ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಿರುವ ನಕ್ಸಲ್ ನಿಗ್ರಹ ಪಡೆಯ ಪೊಲೀಸರು ನಕ್ಸಲೀಯನೆಂದು ಭಾವಿಸಿ ಅಮಾಯಕ ಆದಿವಾಸಿ ಯುವಕನನ್ನು ಕೊಂದಿದ್ದಾರೆ. ಕಾರ್ಯಾಚರಣೆಯಲ್ಲಿ ಹತ್ಯೆಯಾಗಿರುವ ವ್ಯಕ್ತಿ ಮಾಮೋವಾದಿ ಹೋರಾಟಗಾರನಲ್ಲ, ಆತ ಆದಿವಾಸಿ ಯುವಕ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೃತ ಯುವಕನನ್ನು ಆದಿವಾಸಿ ಸಮುದಾಯದ ಹೀರನ್ ಸಿಂಗ್ ಪಾರ್ಥ ಎಂದು ಗುರುತಿಸಲಾಗಿದೆ. ಆತ ಅತ್ಯಂತ ದುರ್ಬಲ ‘ಬೈಗಾ’ ಸಮುದಾಯಕ್ಕೆ ಸೇರಿದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಅಮಾಯಕ ಆದಿವಾಸಿ ಯುವಕನ್ನು ಕೊಂದಿದ್ದಾರೆ. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ, ನ್ಯಾಯಾಂಗ ತನಿಖೆಗಳನ್ನು ನಡೆಸಬೇಕು ಎಂದು ಮಧ್ಯಪ್ರದೇಶ ಕಾಂಗ್ರೆಸ್ ಆಗ್ರಹಿಸಿದೆ.
“ಮೃತ ವ್ಯಕ್ತಿಯು ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯ ಖತಿಯಾ ಪ್ರದೇಶದಲ್ಲಿ ಇದ್ದರು. ನಕ್ಸಲೀಯರು ಆಗ್ಗಾಗೆ ಆದಿವಾಸಿಗಳೊಂದಿಗೆ ಸಂಚರಿಸುತ್ತಿರುತ್ತಾರೆ. ತನಿಖೆ ಪೂರ್ಣಗೊಂಡ ಬಳಿಕವೇ, ಆತ ನಕ್ಸಲೀಯರೊಂದಿಗೆ ಹೊಂದಿದ್ದ ಸಂಬಂಧದ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ” ಎಂದು ಬಾಲಘಾಟ್ ವಲಯದ ಪೊಲೀಸ್ ಮಹಾ ನಿರೀಕ್ಷಕ ಸಂಜಯ್ ಕುಮಾರ್ ಹೇಳಿದ್ದಾರೆ.
“ಆತ ಮಾವೋವಾದಿ ಹೋರಾಟಗಾರ ಎಂಬುದಕ್ಕೆ ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ. ಆ ಯುವಕ ಲಸಾರ ತೋಲಾ ಗ್ರಾಮದ ನಿವಾಸಿಯಾಗಿದ್ದಾರೆ ಎಂಬುದು ಮಾತ್ರವೇ ನಮಗೆ ಗೊತ್ತಾಗಿದೆ” ಎಂದು ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಬಿಚ್ಚಿಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾಯಣ್ ಸಿಂಗ್ ಪಟ್ಟಾ, “ಪಾರ್ಥ ಅವರ ಗ್ರಾಮಕ್ಕೆ ಭೇಟಿ ನೀಡಿದ್ದೆ. ಅವರ ಮಕ್ಕಳು ಹಾಗೂ ಇನ್ನಿತರ ನಿವಾಸಿಗಳೊಂದಿಗೆ ಮಾತನಾಡಿದ್ದೇನೆ. ಆದರೆ, ಗ್ರಾಮದಲ್ಲಿಯೇ ನಾನು 3 ಗಂಟೆಗೆ ಅಧಿಕ ಸಮಯ ಇದ್ದರೂ, ಪಾರ್ಥ ಅವರ ಪತ್ನಿಯನ್ನು ಭೇಟಿ ಮಾಡಲು ನನಗೆ ಪೊಲೀಸರು ಅವಕಾಶ ನೀಡಲಿಲ್ಲ. ಪೊಲೀಸರು ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯಿರುವುದಾಗಿ ಅಲ್ಲಿನ ನಿವಾಸಿಗಳು ತಿಳಿಸಿದರು. ಪಾರ್ಥ ಅವರ ಹತ್ಯೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.