ಮಧ್ಯಪ್ರದೇಶದ ಪೊಲೀಸರು ಪೆನ್‌ಡ್ರೈವ್‌ಗಳ ಮೊರೆಹೋಗುತ್ತಿದ್ದಾರೆ. ಅವುಗಳ ಖರೀದಿಗಾಗಿ ಭಾರೀ ಹಣ ವ್ಯಯಿಸುತ್ತಿದ್ದಾರೆ. ಮಧ್ಯಪ್ರದೇಶದಾದ್ಯಂತ ಇರುವ ಎಲ್ಲ ಪೊಲೀಸ್ ಠಾಣೆಗಳು ಪೆನ್‌ಡ್ರೈವ್ ಖರೀದಿಗಾಗಿ ತಿಂಗಳಿಗೆ ಬರೋಬ್ಬರಿ ಒಟ್ಟು 25 ಲಕ್ಷ ರೂ. ಖರ್ಚು ಮಾಡುತ್ತಿವೆ ಎಂದು ವರದಿಯಾಗಿದೆ. ಇದಕ್ಕೆ ಪ್ರಮುಖ ಕಾರಣ, ಇತ್ತೀಚೆಗೆ ಜಾರಿಯಾದ ಭಾರತೀಯ ನ್ಯಾಯ ಸಂಹಿತೆ ಎಂದು ಹೇಳಲಾಗುತ್ತಿದೆ.
ಕೇಂದ್ರ ಸರ್ಕಾರವು 2024ರಲ್ಲಿ ಭಾರತೀಯ ದಂಡ ಸಹಿಂತೆ ಬದಲಾಗಿ ಭಾರತೀಯ ನ್ಯಾಯ ಸಂಹಿತೆಯನ್ನು ಜಾರಿಗೊಳಿಸಿದೆ. ಹೊಸ ಕಾಯ್ದೆಗಳ ಅಡಿಯಲ್ಲಿ ದಾಖಲಾಗುವ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷ್ಯಾಧಾರಗಳು, ಅಪರಾಧ ಸ್ಥಳದ ದೃಶ್ಯಗಳ ಚಿತ್ರೀಕರಣ ಹಾಗೂ ವಿಧಿವಿಜ್ಞಾನ ದತ್ತಾಂಶಗಳನ್ನು ಪೆನ್‌ಡ್ರೈವ್‌ಗಳ ಮೂಲಕವೇ ಸಲ್ಲಿಸಬೇಕೆಂದು ಕಡ್ಡಾಯಗೊಳಿಸಲಾಗಿದೆ. ಅದಕ್ಕಾಗಿ, ಪೆನ್‌ಡ್ರೈವ್ ಖರೀದಿಸಬೇಕಾದ ಹೊಣೆಗಾರಿಕೆಯ ಪೊಲೀಸರ ಮೇಲೆಯೇ ಇದ್ದು, ಪೊಲೀಸರು ಪೆನ್‌ಡ್ರೈವ್ ಖರೀದಿಯ ಭರಾಟೆಯಲ್ಲಿ ತೊಡಗಿದ್ದಾರೆ.
