ಮಧ್ಯಪ್ರದೇಶದ ಭೋಪಾಲ್‌ನಲ್ಲಿ ರೈಲ್ವೇ ಹಳಿಗಳ ಮೇಲೆ ಮೇಲುರಸ್ತೆಯನ್ನು (ಫ್ಲೈ ಓವರ್) ನಿರ್ಮಿಸಲಾಗಿದ್ದು, ಕಾಮಗಾರಿ ಪೂರ್ಣಗೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಸೇತುವೆಯು ವಿವಾದಕ್ಕೆ ಗುರಿಯಾಗಿದ್ದು, ನೆಟ್ಟಿಗರು ಸೇತುವೆ ನಿರ್ಮಿಸಿದ ಇಂಜಿನಿಯರ್ ಮತ್ತು ಬಿಜೆಪಿ ಸರ್ಕಾರವನ್ನು ಭಾರೀ ಟ್ರೋಲ್ ಮಾಡುತ್ತಿದ್ದಾರೆ.
ಭೋಪಾಲ್‌ನ ಐಶ್‌ಬಾಗ್ ಕ್ರೀಡಾಂಗಣದ ಬಳಿ ಇರುವ ರೈಲ್ವೇ ಹಳಿಗಳ ಮೇಲೆ ಮೇಲುರಸ್ತೆ ನಿರ್ಮಿಸಲಾಗಿದೆ. ಸೇತುವೆಯನ್ನು 90 ಡಿಗ್ರಿ ಲಂಬಾಕಾರದಲ್ಲಿ ನಿರ್ಮಾಣ ಮಾಡಲಾಗಿದ್ದು, ಈ ರಸ್ತೆಯಲ್ಲಿ ವಾಹನಗಳು ಚಲಿಸುವುದಾದರೂ ಹೇಗೆ ಎಂಬ ಗಂಭೀರ ಪ್ರಶ್ನೆ ವ್ಯಕ್ತವಾಗುತ್ತಿದೆ. ಅಂತೆಯೇ, ಮೇಲುರಸ್ತೆಯನ್ನು ನಿರ್ಮಾಣ ಮಾಡಿದ ಎಂಜಿನಿಯರ್ ಬಹುಶಃ ಗೇಮಿಂಗ್ ಆ್ಯಪ್ ‘ಟೆಂಪಲ್ ರನ್’ನಲ್ಲಿನ ರಸ್ತೆಗಳನ್ನು ನೋಡಿ, ಯೋಜನೆ ರೂಪಿಸಿ, ಕಾಮಗಾರಿ ನಡೆಸಿರಬಹುದು ಎಂದು ಅಪಹಾಸ್ಯ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರವನ್ನೂ ಕೂಡ ಟ್ರೋಲ್ ಮಾಡಲಾಗುತ್ತಿದೆ.
ಸೇತುವೆಯ ಮೇಲೆ ಹೋಗುವ ವಾಹನಗಳು ಸೇತುವೆಯ ಮೂಲೆ ಭಾಗಕ್ಕೆ ಹೋಗಿ, ಹಠತ್ತನೆ ತಿರುಗಿಕೊಳ್ಳಬೇಕಾಗುತ್ತದೆ. ಆ ರೀತಿಯಲ್ಲಿ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಸೇತುವೆ ಕುರಿತು ಟೀಕೆ, ಅಪಹಾಸ್ಯ, ಟ್ರೋಲ್‌ಗಳು ಹೆಚ್ಚಿದಂತೆ ಸೇತುವೆ ಕುರಿತಾಗಿ ಲೋಕೋಪಯೋಗಿ ಸಚಿವ ರಾಕೇಶ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, “ಸೇತುವೆ ವಿಚಾರವನ್ನು ಪರಿಶೀಲಿಸಲಾಗುತ್ತದೆ” ಎಂದು ಹೇಳಿದ್ದಾರೆ.
Engineering marvel of BJP in Bhopal.
— Aman Dubey (@AmanDubey_) June 11, 2025
Sharp 90° turn flyover.
They actually took 10 years to complete this engineering marvel. 😂 pic.twitter.com/SHK8bnteEf
“ಸೇತುವೆಯನ್ನು ನಿರ್ಮಿಸುವಾಗ, ಬಹಳಷ್ಟು ತಾಂತ್ರಿಕ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ ಅಂತಹ ಆರೋಪಗಳಿದ್ದರೆ, ನಾವು ಅದನ್ನು ಪರಿಶೀಲಿಸುತ್ತೇವೆ” ಎಂದು ಸಚಿವರು ಹೇಳಿದ್ದಾರೆ.
ಇನ್ನು, ಬಿಜೆಪಿ ಸರ್ಕಾರ ಮತ್ತು ಕಾಮಕಾರಿ ನಡೆಸಿದ ಎಂಜಿನಿಯರ್‌ಅನ್ನು ಟ್ರೋಲ್ ಮಾಡಿರುವ ನೆಟ್ಟಿಗರು, “ಇದು ಭೋಪಾಲ್‌ನಲ್ಲಿ ಬಿಜೆಪಿಯ ಎಂಜಿನಿಯರಿಂಗ್ ಅದ್ಭುತ. 90° ತಿರುವಿನ ಮೇಲುರಸ್ತೆಯನ್ನು ಸರಿಯಾಗಿ ನಿರ್ಮಿಸಲಾಗಿದೆ. ಈ ಎಂಜಿನಿಯರಿಂಗ್ ಅದ್ಭುತ ಕಾಮಗಾರಿಯನ್ನು ಪೂರ್ಣಗೊಳಿಸಲು ಬರೋಬ್ಬರಿ 10 ವರ್ಷಗಳು ಬೇಕಾಯಿತು” ಎಂದು ಟೀಕಿಸಿದ್ದಾರೆ.
ಅಂದಹಾಗೆ, 648 ಮೀಟರ್ ಉದ್ದ, 8.5 ಮೀಟರ್ ಅಗಲದ ಈ ಸೇತುವೆಯನ್ನು 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಮೇಲುರಸ್ತೆಯು ಮಹಾಮಾಯಿ ಕಾ ಬಾಗ್, ಪುಷ್ಪಾ ನಗರ ಹಾಗೂ ರೈಲ್ವೆ ನಿಲ್ದಾಣ ವಲಯ ಪ್ರದೇಶವನ್ನು ಭೋಪಾಲ್ ನಗರದೊಂದಿಗೆ ಸಂಪರ್ಕಿಸುವ ಸೇತುವೆಯಾಗಿದೆ. ರೈಲ್ವೇ ಕ್ರಾಸಿಂಗ್‌ಗಳಲ್ಲಿ ವಾಹನ ಸವಾರರು ದೀರ್ಘ ಕಾಯುವಿಕೆಯ ಸಮಸ್ಯೆಯನ್ನು ನಿವಾರಿಸಲು ಮೇಲುರಸ್ತೆಯನ್ನು ನಿರ್ಮಿಸಲಾಗಿದೆ