್ಸು ಏರ್ಪಟ್ಟಿತ್ತು.