ಪ್ರಸ್ತುತ ಮಾರುಕಟ್ಟೆಯಲ್ಲಿ 8 ಜಿಬಿ ಪೆನ್ ಡ್ರೈವ್ ಬೆಲೆ ಸುಮಾರು 300 ರೂ.ಗಳಿವೆ. ಒಂದೇ ಪ್ರಕರಣದ ತನಿಖೆಯ ಮಾಹಿತಿ ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಲು ಪದೇ ಪದೇ ಹಲವಾರು ಪೆನ್‌ಡ್ರೈನ್‌ಗಳನ್ನು ಖರೀದಿಸಬೇಕಾಗಿದೆ. ಮಾಹಿತಿ ಪ್ರಕಾರ, 2024ರ ಜುಲೈ 1ರಿಂದ 2024ರ ಸೆಪ್ಟೆಂಬರ್ 3ರವರೆಗೆ ಹೊಸ ಕಾಯ್ದೆಯಡಿ ಪ್ರತಿದಿನ ಸರಾಸರಿ 7,400 ಎಫ್‌ಐಆರ್ ಗಳಂತೆ ಒಟ್ಟು 5,56,000 ಎಫ್‌ಐಆರ್‌ಗಳು ದಾಖಲಾಗಿವೆ. ಇವುಗಳ ತನಿಖೆಗಾಗಿ ಹೆಚ್ಚಿನ ಸಂಖ್ಯೆಯ ಪೆನ್‌ಡ್ರೈವ್‌ಗಳನ್ನು ಖರೀದಿಸಬೇಕಾಗಿದೆ. ಮಧ್ಯಪ್ರದೇಶದಲ್ಲಿ ಪ್ರತಿ ತಿಂಗಳು ಪೆನ್‌ಡ್ರೈವ್ ಖರೀದಿಗಾಗಿಯೇ 25 ಲಕ್ಷ ರೂ. ವೆಚ್ಚವಾಗುತ್ತಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಈ ವರದಿ ಓದಿದ್ದೀರಾ?: ಇದು ಗ್ರಾಮಾಭಿವೃದ್ಧಿಯಲ್ಲ, ಅಪ್ಪಟ ಬಡ್ಡಿ ವ್ಯವಹಾರ – ಡಾ. ಸಂದೀಪ್ ಸಾಮೆತಡ್ಕ ನಾಯಕ್
“ನೂತನ ಕಾನೂನಿನಡಿ ವಿವಿಧ ಪ್ರಕರಣಗಳ ತನಿಖೆ ನಡೆಸುತ್ತಿದ್ದೇವೆ. ಆದರೆ, ಸಾಕ್ಷ್ಯಾಧಾರಗಳನ್ನು ಕಾಗದದ ಬದಲು ಡಿಜಿಟಲ್ ರೂಪದಲ್ಲಿ ಸಲ್ಲಿಸಬೇಕಿರುವುದರಿಂದ ಅನಿರೀಕ್ಷಿತ ವೆಚ್ಚ ಮಾಡಬೇಕಾಗಿದೆ. ಪ್ರಕರಣವೊಂದರ ಎಲ್ಲ ಸಾಕ್ಷ್ಯಾಧಾರಗಳನ್ನು ಒಟ್ಟಿಗೆ ಸಂಗ್ರಹಿಸಲು ಕನಿಷ್ಠ ಮೂರು ಪೆನ್‌ಡ್ರೈವ್‌ಗಳು ಬೇಕಾಗುತ್ತವೆ” ಎಂದು ಭೋಪಾಲ್‌ನ ಕೊತ್ವಾಲಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಬಿ.ಎಸ್ ಕಲ್ಪುರಿಯ ಹೇಳಿರುವುದಾಗಿ ವರದಿಯಾಗಿದೆ.
ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 65ಬಿ(4) ಅನ್ವಯ ಪೆನ್‌ಡ್ರೈವ್ ಸೇರಿದಂತೆ ಯಾವುದೇ ಇಲೆಕ್ಟ್ರಾನಿಕ್ ಸಾಧನವನ್ನು ಅದರ ನೈಜತೆ ಪರಿಶೀಲನೆ ಪ್ರಮಾಣ ಪತ್ರದೊಂದಿಗೆ ಸಲ್ಲಿಸಬೇಕಾಗುತ್ತದೆ. ಈ ಹಿಂದೆ, ದಾಖಲೆಗಳನ್ನು ಸಲ್ಲಿಸಲು ಸಿಡಿಗಳನ್ನು ಬಳಸಲಾಗುತ್ತಿತ್ತು. ಆದರೆ, ಸಿಡಿಗಳನ್ನು ಬಳಸುವುದು ಕಷ್ಟಕರವಾಗಿದ್ದು, ಪೆನ್‌ಡ್ರೈವ್‌ಗಳ ಬಳಕೆ ಹೆಚ್ಚಾಗಿದೆ. ಪೊಲೀಸರು ಕೂಡ ಪೆನ್‌ಟ್ರೈವ್‌ಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ.