ಬಿಜೆಪಿ ಸದಸ್ಯನಾಗಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬನ ಮೇಲೆ ನಾಲ್ವರು ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದಿದೆ. “ನಾನು ಬಿಜೆಪಿ ಸೇರಲು ನಿರಾಕರಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಲಾಗಿದೆ” ಎಂದು ದೂರುದಾರರಾದ ಮಾನವೇಂದ್ರ ಸಿಂಗ್ ಯಾದವ್ (27) ಆರೋಪಿಸಿದ್ದಾರೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಮಿತಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-39ರ ಟೋಲ್ ಪ್ಲಾಜಾದಲ್ಲಿ ಸೋಮವಾರ ಈ ಘಟನೆ ನಡೆದಿದೆ.
ಮಾನವೇಂದ್ರ ಸಿಂಗ್ ಯಾದವ್ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಇಂಜಿನಿಯರ್‌ನ ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಧ್ಯಪ್ರದೇಶ | ಒಂದೇ ಕುಟುಂಬದ ಮೂವರು ಮಹಿಳೆಯರು, ಓರ್ವ ಬಾಲಕಿ ಬಾವಿಯಲ್ಲಿ ಶವವಾಗಿ ಪತ್ತೆ
“ಸೋಮವಾರ ಮಧ್ಯಾಹ್ನದ ಸುಮಾರಿಗೆ ನಾಲ್ಕು ಜನರು ಟೋಲ್ ಪ್ಲಾಜಾದ ಬಳಿ ಬಂದರು. ನನ್ನ ಮೊಬೈಲ್ ಫೋನ್ ನೀಡುವಂತೆ ಒತ್ತಾಯಿಸಿದರು. ಬಿಜೆಪಿ ಸದಸ್ಯರಾಗಲು ಮೊಬೈಲ್ ಫೋನ್‌ನಿಂದ ಮಿಸ್ಡ್ ಕಾಲ್ ನೀಡಬೇಕೆಂದು ಒತ್ತಾಯಿಸಿದರು” ಎಂದು ದೂರುದಾರರು ಹೇಳಿದ್ದಾರೆ.
ಈ ವೇಳೆ ಯಾದವ್ ಬಿಜೆಪಿ ಸದಸ್ಯನಾಗುವುದನ್ನು ನಿರಾಕರಿಸಿದ್ದು ಅದಕ್ಕೆ ಅವರನ್ನು ನಿಂದಿಸಲಾಗಿದೆ ಮತ್ತು ಥಳಿಸಲಾಗಿದೆ. ಅವರ ಮೊಬೈಲ್ ಫೋನ್ ಅನ್ನು ನಾಲ್ವರು ಕಿತ್ತುಕೊಂಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಯಾದವ್ ಎಫ್‌ಐಆರ್ ದಾಖಲಿಸಿದ ನಂತರ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಬಮಿತಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಛತ್ತರ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಆಗಮ್ ಜೈನ್ ಹೇಳಿದ್ದಾರೆ.
