ಮನೆಯೊಂದರ ಶೌಚ ಗುಂಡಿಯಲ್ಲಿ ನಾಲ್ವರ ಮೃತದೇಹಗಳು ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ.
ಸಿಂಗ್ರೌಲಿ ಜಿಲ್ಲೆಯ ಬದೋಖರ್ ಗ್ರಾಮದಲ್ಲಿರುವ ಹರಿಪ್ರಸಾದ್ ಪ್ರಜಾಪತಿ ಎಂಬವರ ನಿವಾಸದ ಹಿಂಬದಿಯಲ್ಲಿರುವ ಶೌಚ ಗುಂಡಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ.
ಪ್ರಜಾಪತಿ ಅವರ ಮನೆಯ ಬಳಿ ಕೊಳೆತ ವಾಸನೆ ಬರುತ್ತಿದ್ದರಿಂದ ನೆರೆಹೊರೆಯವರು ಮನೆಯ ಬಳಿ ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಶೌಚ ಗುಂಡಿಯಲ್ಲಿ ಮೃತದೇಹಗಳು ಕಂಡುಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ತೆರಳಿದ್ದು, ಮೃತದೇಹಗಳನ್ನು ಹೊರ ತೆಗೆಯಲು ಪ್ರಯತ್ನಿಸುತ್ತಿದ್ದಾರೆ. ಮೃತದೇಹಗಳು ಅದೇ ಮನೆಯವರದ್ದೇ ಇರಬಹುದು. ಅವರನ್ನು ಕೊಲೆ ಮಾಡಿ, ಶೌಚ ಗುಂಡಿಯಲ್ಲಿ ಹಾಕಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
“ಶೌಚ ಗುಂಡಿಯಲ್ಲಿ ನಾಲ್ಕು ಮೃತ ದೇಹಗಳಿವೆ. ಮೃತದೇಹಗಳನ್ನು ಹೊರತೆಗೆಯುವ ಕೆಲಸ ನಡೆಯುತ್ತಿದೆ. ಶೌಚಗುಂಡಿಗೆ ಸಮಾನಾಂತರ ಗುಂಡಿ ತೋಡುವ ಮೂಲಕ ಮೃತದೇಹಗಳನ್ನು ಹೊರೆ ತೆಗೆಯಲಾಗುತ್ತದೆ. ಮೃತದೇಹಗಳನ್ನು ಹೊರ ತೆಗೆದ ನಂತರವೇ ಮೃತದೇಹಗಳ ಗುರುತು ದೃಢವಾಗಲಿದೆ. ಮೇಲ್ನೋಟಕ್ಕೆ ಆ ಮೃತದೇಹಗಳು ಮನೆಯ ಮಾಲಕರ ಕುಟುಂಬದ ಸದಸ್ಯರದ್ದೇ ಇರಬಹುದೆಂದು ಶಂಕಿಸಲಾಗಿದೆ” ಎಂದು ಸಿಂಗ್ರೌಲಿಯ ಪೊಲೀಸ್ ವರಿಷ್ಠಾಧಿಕಾರಿ ಮನೀಸ್ ಖತ್ರಿ ತಿಳಿಸಿದ್ದಾರೆ.
“ಮೃತದೇಹಗಳ ಪೈಕಿ ಒಂದು ದೇಹವು ಮನೆಯ ಮಾಲಕರ ಪುತ್ರ ಸುರೇಶ್ ಪ್ರಜಾಪತಿಯದ್ದು ಎಂಬ ಅನುಮಾನಗಳಿವೆ” ಎಂದು ಅವರು ಹೇಳಿದ್ದಾರೆ.