ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಮತ್ತೆ ಜಟಾಪಟಿ ಶುರುವಾಗಿದ್ದು, ಕೊಲಿಜಿಯಂ ಶಿಫಾರಸ್ಸು ಮಾಡಿರುವ 70 ನ್ಯಾಯಮೂರ್ತಿಗಳ ಹೆಸರನ್ನು ಅನುಮೋದನೆ ಮಾಡದಿರುವ ಕೇಂದ್ರದ ಧೋರಣೆ ಬಗ್ಗೆ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳ ಹೆಸರುಗಳನ್ನು ತೆರವುಗೊಳಿಸುವಲ್ಲಿ ಕೇಂದ್ರವು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿರುವ ಅರ್ಜಿಗಳನ್ನು ಆಲಿಸಿದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಪೀಠವು, ಕೇಂದ್ರವು ಇನ್ನೂ ಹೈಕೋರ್ಟ್‌ಗಳ ಶಿಫಾರಸುಗಳನ್ನು ಏಕೆ ಕೊಲಿಜಿಯಂಗೆ ಕಳುಹಿಸಿಲ್ಲ ಎಂದು ಪ್ರಶ್ನಿಸಿದೆ. ಪೀಠವು ಈ ವಿಷಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿಸಿದೆ.
“10 ತಿಂಗಳ ಅವಧಿಯಿಂದ ಹೈಕೋರ್ಟ್ ಶಿಫಾರಸ್ಸು ಮಾಡಿದ 80 ಹೆಸರುಗಳು ಬಾಕಿ ಉಳಿದಿವೆ. ಕೇವಲ ಮೂಲಭೂತ ಪ್ರಕ್ರಿಯೆ ಮಾತ್ರ ನಡೆಯುತ್ತದೆ. ನಿಮ್ಮ ದೃಷ್ಟಿಕೋನವನ್ನು ತಿಳಿದುಕೊಳ್ಳಬೇಕು. ಇದರಿಂದ ಕೊಲಿಜಿಯಂ ನಿರ್ಧಾರ ತೆಗೆದುಕೊಳ್ಳಬಹುದು” ಎಂದು ನ್ಯಾಯಮೂರ್ತಿ ಕೌಲ್ ಕೇಂದ್ರವನ್ನು ಉದ್ದೇಶಿಸಿ ಹೇಳಿದರು.
ಬಾಕಿ ಉಳಿಸಿಕೊಂಡಿರುವ ಹೆಸರಿನಲ್ಲಿ 26 ನ್ಯಾಯಾಧೀಶರ ವರ್ಗಾವಣೆ ಮತ್ತು ‘ಸೂಕ್ಷ್ಮ ಹೈಕೋರ್ಟ್’ನಲ್ಲಿ ಮುಖ್ಯ ನ್ಯಾಯಮೂರ್ತಿ ನೇಮಕವು ಬಾಕಿ ಇದೆ ಎಂದು ಪೀಠ ಹೇಳಿದೆ.
“ಹೈಕೋರ್ಟ್ ಶಿಫಾರಸು ಮಾಡಿದ ಎಷ್ಟು ಹೆಸರುಗಳು ಬಾಕಿ ಉಳಿದಿವೆ ಎಂಬ ಮಾಹಿತಿ ನನ್ನ ಬಳಿ ಇದೆ” ಎಂದು ನ್ಯಾಯಮೂರ್ತಿ ಕೌಲ್ ಹೇಳಿದರು.
ಅಟಾರ್ನಿ ಜನರಲ್ ಆರ್ ವೆಂಕಟ್ರಮಣಿ ಅವರು ಪ್ರತಿಕ್ರಿಯೆ ನೀಡಲು ಒಂದು ವಾರ ಕಾಲಾವಕಾಶ ಕೋರಿದರು. ಪೀಠವು ಅವರಿಗೆ ಎರಡು ವಾರಗಳ ಕಾಲಾವಕಾಶ ನೀಡಿ ಕೇಂದ್ರದ ಸಲ್ಲಿಕೆಯೊಂದಿಗೆ ಹಿಂತಿರುಗುವಂತೆ ಕೇಳಿತು. ಅಕ್ಟೋಬರ್ 9 ರಂದು ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಯಾರು ಹಸಿದಿದ್ದರು, ಯಾವುದು ಹಳಸಿತ್ತು?
“ನಾನು ಹೇಳಲು ಬಹಳಷ್ಟು ಇದೆ, ಆದರೆ ನಾನು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ಪ್ರತಿಕ್ರಿಯೆ ನೀಡಲು ಎಜಿ ಒಂದು ವಾರ ಕಾಲಾವಕಾಶ ಕೇಳಿರುವುದರಿಂದ ನಾನು ಮೌನವಾಗಿದ್ದೇನೆ. ಆದರೆ ಮುಂದಿನ ದಿನಾಂಕದಂದು ನಾನು ಸುಮ್ಮನಿರುವುದಿಲ್ಲ” ಎಂದು ನ್ಯಾಯಮೂರ್ತಿ ಕೌಲ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ನ್ಯಾಯಾಧೀಶರ ನೇಮಕಾತಿಯು ಸುಪ್ರೀಂ ಕೋರ್ಟ್ ಮತ್ತು ಕೇಂದ್ರದ ನಡುವಿನ ವಿವಾದದ ಪ್ರಮುಖ ವಿಷಯವಾಗಿದೆ. ನ್ಯಾಯಾಧೀಶರ ಆಯ್ಕೆಯಲ್ಲಿ ಸರ್ಕಾರದ ಪಾತ್ರ ಇರಬೇಕು ಎಂದು ಕೇಂದ್ರ ಸಚಿವರು ವಾದಿಸಿದ್ದಾರೆ.
ನ್ಯಾಯಾಧೀಶರ ನೇಮಕಾತಿಯಲ್ಲಿ ಕಾರ್ಯಾಂಗದ ದೊಡ್ಡ ಪಾತ್ರವನ್ನು ನೀಡುವ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 2015 ರಲ್ಲಿ ರದ್ದುಗೊಳಿಸಿತ್ತು.
ಸುಪ್ರೀಂ ಕೋರ್ಟ್ ತೀರ್ಪು ಕಾನೂನನ್ನು ಹೇಗೆ ರದ್ದುಗೊಳಿಸಿದೆ ಎಂಬುದರ ಕುರಿತು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರ ಹೇಳಿಕೆಯಿಂದ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಸಂಘರ್ಷ ಕಳೆದ ವರ್ಷ ಉಲ್ಬಣಗೊಂಡಿತು.
ಇದಾದ ಕೆಲವು ದಿನಗಳಲ್ಲಿ, ಕೊಲಿಜಿಯಂ ನೆಲದ ಕಾನೂನಾಗಿದ್ದು, ಇದನ್ನು ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತು. ಸಮಾಜದ ಕೆಲವು ವರ್ಗಗಳು ಕೊಲಿಜಿಯಂ ವ್ಯವಸ್ಥೆಯ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದರೆ, ಅದು ದೇಶದ ಕಾನೂನಾಗಿ ಉಳಿಯುವುದಿಲ್ಲ ಎಂದು ತೀರ್ಪಿನಲ್ಲಿ ತಿಳಿಸಿತು.
ಕೊಲಿಜಿಯಂ ವ್ಯವಸ್ಥೆಯಡಿಯಲ್ಲಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಮತ್ತು ಹಿರಿಯ ನ್ಯಾಯಾಧೀಶರು ಉಚ್ಚ ನ್ಯಾಯಾಲಯಗಳು ಮತ್ತು ಸುಪ್ರೀಂ ಕೋರ್ಟ್‌ಗೆ ನೇಮಕಾತಿಗಾಗಿ ನ್ಯಾಯಾಧೀಶರ ಹೆಸರನ್ನು ಶಿಫಾರಸು ಮಾಡುತ್ತಾರೆ. ಹೆಸರುಗಳನ್ನು ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಮತ್ತು ಅದರ ಅನುಮತಿಯ ನಂತರ, ರಾಷ್ಟ್ರಪತಿಯಿಂದ ನೇಮಕಾತಿಗಳನ್ನು ಮಾಡಲಾಗುತ್ತದೆ.