ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಸಚಿವ ವಿಜಯ್ ಶಾ ವಿರುದ್ಧ ಎಸ್‌ಐಟಿ ತನಿಖೆಗೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ. ಇದಾದ ಬೆನ್ನಲ್ಲೇ ಮಧ್ಯಪ್ರದೇಶ ಪೊಲೀಸರು ತನಿಖೆಗೆ ಎಸ್‌ಐಟಿ ತಂಡವನ್ನು ರಚಿಸಿದೆ.
“ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿದ್ದ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಲು ಅವರ ಸಹೋದರಿಯನ್ನೇ ಕಳುಹಿಸಿದ್ದೆವು” ಎಂದು ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಸಚಿವ ವಿಜಯ್ ಶಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕರ್ನಲ್ ಸೋಫಿಯಾ ಖುರೇಷಿ ಅವರ ಕುರಿತು ವಿಜಯ್ ಶಾ ನೀಡಿದ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದೂರೂ ದಾಖಲಾಗಿದೆ.
ಇದನ್ನು ಓದಿದ್ದೀರಾ? ಕರ್ನಲ್ ಖುರೇಷಿ ಕುರಿತು ಅವಹೇಳನ: ಬಿಜೆಪಿ ಸಚಿವ ವಿಜಯ್ ಶಾ ವಿರುದ್ಧ ಎಸ್‌ಐಟಿ ತನಿಖೆಗೆ ಸುಪ್ರೀಂ ಆದೇಶ
ಸೋಮವಾರ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು ಈ ಪ್ರಕರಣದ ತನಿಖೆಯನ್ನು ನಡೆಸಿದ್ದು, ಮಧ್ಯಪ್ರದೇಶ ಕೇಡರ್‌ನ ಮೂವರು ಐಪಿಎಸ್ ಅಧಿಕಾರಿಗಳ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಆದೇಶಿಸಿದೆ.
ಈ ಆದೇಶದಂತೆ ಎಸ್‌ಐಟಿ ರಚಿಸಲಾಗಿದ್ದು, ಎಸ್‌ಐಟಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಪ್ರಮೋದ್ ವರ್ಮಾ, ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಕಲ್ಯಾಣ್ ಚಕ್ರವರ್ತಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ವಾಹಿನಿ ಸಿಂಗ್ ಇದ್ದಾರೆ ಎಂದು ವರದಿಯಾಗಿದೆ.
ಇನ್ನು ಮೇ 20ರ ಬೆಳಿಗ್ಗೆ 10 ಗಂಟೆಯೊಳಗೆ ಎಸ್‌ಐಟಿ ತಂಡವನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ತಿಳಿಸಿದ್ದು ಅದರಂತೆ ಮಂಗಳವಾರದೊಳಗೆ ಎಸ್‌ಐಟಿ ರಚಿಸಲಾಗಿದೆ. ಇನ್ನು ಈ ತನಿಖೆಯನ್ನು ಬಹಳ ನಿಕಟವಾಗಿ ಪರಿಶೀಲಿಸುವುದಾಗಿಯೂ ಉನ್ನತ ನ್ಯಾಯಾಲಯ ಹೇಳಿದೆ. ತನಿಖಾ ತಂಡವು ಮೇ 28ರಂದು ತನ್ನ ಮೊದಲ ವರದಿಯನ್ನು ಸಲ್ಲಿಸಬೇಕು ಎಂದೂ ಸುಪ್ರೀಂ ಕೋರ್ಟ್ ಸೂಚಿಸಿದೆ.
ಇನ್ನು ಸುಪ್ರೀಂ ಕೋರ್ಟ್ ವಿಜಯ್ ಶಾ ವಿರುದ್ಧ ವಾಗ್ದಾಳಿ ನಡೆಸಿದೆ. ಆದರೆ ಸದ್ಯ ಬಂಧನಕ್ಕೆ ತಡೆ ನೀಡಿದೆ. ಕ್ಷಮೆಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ವಿಚಾರಣೆಗೆ ಹಾಜರಾಗುವಂತೆ ವಿಜಯ್ ಶಾ ಅವರಿಗೆ ಸೂಚಿಸಿದೆ.
